'ಕಾಂಗ್ರೆಸ್ ಪಕ್ಷದ 125 ವರ್ಷಗಳ ಅರ್ಪಣೆ ಮತ್ತು ಸೇವೆ' ಎಂಬ ಆಶಯದೊಂದಿಗೆ ನವದೆಹಲಿಯ ನಡೆಯುತ್ತಿರುವ ಮಹಾಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಕರ್ನಾಟಕದ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕರ್ನಾಟಕದ ಸಿಎಂ ಅವರ ಪರಮಾಧಿಕಾರವೇ ಭಷ್ಟಾಚಾರಕ್ಕೆ ಪ್ರಮುಖ ಕಾರಣವಾಗಿದೆ. ಭ್ರಷ್ಟರ ರಾಜೀನಾಮೆ ಪಡೆಯಲು ಬಿಜೆಪಿ ಹಿಂದೇಟು ಹಾಕುತ್ತಿದೆ. ಇದುವೇ ಆ ಪಕ್ಷದ ದ್ವಂದ ನೀತಿಗೆ ಕಾರಣವಾಗಿದೆ ಎಂದು ಸೋನಿಯಾ ಟೀಕಿಸಿದರು.
ಪರೋಕ್ಷವಾಗಿ ಕರ್ನಾಟಕದ ಹಗರಣದ ಬಗ್ಗೆ ಪ್ರಸ್ತಾಪಿಸಿದ ಸೋನಿಯಾ, ಬಿಜೆಪಿ ಭ್ರಷ್ಟ ಸಚಿವರ ರಾಜೀನಾಮೆ ಪಡೆಯಲಿ ಎಂದು ಆಗ್ರಹಿಸಿದರು.
ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳೆಲ್ಲವೂ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ. ಹಗರಣ ಕೇಳಿಬಂದ ಸಚಿವರ ರಾಜೀನಾಮೆ ನಾವು ಪಡೆದಿದ್ದೇವೆ. ಅದೇ ರೀತಿ ಹಗರಣದಲ್ಲಿರುವ ಸಚಿವರ ರಾಜೀನಾಮೆ ಪಡೆಯಲು ನಿಮಗೂ ಸಾಧ್ಯವೇ ಎಂದು ಬಿಜೆಪಿಯನ್ನು ಪ್ರಶ್ನಿಸಿದರು.
ಕಳೆದ 125 ವರ್ಷಗಳಲ್ಲಿ ಕಾಂಗ್ರೆಸ್ ಹಲವು ಸಾಧನೆ ಮಾಡಿದೆ. ಪಕ್ಷದ ಇತಿಹಾಸ ನೋಡಲು ಹೆಮ್ಮೆ ಎನಿಸುತ್ತಿದೆ. ಕಾಂಗ್ರೆಸ್ ಪಕ್ಷ ಯಾವಾಗಲೂ ಬಡವರ ಪರವಾಗಿದ್ದು, ಬಡವರ ಏಳಿಗೆಗಾಗಿ ಯತ್ನಿಸುತ್ತಿದೆ. ಹಾಗೆಯೇ ಈ ಸುದೀರ್ಘ ಅವಧಿಯಲ್ಲಿ ಪಕ್ಷ ಹಲವು ಸವಾಲುಗಳನ್ನು ಎದುರಿಸಿದೆ ಎಂದವರು ಮೆಲುಕಿ ಹಾಕಿದರು.
ಕಾಂಗ್ರೆಸ್‌ಗೆ ಉತ್ತಮ ಇತಿಹಾಸವಿದೆ. ಪಕ್ಷದ ಲೋಪಗಳನ್ನು ತಿದ್ದಿಕೊಳ್ಳಬೇಕಾಗಿದ್ದು, ಬಿಹಾರ ಚುನಾವಣೆಯಿಂದ ಪಾಠ ಕಲಿಯಬೇಕು. ಇಲ್ಲಿ ನಾವು ಹೊಸ ಸಂಕಲ್ಪಗಳನ್ನು ಮಾಡಬೇಕಾಗಿದೆ. ಪ್ರಧಾನಿ ಮನಮೋಹನ್ ಸಿಂಗ್ ವಿರುದ್ಧದ ಬಿಜೆಪಿ ಟೀಕೆ ಸರಿಯಲ್ಲ ಎಂದವರು ಹೇಳಿದರು.