ದೇಶಾದ್ಯಂತ ಭ್ರಷ್ಟಾಚಾರ, ಹಗರಣಗಳು, ಇದರ ಜೊತೆಗೆ ಬೆಲೆ ಏರಿಕೆಯ ಬಿಸಿಯಿಂದ "ಆಮ್ ಆದ್ಮಿ" (ಜನಸಾಮಾನ್ಯ) ತತ್ತರಿಸುತ್ತಿರುವಂತೆಯೇ ಮಹಾಧಿವೇಶನ ನಡೆಸಿದ ಕಾಂಗ್ರೆಸ್, ಆರೆಸ್ಸೆಸ್ ಮತ್ತಿತರ ಹಿಂದೂ ಪರ ಸಂಘಟನೆಗಳ ವಿರುದ್ಧ ತನ್ನ ಆಕ್ರೋಶವನ್ನು ಬಲಗೊಳಿಸಿದ್ದು, ದೇಶದೆಲ್ಲೆಡೆ ನಡೆದ ಭಯೋತ್ಪಾದನಾ ದಾಳಿಗಳಲ್ಲಿ ಆರೆಸ್ಸೆಸ್‌ನ ಸಂಬಂಧವಿರುವ ಕುರಿತು ಕೇಂದ್ರ ಸರಕಾರವು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದೆ.
"ದೇಶಾದ್ಯಂತ ನಡೆದಿರುವ ಭಯೋತ್ಪಾದನಾ ದಾಳಿಗಳಲ್ಲಿ ಆರೆಸ್ಸೆಸ್ ಮತ್ತು ಸಂಬಂಧಪಟ್ಟ ಇತರ ಹಿಂದೂ ಸಂಘಟನೆಗಳ ಮತ್ತು ಅವುಗಳ ನಾಯಕರ ಕೈವಾಡವಿರುವ ಕುರಿತು ಕೇಂದ್ರವು ತನಿಖೆ ನಡೆಸಬೇಕು ಎಂದು ಆಗ್ರಹಿಸುತ್ತದೆ" ಎಂಬ ನಿರ್ಣಯವನ್ನು ಭಾನುವಾರ ನಡೆದ ಕಾಂಗ್ರೆಸ್ ಮಹಾಧಿವೇಶನವು ಕೈಗೊಂಡಿದೆ. ಪಕ್ಷವು ಹುಟ್ಟು ಪಡೆದು 125 ಪೂರ್ಣಗೊಂಡಿರುವುದು ಈ ಸಮಾವೇಶಕ್ಕೆ ಹೆಚ್ಚಿನ ಕಳೆ ತಂದಿತ್ತು. ಇದರೊಂದಿಗೆ, ಹಿಂದೂ ಸಂಘಟನೆಗಳ ಮೇಲೆ ಹರಿಹಾಯುತ್ತಲೇ ಇದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ದಿಗ್ವಿಜಯ್ ಸಿಂಗ್ ಮತ್ತು ಅಮೆರಿಕಕ್ಕೆ ದೂರು ನೀಡಿದ್ದ ರಾಹುಲ್ ಗಾಂಧಿ ಅವರ ವಾದಗಳಿಗೆ ನೂರಾನೆ ಬಲ ಬಂದಂತಾಗಿದೆಯಲ್ಲದೆ, ಕಾಂಗ್ರೆಸ್ ಪಕ್ಷವು ಆರೆಸ್ಸೆಸ್ ವಿರುದ್ಧ ನೇರ ಪ್ರಹಾರಕ್ಕೆ ಮುಂದಾಗಿದೆ.
ತನ್ನ ಮೇಲೆ ಮುಗಿಬಿದ್ದ ಬಿಜೆಪಿ ಮೇಲೆ ಪ್ರಹಾರ ಮಹಾಧಿವೇಶನದಲ್ಲಿ ಮಾತನಾಡಿದ ಮುಖಂಡರು ಮತ್ತು ಕೈಗೊಂಡ ನಿರ್ಣಯದಲ್ಲಿ ಹಗರಣಗಳ ಕುರಿತು ಜೆಪಿಸಿ ತನಿಖೆಗೆ ಆಗ್ರಹಿಸುತ್ತಾ, ಚಳಿಗಾಲದ ಅಧಿವೇಶನ ನಡೆಯದಂತೆ ಮಾಡಿರುವ ಬಿಜೆಪಿ ವಿರುದ್ಧ ಕಾಂಗ್ರೆಸ್ ಟೀಕಾ ಪ್ರಹಾರ ನಡೆಸಿದೆ.
ತಮ್ಮ 'ಯುವರಾಜ' ರಾಹುಲ್ ಗಾಂಧಿ ಮೇಲೆ ಬಿಜೆಪಿ ಮಂದಿ ವಾಕ್ಪ್ರಹಾರ ನಡೆಸಿರುವುದರಿಂದ ಆಕ್ರೋಶಗೊಂಡಿರುವ ಕಾಂಗ್ರೆಸ್, ತನ್ನ ನಿರ್ಣಯದಲ್ಲಿ 'ಬಿಜೆಪಿಯು ದೇಶದ ಜಾತ್ಯತೀತ ನೆಲೆಗಟ್ಟಿಗೆ ತೀವ್ರ ಬೆದರಿಕೆಯೊಡ್ಡುತ್ತಿದೆ ಮತ್ತು ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನೂ ಬುಡಮೇಲು ಮಾಡುತ್ತಿದೆ' ಎಂದು ಆರೋಪಿಸಿದೆ.
ಅಧಿವೇಶನದಲ್ಲಿ ದಿಗ್ವಿಜಯ್ ಸಿಂಗ್ ತಾರಾ ಭಾಷಣಕಾರರಾಗಿ ಮಿಂಚಿದರು. ಆರೆಸ್ಸಸ್ಸನ್ನು ಹಿಟ್ಲರ್ ಸಂಸ್ಕೃತಿಯವರು ಎಂದೆಲ್ಲಾ ಜರೆದ ಅವರು, ಆದರೆ ಕಾಂಗ್ರೆಸ್ ಪಕ್ಷಕ್ಕೆ ಎಲ್ಲದರಲ್ಲೂ ಮಹಾತ್ಮ ಗಾಂಧೀಜಿಯೇ ಪ್ರೇರಣೆ ಎಂದರು.
ಹಿಂದೂ ಭಯೋತ್ಪಾದಕರೆಲ್ಲ ಆರೆಸ್ಸೆಸ್‌ವರೇಕೆ: ಅರ್ಜುನ್ ಸಿಂಗ್ ದಿಗ್ವಿಜಯ್ ಸಿಂಗ್ ಅವರಂತೆಯೇ ಬಿಜೆಪಿ-ಆರೆಸ್ಸೆಸ್ ಮೇಲೆ ಪ್ರಹಾರ ಮಾಡುತ್ತಾ, ರೋಷಾವೇಶದ ಭಾಷಣದಿಂದ ನೆರೆದಿದ್ದ ಕಾಂಗ್ರೆಸಿಗರಿಂದ ಚಪ್ಪಾಳೆ ಗಿಟ್ಟಿಸಿದವರು ಮತ್ತೊಬ್ಬ ಹಿರಿಯ ನಾಯಕ, 'ಜಾತ್ಯತೀತ' ಮುಖಂಡ ಅರ್ಜುನ್ ಸಿಂಗ್. ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಎಲ್ಲ ಮುಸ್ಲಿಮರೂ ಭಯೋತ್ಪಾದಕರಲ್ಲ ಎಂಬುದನ್ನು ಒಪ್ಪಿದರು. ಆದರೆ ಎಲ್ಲ ಭಯೋತ್ಪಾದಕರೂ ಮುಸ್ಲಿಮರೇ ಎಂದು ಕೇಳುವವರಿಗೆ ಅವರು, "ಎಲ್ಲ ಹಿಂದೂಗಳೂ ಭಯೋತ್ಪಾದಕರಲ್ಲ, ಆದರೆ ಎಲ್ಲ ಹಿಂದು ಭಯೋತ್ಪಾದಕರೇಕೆ ಆರೆಸ್ಸೆಸ್ ಸಂಪರ್ಕ ಹೊಂದಿದ್ದಾರೆ?" ಎಂದು ಪ್ರತಿ-ಪ್ರಶ್ನೆ ಕೇಳಿದರು.