ಭ್ರಷ್ಟಾಚಾರವನ್ನು ಯಾವುದೇ ಕಾರಣಕ್ಕೂ ಸಹಿಸುವುದು ಸಾಧ್ಯವಿಲ್ಲ ಎಂದು ಕೇಂದ್ರದ ನಿಲುವನ್ನು ಸ್ಪಷ್ಟಪಡಿಸಿರುವ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್, ಭೂ ಹಗರಣಗಳಲ್ಲಿ ಸಿಲುಕಿರುವ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರನ್ನು ಮುಂದುವರಿಸಲು ನಿರ್ಧರಿಸಿರುವ ಬಿಜೆಪಿ ನಿರ್ಧಾರವನ್ನು ಪರೋಕ್ಷವಾಗಿ ಟೀಕಿಸಿದರು.
ಕಾಂಗ್ರೆಸ್ ಅಧಿವೇಶನದಲ್ಲಿ ಮಾತನಾಡುತ್ತಿದ್ದ ಅವರು, ಭ್ರಷ್ಟಾಚಾರದ ಕುರಿತ ಕಾಂಗ್ರೆಸ್ ನಿಲುವು ಸ್ಪಷ್ಟವಾಗಿದೆ. ನಾವು ಆರೋಪ ಸಾಬೀತಾಗದೇ ಇದ್ದರೂ ಸಂಶಯದ ಆಧಾರದ ಮೇಲೆ ಮುಖ್ಯಮಂತ್ರಿ ಮತ್ತು ಸಚಿವರುಗಳ ರಾಜೀನಾಮೆ ಪಡೆದಿದ್ದೇವೆ. ಆದರೆ ಬಿಜೆಪಿ ನಮ್ಮ ಮೇಲ್ಪಂಕ್ತಿಯನ್ನು ಅನುಸರಿಸಿಲ್ಲ ಎಂದು ಆರೋಪಿಸಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಅವರ ಹೆಸರನ್ನು ಉಲ್ಲೇಖಿಸದೆ ಪ್ರಧಾನಿ ಸಿಂಗ್ ವಾಗ್ದಾಳಿ ನಡೆಸಿದರು.
ನಾವು ಭ್ರಷ್ಟಾಚಾರ ಮತ್ತು ಭ್ರಷ್ಟರನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಆದರೆ ಪ್ರಮುಖ ಪ್ರತಿಪಕ್ಷ ಬಿಜೆಪಿ ಹಾಗಲ್ಲ. ಅದು ಭ್ರಷ್ಟರನ್ನು ಉಳಿಸಿಕೊಂಡಿದೆ. ಹಗರಣಗಳ ಆರೋಪ ಹೊತ್ತ ಮುಖ್ಯಮಂತ್ರಿಯ ರಾಜೀನಾಮೆಯನ್ನೇ ನಾವು ಪಡೆದಿದ್ದೇವೆ. ಆದರೆ ಬಿಜೆಪಿ ಭ್ರಷ್ಟ ಸಿಎಂರನ್ನು ಮುಂದುವರಿಸಿದೆ ಎಂದರು.
ಪಿಎಸಿ ಮುಂದೆ ಬರ್ತೇನೆ... 2ಜಿ ತರಂಗಾಂತರ ಹಂಚಿಕೆ ಹಗರಣದ ತನಿಖೆಯನ್ನು ಜಂಟಿ ಸಂಸದೀಯ ಸಮಿತಿಗೆ (ಜೆಪಿಸಿ) ಒಪ್ಪಿಸುವ ಪ್ರಶ್ನೆಯೇ ಇಲ್ಲ ಎಂದು ಮತ್ತೊಮ್ಮೆ ಸರಕಾರದ ನಿಲುವನ್ನು ಸ್ಪಷ್ಟಪಡಿಸಿರುವ ಪ್ರಧಾನಿ, ತಾನು ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ (ಪಿಎಸಿ) ಮುಂದೆ ಹಾಜರಾಗಲು ಸಿದ್ಧನಿದ್ದೇನೆ ಎಂದರು.
ಜೆಪಿಸಿ ಹೊಂದಿರುವಂತೆ ಪಿಎಸಿ ಎಲ್ಲಾ ಅಧಿಕಾರಗಳನ್ನೂ ಹೊಂದಿದೆ. ನಾನು ಜೆಪಿಸಿ ಮುಂದೆ ಹಾಜರಾಗುವುದು ಸರಕಾರಕ್ಕೆ ಇಷ್ಟವಿಲ್ಲದ ಕಾರಣ ಜೆಪಿಸಿ ತನಿಖೆಗೆ ಒಪ್ಪುತ್ತಿಲ್ಲ ಎಂದು ಬಿಜೆಪಿ ಅಪಪ್ರಚಾರ ಮಾಡುತ್ತಿದೆ ಎಂದು ಆರೋಪಿಸಿದರು.
ನಾನು ಜನತೆಯಿಂದ ಏನನ್ನೂ ಮುಚ್ಚಿಡುತ್ತಿಲ್ಲ. ಮುಚ್ಚಿಡುವ ಯಾವುದೇ ವಿಚಾರಗಳೂ ಸರಕಾರದಲ್ಲಿಲ್ಲ. 2ಜಿ ಹಗರಣ ಸಂಬಂಧ ಪ್ರತಿಪಕ್ಷದ ನಾಯಕ ಮುರಳಿ ಮನೋಹರ ಜೋಷಿಯವರ ಅಧ್ಯಕ್ಷತೆಯ ಪಿಎಸಿ ಎದುರು ನಾನು ಹಾಜರಾಗಬೇಕಾದ ನಿಯಮ ಇಲ್ಲದೇ ಇದ್ದರೂ, ನಾನು ಹಾಜರಾಗಲು ಸಿದ್ಧನಿದ್ದೇನೆ. ಆ ಬಗ್ಗೆ ಸಂತೋಷದಿಂದಲೇ ಹೇಳುತ್ತಿದ್ದೇನೆ ಎಂದು ಪ್ರಧಾನಿ ಸಿಂಗ್ ತಿಳಿಸಿದರು.