ಪ್ರಮುಖ ಪ್ರತಿಪಕ್ಷವಾಗಿರುವ ಬಿಜೆಪಿ ಮುಂದಿನ ದಶಕದಲ್ಲಿ ಸೇರಿದಂತೆ ಇನ್ಯಾವತ್ತೂ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಕಾಂಗ್ರೆಸ್ ನಾಯಕ ಹಾಗೂ ಗೃಹಸಚಿವ ಪಿ. ಚಿದಂಬರಂ ಭವಿಷ್ಯ ನುಡಿದರು.
ಕಾಂಗ್ರೆಸ್ ಅಧಿವೇಶನದ ಮುಕ್ತಾಯ ದಿನ ಮಾತನಾಡುತ್ತಿದ್ದ ಅವರು, ಮುಂದಿನ ಹತ್ತು ವರ್ಷಗಳ ಕಾಲ ಕಾಂಗ್ರೆಸ್ ಅಥವಾ ಕಾಂಗ್ರೆಸ್ ನೇತೃತ್ವದ ಸರಕಾರ ಭಾರತದ ಆಳ್ವಿಕೆ ನಡೆಸಲಿರುವ ಬಗ್ಗೆ ನನಗೆ ಯಾವುದೇ ಸಂಶಯಗಳಿಲ್ಲ ಎಂದರು.
ನಿಮ್ಮ ಸಂಖ್ಯೆಯ ಸರದಿ ಮುಂದಿನ ದಶಕ ಅಥವಾ ಯಾವತ್ತೂ ಬರುವುದಿಲ್ಲ ಎಂದು ಬಿಜೆಪಿಗೆ ಹೇಳಲು ನಾನು ಬಯಸುತ್ತಿದ್ದೇನೆ. ಮುಂದಿನ ಹತ್ತು ವರ್ಷಗಳ ಕಾಲ ನಾವೇ ಕೇಂದ್ರದಲ್ಲಿರುತ್ತೇವೆ ಎಂದು ಚಿದಂಬರಂ ಹೇಳುತ್ತಿದ್ದಂತೆ ಕಾಂಗ್ರೆಸ್ ಮುಖಂಡರು ಉತ್ಸಾಹದ ಬುಗ್ಗೆಗಳಾದರು.
ಕಾಂಗ್ರೆಸ್ ಪಕ್ಷವು ಸರಕಾರದಲ್ಲಿದ್ದಾಗ ಯಾವತ್ತೂ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ಕೊಟ್ಟಿದೆ. ದೇಶದ ಆರ್ಥಿಕ ಪ್ರಗತಿ, ಆರೋಗ್ಯ ಕ್ಷೇತ್ರದ ಸುಧಾರಣೆ, ಕಡ್ಡಾಯ ಶಿಕ್ಷಣ ಮುಂತಾದ ಅತ್ಯಗತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದರು.
ಬಿಜೆಪಿಯು ಕಾಂಗ್ರೆಸ್ ವಿರುದ್ಧ ಇಷ್ಟೊಂದು ಆಕ್ರೋಶವನ್ನು ಪ್ರದರ್ಶಿಸುತ್ತಿರುವುದು ತನಗೆ ಅಚ್ಚರಿ ತಂದಿದೆ ಎಂದಿರುವ ಚಿದಂಬರಂ, ಇದಕ್ಕಿರುವ ಎರಡು ಕಾರಣಗಳನ್ನೂ ವಿವರಿಸಿದರು. ಮೊದಲನೆಯದಾಗಿ ಕಾಂಗ್ರೆಸ್‌ನ ಚುನಾವಣೆಗಳಲ್ಲಿ ಗೆಲ್ಲುವ ಸಾಮರ್ಥ್ಯ. ಇನ್ನೊಂದು ಕಾರಣ ಕಾಂಗ್ರೆಸ್ ಮತ್ತೆ ಮತ್ತೆ ಚುನಾವಣೆಗಳಲ್ಲಿ ಗೆಲ್ಲುವ ಸಾಮರ್ಥ್ಯ ಹೊಂದಿರುವುದು ಎಂದು ಅಭಿಪ್ರಾಯಪಟ್ಟರು.
ಈ ದೇಶವನ್ನು ಐದು ವರ್ಷಗಳ ಕಾಲ ಆಳಿದ ನಂತರ ಜನರ ಬಳಿ ಹೋಗಿ ಮತ್ತೆ ಆಯ್ಕೆಯಾಗಿ ಬರುವ ಸಾಮರ್ಥ್ಯ ಹೊಂದಿರುವುದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ. ಬಿಜೆಪಿಗೆ ಸಿಕ್ಕಿದ್ದೇ ಒಂದು ಅವಕಾಶ, ಆದರೆ ಅದರಲ್ಲಿ ವಿಫಲವಾಯಿತು. ಕಾಂಗ್ರೆಸ್ ಬಗ್ಗೆ ಬಿಜೆಪಿಗೆ ಹೊಟ್ಟೆಕಿಚ್ಚು. ಮತ್ತೆ ಮತ್ತೆ ಆಯ್ಕೆಯಾಗುವುದು, ದೇಶವನ್ನು ಆಳುವುದು ಹೇಗೆಂದು ಗೊತ್ತಿರುವುದು ಕಾಂಗ್ರೆಸ್ ಪಕ್ಷಕ್ಕೆ ಎಂದು ಹೇಳಿದರು.
ಕಾಂಗ್ರೆಸ್‌ನಿಂದಾಗಿ ದೇಶವು ಅಭಿವೃದ್ಧಿ ಪಥದತ್ತ ಸಾಗುತ್ತಿರುವುದನ್ನು ಕಂಡು ಬಿಜೆಪಿ ಅಸೂಯೆಪಡುತ್ತಿದೆ ಎಂದೂ ಆರೋಪಿಸಿದರು.