ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ 1.76 ಲಕ್ಷ ಕೋಟಿ ರೂಪಾಯಿ ಮೊತ್ತದ 2ಜಿ ತರಂಗಾಂತರ ಹಂಚಿಕೆ ಹಗರಣ ಕುರಿತು ನಿನ್ನೆಯಷ್ಟೇ ಲಾಬಿಗಾರ್ತಿ ನೀರಾ ರಾಡಿಯಾಗೆ ಸಮನ್ಸ್ ಜಾರಿಗೊಳಿಸಿದ್ದ ಸಿಬಿಐ, ಇಂದು ಬೆಳಗ್ಗೆಯಿಂದಲೇ ವಿಚಾರಣೆ ಆರಂಭಿಸಿದೆ. ಇನ್ನು ಕೆಲವೇ ದಿನಗಳಲ್ಲಿ ದೂರಸಂಪರ್ಕ ಖಾತೆ ಮಾಜಿ ಸಚಿವ ಎ. ರಾಜಾ ಅವರ ವಿಚಾರಣೆಯೂ ನಡೆಯಬಹುದು ಎನ್ನಲಾಗುತ್ತಿದೆ.
PTI
ದೆಹಲಿಯ ಛತ್ತಾರ್ಪುರ್ ಎಂಬಲ್ಲಿನ ರಾಡಿಯಾ ನಿವಾಸಕ್ಕೆ ಮಂಗಳವಾರ ಬೆಳಗ್ಗೆ 9.30ಕ್ಕೆ ಸಿಬಿಐ ಅಧಿಕಾರಿಗಳು ತೆರಳಿದ್ದು, ದೂರವಾಣಿ ಕಂಪನಿಗಳ ಪರವಾಗಿ ಲಾಬಿ ನಡೆಸಿದ್ದಕ್ಕೆ ಸಂಬಂಧಪಟ್ಟ ಮಾಹಿತಿ ಪಡೆಯುವ ವಿಚಾರಣೆ ಆರಂಭಿಸಿದರು.
ಸಾಮಾನ್ಯವಾಗಿ ಇಂತಹ ವಿಚಾರಣೆ ನಡೆಸುವ ಸಂದರ್ಭದಲ್ಲಿ ಸಿಬಿಐಯು ಸಂಬಂಧಪಟ್ಟವರನ್ನು ತನ್ನ ಕಚೇರಿಗೆ ಕರೆಸಿಕೊಳ್ಳುತ್ತದೆ. ಆದರೆ ಮಹಿಳೆಯರನ್ನು ಕಚೇರಿಗೆ ಕರೆಸಿಕೊಳ್ಳುವ ಸಂಬಂಧ ಯಾವುದೇ ನಿಯಮಗಳು ಇಲ್ಲದಿರುವ ಕಾರಣ, ಅಧಿಕಾರಿಗಳು ರಾಡಿಯಾ ಮನೆಗೆ ಹೋಗಿ ವಿಚಾರಣೆ ನಡೆಸುವ ತೀರ್ಮಾನಕ್ಕೆ ಬಂದಿದ್ದಾರೆ.
ನಿನ್ನೆಯಷ್ಟೇ ಟ್ರಾಯ್ ಮಾಜಿ ಅಧ್ಯಕ್ಷ ಪ್ರದೀಪ್ ಬೈಜಾಲ್ ಅವರನ್ನು ಸಿಬಿಐ ವಿಚಾರಣೆ ನಡೆಸಿತ್ತು. ಇನ್ನುಳಿದಿರುವುದು ದೂರಸಂಪರ್ಕ ಖಾತೆಯ ಮಾಜಿ ಸಚಿವ, ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಆಪ್ತ, ಡಿಎಂಕೆ ಸಂಸದ ಎ. ರಾಜಾ.
ಅವರನ್ನು ಈ ವಾರದಲ್ಲಿ ಯಾವುದೇ ಹೊತ್ತಿನಲ್ಲಿ ವಿಚಾರಣೆಗೆ ಗುರಿ ಪಡಿಸುವ ಸಾಧ್ಯತೆಗಳಿವೆ. ಇದನ್ನು ಮನಗಂಡಿರುವ ಅವರು ನಿನ್ನೆಯೇ ಆಸ್ಪತ್ರೆಗೆ ಹೋಗಿದ್ದಾರೆ. ವೈದ್ಯಕೀಯ ಕಾರಣಗಳಿಂದಾಗಿ ವಿಚಾರಣೆಗೆ ಕಾಲಾವಕಾಶ ಬೇಕು ಎಂದು ಸಿಬಿಐಗೆ ಕೋರಿಕೆ ಸಲ್ಲಿಸಿದ್ದಾರೆ.
ನಾನೊಬ್ಬ ವಕೀಲ ಮತ್ತು ಮಾಜಿ ಕೇಂದ್ರ ಸಚಿವ. ಕಾನೂನು ಪ್ರಕ್ರಿಯೆ ಹೇಗಿರುತ್ತದೆ ಎಂಬುದು ನನಗೆ ಗೊತ್ತಿದೆ. ನಾನು ಸಿಬಿಐ ಪ್ರಧಾನ ಕಚೇರಿಯ ಜತೆ ಸಂಪರ್ಕದಲ್ಲಿದ್ದೇನೆ ಎಂದು ರಾಜಾ ಪ್ರತಿಕ್ರಿಯಿಸಿದ್ದಾರೆ.
ರಾಡಿಯಾ ನಿವಾಸ ಮತ್ತು ಕಚೇರಿಗಳಿಗೆ ಕೆಲ ದಿನಗಳ ಹಿಂದಷ್ಟೇ ದಾಳಿ ಮಾಡಿ ಅಮೂಲ್ಯ ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡಿದ್ದೆವು. ಹಾಗಾಗಿ ಅವರನ್ನು ವಿಚಾರಣೆ ನಡೆಸುವುದು ನಮಗೆ ಅಗತ್ಯವಾಗಿದೆ. ಹಗರಣದಲ್ಲಿನ ಹಣದ ವ್ಯವಹಾರದಲ್ಲಿ ಪ್ರಮುಖ ಪಾತ್ರ ವಹಿಸಿರುವ ರಾಡಿಯಾರನ್ನು ಪ್ರಶ್ನಿಸುವುದರಿಂದ ಹಲವು ವಿಚಾರಗಳು ಬಹಿರಂಗವಾಗಲಿವೆ ಎಂದು ವಿಚಾರಣೆಗೆ ತೆರಳುವ ಮೊದಲು ಸಿಬಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.