ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರೈತರಿಗಾಗಿ ಉಪವಾಸ; ನಾಯ್ಡು ನಂತರ ಜಗನ್ ಸರದಿ (YS Jaganmohan Reddy | Andhra Pradesh | hunger strike | Congress)
Bookmark and Share Feedback Print
 
ಮಳೆಯಿಂದ ಹಾನಿಗೀಡಾದ ಬೆಳೆಗೆ ಸರಕಾರ ನೀಡುತ್ತಿರುವ ಪರಿಹಾರವನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿ ತೆಲುಗು ದೇಶಂ ಪಕ್ಷದ ಅಧ್ಯಕ್ಷ ಎನ್. ಚಂದ್ರಬಾಬು ನಾಯ್ಡು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವಂತೆ, ಅತ್ತ ಬಂಡಾಯ ನಾಯಕ ವೈ.ಎಸ್. ಜಗನ್ ಮೋಹನ್ ರೆಡ್ಡಿ ಕೂಡ ಅದೇ ಹಾದಿ ತುಳಿದಿದ್ದಾರೆ.

ಕೃಷ್ಣಾ ನದಿ ತಟದಲ್ಲಿ ಅವರು 'ಲಕ್ಷ್ಯ ದೀಕ್ಷಾ' ಎಂಬ ಹೆಸರಿನಲ್ಲಿ ರೈತರಿಗಾಗಿ 48 ಗಂಟೆಗಳ ಉಪವಾಸಕ್ಕೆ ಮಂಗಳವಾರ ಬೆಳಗ್ಗೆ ಚಾಲನೆ ನೀಡಿದ್ದಾರೆ. ಇದು ಬುಧವಾರ ರಾತ್ರಿಯವರೆಗೂ ಮುಂದುವರಿಯಲಿದೆ.

ಇಂದು ತನ್ನ 37ನೇ ಹುಟ್ಟುಹಬ್ಬವನ್ನು ಕೂಡ ಆಚರಿಸಿಕೊಳ್ಳುತ್ತಿರುವ ಜಗನ್, ಇದೇ ತಿಂಗಳು ರಾಜ್ಯದಾದ್ಯಂತ ಸುರಿದ ಭಾರೀ ಮಳೆಯಿಂದಾಗಿ ರೈತರು ನಷ್ಟಕ್ಕೊಳಗಾಗಿದ್ದಾರೆ; ಅವರಿಗೆ ಸೂಕ್ತ ರೀತಿಯಲ್ಲಿ ಪರಿಹಾರ ವಿತರಿಸಬೇಕು ಎಂದು ಆಗ್ರಹಿಸಿದರು.

ಇಂದು ಮುಂಜಾನೆ ಕರ್ನೂಲ್ ಜಿಲ್ಲೆಯ ನಂಡ್ಯಾಲ್‌ನಿಂದ ವಿಜಯವಾಡಕ್ಕೆ ಆಗಮಿಸಿದ ಜಗನ್, ಕನಕ ದುರ್ಗಾ ದೇಗುಲಕ್ಕೆ ತೆರಳಿ ದೇವಿ ದರ್ಶನ ಪಡೆದ ನಂತರ ತನ್ನ ಉಪವಾಸ ಸತ್ಯಾಗ್ರಹಕ್ಕೆ ಚಾಲನೆ ನೀಡಿದರು.

ಜಗನ್ ಹೋರಾಟಕ್ಕೆ ಹಲವು ಶಾಸಕರು, ವಿಧಾನ ಪರಿಷತ್ ಸದಸ್ಯರು, ಮಾಜಿ ಶಾಸಕರು ಮತ್ತು ಕೆಲವು ಚಿತ್ರತಾರೆಗಳು ಬೆಂಬಲ ಸೂಚಿಸಿದ್ದಾರೆ. ಜತೆಗೆ ಕೃಷ್ಣಾ, ಗುಂಟೂರು, ಪಶ್ಚಿಮ ಗೋದಾವರಿ ಮತ್ತಿತರ ಜಿಲ್ಲೆಗಳಿಂದ ಭಾರೀ ಸಂಖ್ಯೆಯಲ್ಲಿ ಬಂದಿರುವ ಜನತೆ, ಜಗನ್‌ಗೆ ಬೆನ್ನೆಲುಬಾಗಿ ನಿಲ್ಲುವುದಾಗಿ ಘೋಷಿಸಿದರು.

ಇದಕ್ಕೂ ಮೊದಲು ಜಗನ್ ತನ್ನ ಬೆಂಬಲಿಗ ಶಾಸಕರ ಜತೆ ಸರಕಾರಿ ಅತಿಥಿ ಗೃಹದಲ್ಲಿ ಗುಪ್ತ ಸಮಾಲೋಚನೆ ನಡೆಸಿದರು.

ಬಲಿನೇನಿ ಶ್ರೀನಿವಾಸ ರೆಡ್ಡಿ, ಜಯಸುಧಾ ಕಪೂರ್, ಜಿ. ಶ್ರೀಕಾಂತ್ ರೆಡ್ಡಿ, ಕೊಂಡ ಸುರೇಖಾ, ಅಲ್ಲ ನೇನಿ, ಎನ್. ಪ್ರಸನ್ನ ಕುಮಾರ್ ರೆಡ್ಡಿ, ದ್ವರಂಪುಡಿ ಚಂದ್ರಶೇಖರ್ ರೆಡ್ಡಿ, ಗುರುನಾಥ ರೆಡ್ಡಿ, ರಾಮಚಂದ್ರ ರೆಡ್ಡಿ ಮುಂತಾದ ಶಾಸಕರು, ಪುಲ್ಲ ಪದ್ಮಾವತಿ, ಕೊಂಡ ಮುರಳಿ, ಜುಪುಡಿ ಪ್ರಭಾಕರ್ ಮುಂತಾದ ವಿಧಾನ ಪರಿಷತ್ ಸದಸ್ಯರು ಜಗನ್ ಜತೆ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದಾರೆ.

ನಟಿ ರೋಜಾ, ನಟರಾದ ವಿಜಯಚಂದರ್, ಧರ್ಮವರಪು ಸುಬ್ರಮಣ್ಯನ್, ಮಾಜಿ ಸಚಿವ ಕೊನತಾಲಾ ರಾಮಕೃಷ್ಣ, ಎನ್‌ಟಿಆರ್ ಪತ್ನಿ ಲಕ್ಷ್ಮಿ ಪಾರ್ವತಿ ಮತ್ತಿತರರು ಕೂಡ ಜಗನ್ ಜತೆ ಇಂದು ಬೆಳಗ್ಗೆ ಕಾಣಿಸಿಕೊಂಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ