ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರುಚಿಕಾ ಪ್ರಕರಣದಲ್ಲಿ ಸಾಕ್ಷಿಯ ಹೇಳಿಕೆ ತಿರುಚಿದ ಸಿಬಿಐ? (CBI | Ruchika Girhotra | Vijay Dheer | SPS Rathore)
Bookmark and Share Feedback Print
 
ಸ್ವತಃ ಸಾಕಷ್ಟು ಆರೋಪಗಳನ್ನು ಎದುರಿಸುತ್ತಿರುವ ಸಿಬಿಐ ಬಗ್ಗೆ ಜನತೆ ಮತ್ತೊಮ್ಮೆ ಶಂಕಿಸುವಂತಾಗಿದೆ. ಬಾಲಕಿ ರುಚಿಕಾ ಗಿರೋತ್ರಾ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಾನು ನೀಡಿದ್ದ ಹೇಳಿಕೆಯನ್ನು ಸಿಬಿಐ ತಿರುಚಿದೆ ಎಂದು ಸಾಕ್ಷಿ ಆರೋಪಿಸಿರುವುದೇ ಪ್ರಸಕ್ತ ವಿದ್ಯಮಾನ.

ಹರ್ಯಾಣದ ಮಾಜಿ ಪೊಲೀಸ್ ಅಧಿಕಾರಿ ಎಸ್‌ಪಿಎಸ್ ರಾಥೋಡ್ ಅವರಿಂದ ಲೈಂಗಿಕ ಕಿರುಕುಳಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದ ಗಿರೋತ್ರಾ ಮನೆಯ ಎದುರುಗಡೆ ಮನೆಯ ವಿಜಯ್ ಧೀರ್ ಎಂಬವರೇ ಈ ಆರೋಪವನ್ನು ಮಾಡಿದವರು. ಇದೇ ವರ್ಷದ ಫೆಬ್ರವರಿಯಲ್ಲಿ ತಾನು ಸಿಬಿಐಗೆ ಹೇಳಿಕೆ ನೀಡಿದ್ದೆ. ಆದರೆ ಅದನ್ನು ಸಿಬಿಐ ತನ್ನ ವರದಿಯಲ್ಲಿ ತಿರುಚಿದೆ ಮತ್ತು ಸುಳ್ಳು ಹೇಳಿದೆ ಎಂದು ವಿಜಯ್ ತಿಳಿಸಿದ್ದಾರೆ.

1993ರ ಡಿಸೆಂಬರ್ 25ರಂದು ರುಚಿಕಾಳ ಸಹೋದರ ಆಶುವಿಗೆ ಕೈಕೋಳ ತೊಡಿಸಿ, ಅರೆ ಬೆತ್ತಲೆಯಾಗಿ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಹರ್ಯಾಣ ಪೊಲೀಸರು ಆಶುವನ್ನು ತೀವ್ರವಾಗಿ ಥಳಿಸಿದ್ದರು. ಈ ಘಟನೆಯನ್ನು ನೋಡಿದ ಪ್ರತ್ಯಕ್ಷದರ್ಶಿಯಾಗಿದ್ದ ನನ್ನ ಹೇಳಿಕೆಯನ್ನು ಸಿಬಿಐ ದಾಖಲಿಸಿಕೊಂಡಿತ್ತು ಎಂದು ವಿಜಯ್ ತಿಳಿಸಿದರು.

ಆದರೆ ಸಿಬಿಐ ತನ್ನ ಅಂತಿಮ ವರದಿಯಲ್ಲಿ ಆ ಹೇಳಿಕೆಯನ್ನು ತಿದ್ದುಪಡಿ ಮಾಡಿ, ಸಂಪೂರ್ಣವಾಗಿ ತದ್ವಿರುದ್ಧ ವರದಿಯನ್ನು ನೀಡಿದೆ.

ಅದರ ಪ್ರಕಾರ, 1993ರ ಡಿಸೆಂಬರ್ ತಿಂಗಳಲ್ಲಿ ಯಾವತ್ತೂ ಹರ್ಯಾಣ ಪೊಲೀಸರು ಆಶುವಿನ ಕೈಗೆ ಕೈಕೋಳಗಳನ್ನು ಹಾಕಿ, ಬೀದಿಗಳಲ್ಲಿ ಅರೆ ಬೆತ್ತಲೆ ಮೆರವಣಿಗೆ ನಡೆಸಿದ್ದನ್ನು ನಾವು ನೋಡಿಲ್ಲ ಅಥವಾ ಕೇಳಿಲ್ಲ ಎಂದು ಪಂಚಕುಲಾದ ಸೆಕ್ಟರ್ 6 ಮಾರುಕಟ್ಟೆಯ ಅಂಗಡಿ ಮಾಲೀಕರು ತಿಳಿಸಿದ್ದಾರೆ. ಡಿಸೆಂಬರ್ 25ರಂದು ಆಶುವನ್ನು ಬೆತ್ತಲೆ ಮೆರವಣಿಗೆ ಮಾಡಿದ್ದಾರೆ ಎಂಬುದನ್ನು ನೋಡಿದ್ದೇವೆ ಎಂಬುದನ್ನು ಗಿರೋತ್ರಾ ನೆರೆಮನೆಯವರು ಕೂಡ ನಿರಾಕರಿಸಿದ್ದಾರೆ ಎಂದಿದೆ.

ಸಿಬಿಐ ಪ್ರಕಟಿಸಿರುವ 76 ಸಾಕ್ಷಿಗಳ ಪಟ್ಟಿಯಲ್ಲಿ ವಿಜಯ್ ಧೀರ್ 71ನೇ ಸ್ಥಾನದಲ್ಲಿದ್ದಾರೆ.

ಸಿಬಿಐ ತನಿಖೆಯಿಂದ ಇಂತಹ ಫಲಿತಾಂಶ ಹೊರ ಬಿದ್ದಿರುವುದಕ್ಕೆ ರುಚಿಕಾ ತಂದೆ ತೀವ್ರ ನಿರಾಸೆ ವ್ಯಕ್ತಪಡಿಸಿದ್ದಾರೆ. ರಾಥೋಡ್‌ಗೆ ನಿರಾಳತೆಯನ್ನು ಒದಗಿಸಲು ಸಿಬಿಐ ಯತ್ನಿಸಿರುವುದು ತನಿಖೆಯಿಂದ ತಿಳಿದು ಬರುತ್ತದೆ ಎಂದು ಅವರು ಹೇಳಿದ್ದಾರೆ.

ಸಿಬಿಐಯ ತಾರತಮ್ಯ ನೀತಿಯ ತನಿಖೆಯನ್ನು ಆಕ್ಷೇಪಿಸಿ ನಾನು ಇದೇ ವರ್ಷದ ಫೆಬ್ರವರಿ ತಿಂಗಳಲ್ಲಿ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿದ್ದೆ. ಆದರೆ ಇದರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಗೃಹ ಸಚಿವಾಲಯದ ವಿಶೇಷ ಕಾರ್ಯದರ್ಶಿಯವರು ನನಗೆ ಭರವಸೆಯನ್ನೂ ನೀಡಿದ್ದರು ಎಂದು ಎಸ್.ಸಿ. ಗಿರೋತ್ರಾ ತಿಳಿಸಿದ್ದಾರೆ.

ಹರ್ಯಾಣದ ಮಾಜಿ ಡಿಜಿಪಿ ರಾಥೋಡ್ ವಿರುದ್ಧ ದಾಖಲಾಗಿದ್ದ ಎರಡು ಎಫ್ಐಆರ್‌ಗಳಿಗೆ ಸಂಬಂಧಪಟ್ಟಂತೆ ತನಿಖೆ ನಡೆಸಿದ್ದ ಸಿಬಿಐ, ಇತ್ತೀಚೆಗಷ್ಟೇ ತನ್ನ ಅಂತಿಮ ವರದಿಯನ್ನು ಸಿಬಿಐ ನ್ಯಾಯಾಲಯಕ್ಕೆ ಸಲ್ಲಿಸಿತ್ತು.
ಸಂಬಂಧಿತ ಮಾಹಿತಿ ಹುಡುಕಿ