ಮೊಬೈಲ್ ಈಗ ಪ್ರತಿಯೊಬ್ಬರ ಬದುಕಿನ ಅವಿಭಾಜ್ಯ ಅಂಗವಾಗಿ ಹೋಗಿದೆ. ಪ್ರೇಮಿಯನ್ನಾದರೂ ಬಿಟ್ಟೇನು, ಆದರೆ ಮೊಬೈಲನ್ನು ಅಲ್ಲ ಎಂಬ ಸ್ಥಿತಿಗೆ ತಲುಪಿರುವುದೂ ಗೊತ್ತೇ ಇದೆ. ಈ ನಡುವೆ ವಿವಾಹೇತರ ಸಂಬಂಧಗಳು, ವಿವಾಹಪೂರ್ವ ಸಂಬಂಧಗಳಿಗೂ ಮೊಬೈಲ್ ಕಾರಣವಾಗುತ್ತಿರುವ ಕುರಿತು ತೀವ್ರ ಕಳವಳಗಳು ಎದ್ದಿವೆ.
ಮಾರುಕಟ್ಟೆಯಲ್ಲಿ ಅಗ್ಗದ ದರದಲ್ಲಿ ಸಿಗುತ್ತಿರುವ ಮೊಬೈಲುಗಳು, ಉಚಿತವಾಗಿ ಸಿಗುವ ಸಿಮ್ ಕಾರ್ಡುಗಳು, ಅಕ್ರಮ ಸಂಬಂಧಗಳ ಹೆಚ್ಚಳಕ್ಕೆ, ಹದಿಹರೆಯದವರ ಚೆಲ್ಲಾಟಗಳಿಗೆ ಒಂದು ರೀತಿಯಲ್ಲಿ ಕಾರಣವಾಗುತ್ತಿವೆ. ಗಂಡ-ಹೆಂಡತಿ ನಡುವಿನ ವಿರಸಕ್ಕೂ ಇದೊಂದು ಹೊಸ ಸೇರ್ಪಡೆ. ಯಾರ ಮೆಸೇಜ್ ಬಂದರೂ, ಮಿಸ್ಡ್ ಕಾಲ್ ಬಂದರೂ, ಅದು ಯಾರದ್ದು ಎಂಬ ಸಂಶಯ.
ಈಶಾನ್ಯದ ಕ್ರೈಸ್ತರು ಬಹುಸಂಖ್ಯಾತರಾಗಿರುವ ಮಿಜೋರಾಮ್‌ನಲ್ಲಿ ಮೇಲೆ ಹೇಳಿದ ಎರಡೂ ವಿಚಾರಗಳು ದೇಶದ ಇತರೆಡೆಗಿಂತ ಹೆಚ್ಚು. ಅಲ್ಲಿ ಹೆಚ್ಚಿನವರಲ್ಲಿ ಮೊಬೈಲುಗಳಿವೆ ಮತ್ತು ಅರ್ಧಕ್ಕೂ ಹೆಚ್ಚು ಮಂದಿ ವಿವಾಹಪೂರ್ವ ಲೈಂಗಿಕ ಸಂಪರ್ಕಕ್ಕೊಳಗಾಗಿರುತ್ತಾರೆ ಎಂದು ಇತ್ತೀಚೆಗಷ್ಟೇ ಒಂದು ಸಮೀಕ್ಷೆ ಹೇಳಿತ್ತು.
ಇದೀಗ ಮಿಜೋರಾಂನ ಚರ್ಚ್ ಕೂಡ ಇದನ್ನು ಪುನರುಚ್ಛರಿಸಿದೆ. Mizoram Presbyterian Churchನ The Synod Social Front ನಡೆಸಿದ ಸಮೀಕ್ಷೆಯ ಪ್ರಕಾರ, ಮೊಬೈಲ್ ಫೋನ್‌ಗಳಿಂದಾಗಿ ಸಾಮಾಜಿಕ ಬೌದ್ಧಿಕತೆಯು ದಿವಾಳಿಯೆದ್ದು ಹೋಗಿದೆ.
ಈ ಸಂಘಟನೆ ಕೇವಲ ಮೊಬೈಲನ್ನು ಮಾತ್ರ ಗುರಿ ಮಾಡಿರುವುದಲ್ಲ. ಕಂಪ್ಯೂಟರ್, ಟಿವಿ, ಪತ್ರಿಕೆಗಳನ್ನೂ ತನ್ನ ಪಟ್ಟಿಗೆ ಸೇರಿಸಿದೆ. ಈ ಎಲ್ಲಾ ಮಾಧ್ಯಮಗಳಿಂದಾಗಿ ಹದಿಹರೆಯದವರು ಕೆಟ್ಟ ಮಾರ್ಗ ಹಿಡಿಯುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟಿದೆ.
ಮಿಜೋರಾಂನ ಬಹುತೇಕ ಕಡೆಗಳಿಗೆ ತೆರಳಿದ್ದ ಕ್ರೈಸ್ತ ಸಂಘಟನೆ, ಸಾವಿರಾರು ಮಂದಿಯನ್ನು ಸಂಪರ್ಕಿಸಿ ಸಮೀಕ್ಷೆ ನಡೆಸಿತ್ತು. ಈ ರೀತಿ ಸಮೀಕ್ಷೆಗೆ ಒಳಗಾದವರಲ್ಲಿ ಶೇ.99.06ರಷ್ಟು ಹದಿಹರೆಯದವರಲ್ಲಿ ಮೊಬೈಲ್ ಫೋನುಗಳಿದ್ದವು. ನಗರ ಪ್ರದೇಶಗಳಿಗಿಂತ ಹೊರಗಡೆ ಇದರ ಪ್ರಮಾಣ ಶೇ.4ರಷ್ಟು ಮಾತ್ರ ಕಡಿಮೆ.
ಸಮೀಕ್ಷೆಗಾಗಿ 11ರಿಂದ 15ರ ನಡುವಿನ ಹುಡುಗ-ಹುಡುಗಿಯರನ್ನು ಸಂದರ್ಶನ ಮಾಡಲಾಗಿತ್ತು.
ಮೊಬೈಲ್, ಟಿವಿ, ಇಂಟರ್ನೆಟ್ ಮತ್ತು ಪತ್ರಿಕೆಗಳಿಂದಾಗಿ ಹದಿ ಹರೆಯದ ಹುಡುಗ-ಹುಡುಗಿಯರಲ್ಲಿ ಕಾಮ ಕೆರಳುತ್ತದೆ. ಅವರ ವರ್ತನೆಗಳಲ್ಲಿ ಬದಲಾವಣೆಗಳಿಗೆ ಕಾರಣವಾಗುತ್ತಿದೆ. ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ ಎಂದು ಹೇಳಲಾಗಿದೆ.