ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಾವು ಎಲ್ಲರಂತಲ್ಲ; ಯಡ್ಡಿಯನ್ನು ಮತ್ತೆ ಕುಟುಕಿದ ಕಾಂಗ್ರೆಸ್ (Congress | corruption | Congress Sandesh | Sonia Gandhi)
Bookmark and Share Feedback Print
 
ಕಾಂಗ್ರೆಸ್ ಪಕ್ಷವು ಭ್ರಷ್ಟಾಚಾರವನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಭ್ರಷ್ಟರು ಮುಖ್ಯಮಂತ್ರಿ ಅಥವಾ ಎಷ್ಟೇ ಪ್ರಭಾವಿಗಳಾಗಿದ್ದರೂ, ಅವರು ತಮ್ಮ ಸ್ಥಾನವನ್ನು ತ್ಯಜಿಸಬೇಕು. ಪ್ರತಿಪಕ್ಷಗಳಂತೆ ರಚ್ಚೆ ಹಿಡಿದು ಸೀಟಿಗೆ ಅಂಟಿಕೊಳ್ಳಬಾರದು ಎಂದು ಪಕ್ಷದ ಮುಖವಾಣಿ 'ಕಾಂಗ್ರೆಸ್ ಸಂದೇಶ್' ಹೇಳಿದೆ.

ಭೂ ಹಗರಣ-ಸ್ವಜನ ಪಕ್ಷಪಾತಗಳಲ್ಲಿ ಸಿಲುಕಿರುವ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಹೆಸರನ್ನು ಇಲ್ಲಿ ಉಲ್ಲೇಖಿಸಲಾಗಿಲ್ಲವಾದರೂ, ಪರೋಕ್ಷವಾಗಿ ಬಿಜೆಪಿಯನ್ನೇ ಗುರಿ ಮಾಡಲಾಗಿದೆ. ಮುಖ್ಯಮಂತ್ರಿಯೊಬ್ಬರು ಕಳಂಕಿತರಾದರೂ, ಅವರನ್ನು ಮುಂದುವರಿಸಲಾಗಿದೆ ಎಂದು ಕುಟುಕಲಾಗಿದೆ.

ಕಾಂಗ್ರೆಸ್ ಯಾವತ್ತೂ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಾ ಬಂದಿರುವ ಪಕ್ಷ. ಕಳಂಕಿತರು ಯಾರೇ ಆಗಿದ್ದರೂ, ಅವರನ್ನು ಸ್ಥಾನ ತ್ಯಜಿಸುವಂತೆ ಸೂಚಿಸುವ ನಿಲುವನ್ನು ಹೊಂದಿರುವ ಪಕ್ಷ ಕಾಂಗ್ರೆಸ್ ಎಂದು ಪತ್ರಿಕೆ ಹೇಳಿದೆ.

ಕೇಂದ್ರ ಮತ್ತು ಕಾಂಗ್ರೆಸ್ ಆಡಳಿತದಲ್ಲಿರುವ ಎಲ್ಲಾ ರಾಜ್ಯಗಳ ಸರಕಾರಗಳಲ್ಲಿ ನೈತಿಕತೆಯೇ ಪ್ರಮುಖ ಆದ್ಯತೆಯಾಗಿರುವುದು ಇತ್ತೀಚಿನ ವರ್ಷಗಳಲ್ಲಿ ನಡೆದುಕೊಂಡು ಬಂದಿದೆ ಎಂದಿರುವ ಸಂಪಾದಕೀಯ, ಬೃಹತ್ ಪ್ರಮಾಣದ ಭ್ರಷ್ಟಾಚಾರಗಳ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದಿದೆ.

ಚಿಲ್ಲರೆ ಪ್ರಕರಣಗಳನ್ನು ಶೀಘ್ರವಾಗಿ ಪತ್ತೆ ಮಾಡಲಾಗುತ್ತದೆ. ಆದರೆ ಬೃಹತ್ ಪ್ರಕರಣಗಳಲ್ಲಿನ ದೊಡ್ಡ ಮನುಷ್ಯರು ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಇದರ ಬಗ್ಗೆ ನಮ್ಮ ದೇಶದಲ್ಲಿ ಇಂದು ತೀರಾ ಸೂಕ್ಷ್ಮತೆಯಿರುವುದು ಕಂಡು ಬರುತ್ತಿದೆ. ಇದು ಬದಲಾಗಬೇಕಿದೆ. ಭ್ರಷ್ಟರು ಯಾವುದೇ ಕಾರಣಕ್ಕೂ ನುಣುಚಿಕೊಳ್ಳಬಾರದು ಎಂದು ಕಾಂಗ್ರೆಸ್ ಸಂದೇಶದಲ್ಲಿ ಬರೆಯಲಾಗಿದೆ.

ಭ್ರಷ್ಟಾಚಾರದ ವಿರುದ್ಧದ ಹೋರಾಟ ಕೇವಲ ಪಕ್ಷದ ವ್ಯವಹಾರವಲ್ಲ ಎಂಬುದನ್ನೂ ಕಾಂಗ್ರೆಸ್ ಸ್ಪಷ್ಟಪಡಿಸಿದೆ.

ಭ್ರಷ್ಟಾಚಾರವನ್ನು ವಿರೋಧಿಸಿ ನಡೆಸುವ ಹೋರಾಟದಲ್ಲಿ ಬೇರೆ ಬೇರೆ ರಾಜಕೀಯ ಪಕ್ಷಗಳು ಬೇರೆ ಬೇರೆ ನೀತಿಗಳನ್ನು ಹೊಂದಿರಲು ಸಾಧ್ಯವಿಲ್ಲ. ಆದರೆ ಪ್ರಸಕ್ತ ಅಂತಹ ಪರಿಸ್ಥಿತಿ ನಮ್ಮಲ್ಲಿ ಕಂಡು ಬರುತ್ತಿದೆ. ಇತರ ಕೆಲವು ಪಕ್ಷಗಳಲ್ಲಿ ನಾಯಕರು ಕಳಂಕಿತರು ಎಂದು ತಿಳಿದಿದ್ದರೂ, ಅವರನ್ನು ಅವರ ಸ್ಥಾನಗಳಲ್ಲಿ ಮುಂದುವರಿಯಲು ಅವಕಾಶ ನೀಡಲಾಗುತ್ತಿದೆ. ಆದರೆ ಕಾಂಗ್ರೆಸ್ ಹಾಗಲ್ಲ. ಅದು ಯಾವುದೇ ಆರೋಪಗಳು ಬಂದರೂ ಮುಖ್ಯಮಂತ್ರಿ ಮತ್ತು ಸಚಿವರುಗಳನ್ನು ಸ್ಥಾನ ತ್ಯಜಿಸುವಂತೆ ಸೂಚಿಸಲು ಹಿಂದೆ ಮುಂದೆ ನೋಡುವುದಿಲ್ಲ ಎಂದಿದೆ.
ಸಂಬಂಧಿತ ಮಾಹಿತಿ ಹುಡುಕಿ