ನನ್ನ ಹಿಂದುತ್ವಕ್ಕೆ ಯಾರ ಸರ್ಟಿಫಿಕೇಟ್ ಬೇಕಿಲ್ಲ: ದಿಗ್ವಿಜಯ್
ಬುಧವಾರ, 22 ಡಿಸೆಂಬರ್ 2010( 12:05 IST )
ಭೋಪಾಲ: ನಾನೂ ಓರ್ವ ಹಿಂದೂ. ಆದರೆ ನನ್ನ ಹಿಂದುತ್ವದ ಬಗ್ಗೆ ಯಾರೊಬ್ಬರೂ ಪ್ರಮಾಣಪತ್ರ ನೀಡುವ ಅಗತ್ಯವಿಲ್ಲ ಎಂದು ಸದಾ ಹಿಂದೂ ವಿರೋಧಿ ಹೇಳಿಕೆಗಳನ್ನು ನೀಡುತ್ತಾ ಬಂದಿರುವ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.
ಹಿಂದೂ ಭಯೋತ್ಪಾದನೆ ಎಂಬ ದಿಗ್ವಿಜಯ್ ಆರೋಪಗಳಿಗೆ ಮಧ್ಯಪ್ರದೇಶ ಬಿಜೆಪಿ ಅಧ್ಯಕ್ಷ ಪ್ರಭಾತ್ ಝಾ ಟೀಕಿಸಿದ್ದಕ್ಕೆ ಪ್ರತಿಯಾಗಿ ಕಾಂಗ್ರೆಸ್ ನಾಯಕ ಹೀಗೆ ಉತ್ತರಿಸಿದರು.
ನಾನು ಪ್ರಕಾಶ್ ಝಾ ಅವರಿಗಿಂತ ಅತ್ಯುತ್ತಮವಾಗಿ ಹಿಂದೂ ಧರ್ಮವನ್ನು ಪಾಲಿಸುತ್ತಿದ್ದೇನೆ. ಈ ಸಂಬಂಧ ಅವರಿಂದ ನನಗೆ ಯಾವುದೇ ಸರ್ಟಿಫಿಕೇಟ್ ಬೇಕಾಗಿಲ್ಲ ಎಂದು ತನ್ನ ನಿವಾಸದಲ್ಲಿ ಪತ್ರಕರ್ತರಿಗೆ ದಿಗ್ವಿಜಯ್ ತಿಳಿಸಿದರು.
ದಿಗ್ವಿಯಜ್ ಸಿಂಗ್ ಇತ್ತೀಚಿನ ದಿನಗಳಲ್ಲಿ ನೀಡುತ್ತಿರುವ ಹೇಳಿಕೆಗಳನ್ನು ನೋಡಿದರೆ ಕಾಂಗ್ರೆಸ್ ಪಕ್ಷವನ್ನು ಮುಗಿಸಲು ಅವರಿಗೆ ಯಾರೋ ಗುತ್ತಿಗೆ ಕೊಟ್ಟಿದ್ದಾರೆ ಎಂಬ ಭಾವನೆ ಬರುತ್ತಿದೆ ಎಂದು ಹಿಂದೂ ಭಯೋತ್ಪಾದನೆ ಆರೋಪಗಳನ್ನು ಮಾಡುತ್ತಿರುವ ದಿಗ್ವಿಜಯ್ ವಿರುದ್ಧ ಪ್ರಕಾಶ್ ಝಾ ವಾಗ್ದಾಳಿ ನಡೆಸಿದ್ದರು.
ಆರೆಸ್ಸೆಸ್ ಬಗ್ಗೆ ನೀವೇನು ಹೇಳುತ್ತೀರಿ ಎಂದು ಪತ್ರಕರ್ತರು ಪ್ರಶ್ನಿಸಿದಾಗ, 'ಆರೆಸ್ಸೆಸ್ ಬಗ್ಗೆ ವಿಶ್ವ ಹಿಂದೂ ಪರಿಷತ್ ಅಂತಾರಾಷ್ಟ್ರೀಯ ಅಧ್ಯಕ್ಷ ಅಶೋಕ್ ಸಿಂಘಾಲ್ ಸಾಕಷ್ಟು ಮಾತನಾಡಿದ್ದಾರೆ. ಹಾಗಾಗಿ ಆ ಸಂಘಟನೆ ಬಗ್ಗೆ ಒಂದೇ ಒಂದು ಶಬ್ದ ಮಾತನಾಡಲು ನಾನು ಹೋಗುವುದಿಲ್ಲ' ಎಂದು ದಿಗ್ವಿಜಯ್ ಹೇಳಿದರು.