ದೇಶದಾದ್ಯಂತ ವಿಶ್ವವಿದ್ಯಾಲಯಗಳಿಗೆ ತೆರಳಿ ರಾಜಕೀಯ ಮೈಲೇಜ್‌ಗೆ ಯತ್ನಿಸುತ್ತಿರುವ ರಾಹುಲ್ ಗಾಂಧಿಗೆ ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಅಡ್ಡಗಾಲು ಹಾಕಿದ್ದಾರೆ. ಇದರೊಂದಿಗೆ ಕಾಂಗ್ರೆಸ್ ಮತ್ತು ಡಿಎಂಕೆ ನಡುವಿನ ಅಂತರ ಸ್ಪಷ್ಟವಾಗಿ ಹೆಚ್ಚಿದಂತಾಗಿದೆ.
ರಾಹುಲ್ ಗಾಂಧಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲು ಮದ್ರಾಸು ಯುನಿವರ್ಸಿಟಿ ಸಭಾಂಗಣವನ್ನು ನೀಡಲು ನಿರಾಕರಿಸಲಾಗಿದೆ. ಇದಕ್ಕೆ ಸ್ಪಷ್ಟ ಕಾರಣಗಳನ್ನು ನೀಡಲಾಗಿಲ್ಲವಾದರೂ, 2ಜಿ ಹಗರಣ ಸಂಬಂಧ ಡಿಎಂಕೆ ಎದುರಿಸುತ್ತಿರುವ ಮುಜುಗರದ ತಿರುಗೇಟು ಎಂದು ಭಾವಿಸಲಾಗಿದೆ.
ಬುಧವಾರದಿಂದ ಎರಡು ದಿನಗಳ ತಮಿಳುನಾಡು ಪ್ರವಾಸದಲ್ಲಿರುವ ರಾಹುಲ್ ಗಾಂಧಿ, ಮದ್ರಾಸ್ ಯುನಿವರ್ಸಿಟಿಯಲ್ಲಿ ಸಂವಾದ ನಡೆಸಬೇಕಿತ್ತು. ಆದರೆ ಇದಕ್ಕೆ ಅವಕಾಶ ನಿರಾಕರಿಸಿದ ಕಾರಣ, ಚೆನ್ನೈ ಹೊರವಲಯದ ವನಾಗರಂ ಎಂಬಲ್ಲಿನ ಕಲ್ಯಾಣ ಮಂಟಪವೊಂದರಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಇತ್ತೀಚೆಗಷ್ಟೇ ಆಯ್ಕೆಗೊಂಡಿದ್ದ ಯುವ ಕಾಂಗ್ರೆಸ್ ಸಮಿತಿಯನ್ನು ಉದ್ದೇಶಿಸಿ ರಾಹುಲ್ ಗಾಂಧಿ ಮದ್ರಾಸು ಯುನಿವರ್ಸಿಟಿ ಆಡಿಟೋರಿಯಂನಲ್ಲಿ ಭಾಷಣ ಮಾಡಬೇಕಿತ್ತು.
ರಾಹುಲ್ ಗಾಂಧಿ ಮಾಡಲಿರುವುದು ರಾಜಕೀಯ ಭಾಷಣ. ಕಾಂಗ್ರೆಸ್ ಯುವ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿರುವುದರಿಂದ ಅದು ರಾಜಕೀಯ ಕಾರ್ಯಕ್ರಮ. ಹಾಗಾಗಿ ವಿಶ್ವವಿದ್ಯಾಲಯ ಆವರಣದಲ್ಲಿ ಅವಕಾಶ ನೀಡುವುದು ಸಾಧ್ಯವಿಲ್ಲ ಎಂದು ಮದ್ರಾಸು ಯುನಿವರ್ಸಿಟಿಯು ಕಾಂಗ್ರೆಸ್ ಬೇಡಿಕೆಯನ್ನು ತಳ್ಳಿ ಹಾಕಿತ್ತು.
ಯುನಿವರ್ಸಿಟಿ ನಿರ್ಧಾರವನ್ನು ರಾಜಕೀಯ ಪ್ರೇರಿತ ಎಂದು ಯುವ ಕಾಂಗ್ರೆಸ್ ಟೀಕಿಸಿದೆ.
ಎಲ್‌ಟಿಟಿಇಯಿಂದ ಬೆದರಿಕೆ ಇರುವ ಹೊರತಾಗಿಯೂ, ಮರೀನಾ ಬೀಚ್ ಬಳಿಯಿರುವ ಯುನಿವರ್ಸಿಟಿ ಸಭಾಂಗಣ ಸೂಕ್ತವೆನಿಸಿತ್ತು. ರಾಹುಲ್ ನಮ್ಮ ದೇಶದ ಪ್ರಮುಖ ನಾಯಕರು. ಅವರ ಭದ್ರತೆ ನಮಗೆ ಮುಖ್ಯವಾದದ್ದು. ಈ ಬಗ್ಗೆ ಎಸ್‌ಪಿಜಿ ಕೂಡ ತನ್ನ ಗ್ರೀನ್ ಸಿಗ್ನಲ್ ನೀಡಿತ್ತು ಎಂದು ತಮಿಳುನಾಡು ಯುವ ಕಾಂಗ್ರೆಸ್ ಅಧ್ಯಕ್ಷ ಯುವರಾಜ್ ಅಸಮಾಧಾನ ವ್ಯಕ್ತಪಡಿಸಿದರು.