ಸದಾ ಒಂದಿಲ್ಲೊಂದು ವಿವಾದಿತ ಫತ್ವಾಗಳನ್ನು ಹೊರಡಿಸುತ್ತಾ ಬಂದಿರುವ ಇಸ್ಲಾಮಿಕ್ ಧಾರ್ಮಿಕ ಸಂಸ್ಥೆ ದಾರೂಲ್ ಉಲೂಮ್ ದಿಯೋಬಂದ್ ಮತ್ತೆ ಸುದ್ದಿಯಲ್ಲಿದೆ. ಜೀನ್ಸ್ ಅಥವಾ ಬಿಗಿ ಉಡುಪುಗಳನ್ನು ಧರಿಸಬಾರದು, ಗರ್ಭ ನಿರೋಧಕಗಳನ್ನು ಬಳಸುವ ಮೊದಲು ಹಕೀಮ್‌ಗಳ ಸಲಹೆಯನ್ನು ಪಡೆಯಬೇಕು ಎಂದು ಆದೇಶ ಹೊರಡಿಸಲಾಗಿದೆ!
ವೈದ್ಯಕೀಯ ಕಾರಣಗಳಿಗಾಗಿ ಜನನ ನಿಯಂತ್ರಣ ಸಾಧನಗಳನ್ನು (ಕಾಂಡೋಮ್, ಕಾಪರ್-ಟಿ, ಮಾತ್ರೆಗಳು ಮುಂತಾದುವು) ಬಳಸಬೇಕಾದಲ್ಲಿ ದಂಪತಿ, ಹಕೀಮ್‌ರನ್ನು (ಮುಸ್ಲಿಂ ವೈದ್ಯ) ಮೊದಲು ಭೇಟಿ ಮಾಡಿ ಸಲಹೆಯನ್ನು ಪಡೆಯಬೇಕು ಎಂದು ಫತ್ವಾದಲ್ಲಿ ದಿಯೋಬಂದ್ ತಿಳಿಸಿದೆ.
ಆದರೆ ಇವೆಲ್ಲ ಫತ್ವಾಗಳಿಗೆ ಸ್ವತಃ ಮುಸ್ಲಿಮರಿಂದಲೇ ವಿರೋಧ ವ್ಯಕ್ತವಾಗಿದೆ. ಇಂತಹ ಫತ್ವಾಗಳನ್ನು ಜನ ಅನುಸರಿಸುವುದು ಅಪರೂಪ ಎಂದು ಇದೇ ಸಮುದಾಯದ ಓರ್ವ ಸಮಾಜ ಸೇವಕಿ ಹಾಗೂ ಸ್ತ್ರೀರೋಗ ತಜ್ಞೆ ಅಭಿಪ್ರಾಯಪಟ್ಟಿದ್ದಾರೆ.
ಪ್ರಶ್ನೆಯೊಂದಕ್ಕೆ ಉತ್ತರಿಸಿರುವ ದಿಯೋಬಂದ್, ಬಿಗಿಯಾದ ಬಟ್ಟೆಗಳನ್ನು ತೊಡುವುದು ನ್ಯಾಯಸಮ್ಮತವಲ್ಲ. ಬಟ್ಟೆಗಳು ಯಾವತ್ತೂ ಸಡಿಲವಾಗಿ ಮತ್ತು ಸರಳವಾಗಿ ಇರತಕ್ಕದ್ದು ಎಂದಿದೆ.
ಧಾರ್ಮಿಕ ನಂಬಿಕೆಗಳ ಪ್ರಕಾರ ಮೈಗೆ ಅಂಟಿಕೊಳ್ಳುವ ಬಿಗಿಯಾದ ಪ್ಯಾಂಟು ಮತ್ತು ಜೀನ್ಸ್‌ಗಳು ಧರಿಸಲು ಅರ್ಹವೇ ಎಂದು ಮಹಿಳೆಯೊಬ್ಬರು ಕೇಳಿದ್ದ ಪ್ರಶ್ನೆಗೆ, ಆ ರೀತಿಯ ಬಟ್ಟೆಗಳನ್ನು ಧರಿಸುವುದು ಸರಿಯಲ್ಲ ಎಂದು ಹೇಳಲಾಗಿದೆ.
ತಲೆ ಮೇಲೆ ಶಾಲು ಹೊದ್ದುಕೊಂಡು, ಸಡಿಲವಾದ ಪೈಜಾಮಾ ಅಥವಾ ಜೀನ್ಸ್ ಧರಿಸಿ, ಅದರ ಮೇಲೆ ಮಂಡಿಯ ಕೆಳಗಿನವರೆಗೆ ಚಾಚಿದ ಫ್ರಾಕ್ ತೊಡಲು ಅವಕಾಶವಿದೆಯೇ ಎಂದು ಕೇಳಿದ್ದ ಪ್ರಶ್ನೆಗೂ ದಿಯೋಬಂದ್ ಋಣಾತ್ಮಕ ಉತ್ತರ ನೀಡಲಾಗಿದೆ.
ಅಲ್ಪಸಂಖ್ಯಾತ ಸಮುದಾಯ ಮತ್ತು ಸಮಾಜವು ಎದುರಿಸುತ್ತಿರುವ ನೈಜ ಸಮಸ್ಯೆಗಳ ಕಡೆಗಿನ ಗಮನವನ್ನು ಬೇರೆಡೆಗೆ ತಿರುಗಿಸುವ ಸಲುವಾಗಿ ಕೆಲವು ವ್ಯಕ್ತಿಗಳು ಇಂತಹ ಪ್ರಶ್ನೆಗಳನ್ನು ಕೇಳುತ್ತಾರೆ. ಆದರೆ ಈ ಫತ್ವಾಗಳನ್ನು ಯಾರೊಬ್ಬರೂ ಅನುಸರಿಸುವುದಿಲ್ಲ ಎಂದು ಸ್ತ್ರೀರೋಗ ತಜ್ಞೆ ರೆಹಾನಾ ಜಬೀನ್ ಅನಿಸಿಕೆ ವ್ಯಕ್ತಪಡಿಸಿದ್ದಾರೆ.
ವೈದ್ಯರೊಬ್ಬರ ಸಲಹೆ ನಿರ್ಣಾಯಕವಾದುದು ಎನ್ನುವುದನ್ನು ಪ್ರತಿಯೊಬ್ಬರೂ ಒಪ್ಪಿಕೊಳ್ಳಬಹುದಾಗಿದೆ. ಆದರೆ ಈ ಫತ್ವಾ ಹೇಳಿರುವ ಪ್ರಕಾರ, ಹಕೀಮ್‌ಗಳ ಸಲಹೆಯನ್ನು ಅವಲಂಬಿಸಿ ಮುಂದುವರಿಯಬೇಕೆನ್ನುವುದು ಯಾವ ನಿಟ್ಟಿನಲ್ಲೂ ವಿವೇಚನಾಯುತ ಎನಿಸದು ಎಂದು ಆಕೆ ಹೇಳಿದ್ದಾರೆ.