ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ವಿಶೇಷ ಅಧಿವೇಶನಕ್ಕೆ ಸಿದ್ಧ: ಕೇಂದ್ರ | ಅಗತ್ಯವಿಲ್ಲ: ಬಿಜೆಪಿ (Special Parliament session | JPC | 2G scam | Pranab Mukherjee)
Bookmark and Share Feedback Print
 
2ಜಿ ಹಗರಣ ಸಂಬಂಧ ಜಂಟಿ ಸಂಸದೀಯ ಸಮಿತಿ ತನಿಖೆ ಬೇಡಿಕೆ ಪಟ್ಟನ್ನು ಸಡಿಲಿಸುವ ಬದಲು ಮತ್ತಷ್ಟು ಬಿಗಿಗೊಳಿಸಿರುವ ಪ್ರತಿಪಕ್ಷಗಳನ್ನು ಸಂಸತ್ತಿಗೆ ಮತ್ತೆ ಕರೆ ತರುವ ಯತ್ನವನ್ನು ಸರಕಾರ ಮುಂದುವರಿಸಿದ್ದು, ಜೆಪಿಸಿ ರಚನೆ ಬಗ್ಗೆ ಚರ್ಚಿಸಲು ವಿಶೇಷ ಅಧಿವೇಶನ ಕರೆಯಲು ಸಿದ್ಧ ಎಂದಿದೆ. ಆದರೆ ಇದನ್ನು ಪ್ರಮುಖ ವಿಪಕ್ಷ ಬಿಜೆಪಿ ತಿರಸ್ಕರಿಸಿದೆ.

ಜಂಟಿ ಸಂಸದೀಯ ಸಮಿತಿ (ಜೆಪಿಸಿ) ರಚನೆ ಕುರಿತು ಪ್ರತಿಪಕ್ಷಗಳು ತಯಾರಿದ್ದರೆ, ನಾನು ಸಂಸತ್ತಿನ ವಿಶೇಷ ಅಧಿವೇಶನವನ್ನು ಬಜೆಟ್ ಅಧಿವೇಶನಕ್ಕೂ ಮೊದಲು ಕರೆಯಲು ಸಿದ್ಧ. ವಿಪಕ್ಷಗಳು ಈ ವಿಚಾರದ ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆಸಬೇಕೇ ಹೊರತು, ಸಂಸ್ಥೆಯನ್ನು ಕಾರ್ಯಗಳನ್ನು ತಡೆ ಹಿಡಿಯುವುದಲ್ಲ ಎಂದು ವಿತ್ತ ಸಚಿವ ಪ್ರಣಬ್ ಮುಖರ್ಜಿ ಹೇಳಿದರು.

ಜೆಪಿಸಿಗೆ ಕೇಂದ್ರ ಸರಕಾರ ಒಪ್ಪಿಗೆ ಸೂಚಿಸಿದಲ್ಲಿ, ಬಜೆಟ್ ಅಧಿವೇಶನದ ಸಂದರ್ಭದಲ್ಲಿ ಸರಕಾರಕ್ಕೆ ಸಹಕಾರ ನೀಡಲು ಬಿಜೆಪಿ ಸಿದ್ಧ ಎಂದು ಕೇಸರಿ ಪಕ್ಷದ ಅಧ್ಯಕ್ಷ ನಿತಿನ್ ಗಡ್ಕರಿ ಹೇಳಿರುವುದಕ್ಕೆ ಪ್ರತಿಯಾಗಿ ಮುಖರ್ಜಿ ಮೇಲಿನಂತೆ ಉತ್ತರಿಸಿದರು.

ಮುಖರ್ಜಿ ಉತ್ತರದಿಂದ ಗಡ್ಕರಿ ಸಂತೃಪ್ತರಾಗಿಲ್ಲ. ಸರಕಾರಕ್ಕಿರುವ ಏಕೈಕ ಮಾರ್ಗವೆಂದರೆ ಜೆಪಿಸಿ ರಚನೆ ಮಾಡುವುದು. ಹಾಗಾದಲ್ಲಿ ನಾವು ಸರಕಾರಕ್ಕೆ ಬೆಂಬಲ ಸೂಚಿಸಲು ಸಿದ್ಧರಿದ್ದೇವೆ ಎಂದು ಬಿಜೆಪಿ ಅಧ್ಯಕ್ಷ ಹೇಳಿದರು.

ರಾಷ್ಟ್ರೀಯ ಹಿತಾಸಕ್ತಿಯ ವಿಚಾರವೊಂದು ತಮ್ಮ ಮುಂದಿರುವಾಗ ಸ್ವತಃ ಪ್ರಣಬ್ ಪ್ರತಿಪಕ್ಷದಲ್ಲಿದ್ದರೆ ಹೀಗೇ ಮಾಡುತ್ತಿದ್ದರು. ಹೀಗೆ ಮಾಡುವುದು ಪ್ರತಿಪಕ್ಷಗಳ ಕರ್ತವ್ಯ. ಸಿಎಜಿ ವರದಿ ಹೇಳಿರುವಂತೆ ಇದು 1.76 ಲಕ್ಷ ಕೋಟಿ ರೂಪಾಯಿಗಳ ಹಗರಣ. ಇಂತಹ ಪ್ರಕರಣಕ್ಕೆ ಜೆಪಿಸಿ ತನಿಖೆ ಬೇಕೆಂದು ಕೇಳುವುದು ತಪ್ಪೇ ಎಂದು ಗಡ್ಕರಿ ಪ್ರಶ್ನಿಸಿದ್ದಾರೆ.

ಎಡಪಕ್ಷಗಳು ಕೂಡ ಬಿಜೆಪಿ ನಿಲುವಿಗೆ ಬೆಂಬಲ ಸೂಚಿಸಿವೆ.

ಸರಕಾರದ ಆಹ್ವಾನವನ್ನು ನಾವು ಬೆಂಬಲಿಸುವುದಿಲ್ಲ. ಖಂಡಿತಾ ಬೆಂಬಲ ನೀಡುವುದಿಲ್ಲ. ಮೊದಲು ಜೆಪಿಸಿ ರಚನೆ ಮಾಡಿ. ನಂತರ ಬೇಕಾದರೆ ಬಜೆಟ್ ಅಧಿವೇಶನಕ್ಕೂ ಮೊದಲು ವಿಶೇಷ ಅಧಿವೇಶನ ನಡೆಸಬಹುದು ಎಂದು ಸಿಪಿಐಎಂ ನಾಯಕ ಬಸುದೇವ್ ಆಚಾರ್ಯ ತಿಳಿಸಿದ್ದಾರೆ.

ಈ ನಡುವೆ ಪ್ರತಿಪಕ್ಷಗಳ ಮೇಲೆ ವಾಗ್ದಾಳಿ ನಡೆಸಿರುವ ಪ್ರಣಬ್, ಸಂಸತ್ ಕಲಾಪವನ್ನು ನಾಶ ಮಾಡಿದ್ದಕ್ಕೆ ದೇಶದ ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಿದ್ದಾರೆ.

ಚಳಿಗಾಲದ ಅಧಿವೇಶನವನ್ನು ಸಂಪೂರ್ಣವಾಗಿ ಪ್ರತಿಪಕ್ಷಗಳು ಆಪೋಶನ ಮಾಡಿವೆ. ಒಂದೇ ಒಂದು ಚರ್ಚೆಗೆ ಅವಕಾಶ ಮಾಡಿಕೊಡಲಿಲ್ಲ. ಸಂಸತ್ತಿನಲ್ಲಿ ಅವರು ಬಿಕ್ಕಟ್ಟು ಸೃಷ್ಟಿಸಿದ್ದರು. ಸಂಸ್ಥೆ ಕಾರ್ಯ ನಿರ್ವಹಿಸದಂತೆ ನಿಷ್ಕ್ರಿಯವನ್ನಾಗಿ ಮಾಡಿದರು. ಅವರು ದೇಶದ ಜನತೆಯ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.
ಸಂಬಂಧಿತ ಮಾಹಿತಿ ಹುಡುಕಿ