ರಾಸಲೀಲೆ ಖ್ಯಾತಿಯ ಮಾಜಿ ರಾಜ್ಯಪಾಲ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಎನ್.ಡಿ. ತಿವಾರಿಯವರಿಗೆ ಪಿತೃತ್ವ ವಿವಾದದಲ್ಲಿ ಮೊದಲ ಸೋಲು ಎದುರಾಗಿದೆ. ಅವರ ವಾದವನ್ನು ತಳ್ಳಿ ಹಾಕಿರುವ ದೆಹಲಿ ಹೈಕೋರ್ಟ್, ಡಿಎನ್‌ಎ ಪರೀಕ್ಷೆಗೆ ಒಳಗಾಗುವಂತೆ ಆದೇಶ ನೀಡಿದೆ.
ರೋಹಿತ್ ಶೇಖರ್ ಎಂಬ ವ್ಯಕ್ತಿ ತಾನು ಆಂಧ್ರಪ್ರದೇಶ ಮಾಜಿ ರಾಜ್ಯಪಾಲ ಎನ್.ಡಿ. ತಿವಾರಿಯವರ ಜೈವಿಕ ಪುತ್ರ ಎಂದು ಘೋಷಿಸುವಂತೆ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ ತಿವಾರಿಯವರು ಶೇಖರ್ ತನ್ನ ಮಗನೆಂದು ಒಪ್ಪಿಕೊಳ್ಳಲು ನಿರಾಕರಿಸಿದ್ದರು.
PTI
ತಿವಾರಿ ಮತ್ತು ನನ್ನ ತಾಯಿ ಉಜ್ವಲಾ ಶರ್ಮಾ ಅವರ ಅಕ್ರಮ ಸಂಬಂಧದಿಂದ ನಾನು ಹುಟ್ಟಿದ್ದು, ಇದನ್ನು ಅಧಿಕೃತವಾಗಿ ಘೋಷಿಸಬೇಕೆಂದು ಕಾನೂನು ಪದವೀಧರರಾಗಿರುವ ಶೇಖರ್ ನ್ಯಾಯಾಲಯದ ಮೊರೆ ಹೋಗಿದ್ದರು.
ಈ ಸಂಬಂಧ ತಿವಾರಿಗೆ ನೋಟೀಸ್ ಜಾರಿಗೊಳಿಸಿದ್ದ ಹೈಕೋರ್ಟ್, ವಿವರಣೆ ನೀಡುವಂತೆ ಕೇಳಿಕೊಂಡಿತ್ತು. ಡಿಎನ್‌ಎ ಪರೀಕ್ಷೆ ನಡೆಸಬೇಕೆಂದು ಶೇಖರ್ ಮನವಿ ಮಾಡಿಕೊಂಡಿದ್ದರು. ಇದಕ್ಕೆ ತಿವಾರಿ ನಕಾರ ಸೂಚಿಸಿದ್ದರು. ಇಂದು ಆದೇಶ ನೀಡಿರುವ ಹೈಕೋರ್ಟ್ ಏಕ ಸದಸ್ಯ ಪೀಠವು, ಡಿಎನ್ಎ ಪರೀಕ್ಷೆಗೆ ಒಳಗಾಗುವಂತೆ ಆದೇಶ ನೀಡಿದೆ.
ವೈದ್ಯಕೀಯ ಪರೀಕ್ಷೆ ನಡೆಸಲು ಶೇಖರ್ ಅವರಿಗೆ ತಿವಾರಿಯವರ ರಕ್ತ ಮಾದರಿಯ ಅಗತ್ಯವಿರುವುದರಿಂದ ತಿವಾರಿಯವರು ಮಾದರಿ ಕೊಡಬೇಕು. ಒಬ್ಬ ವ್ಯಕ್ತಿಯ ತಂದೆಯನ್ನು ನಿರ್ಧರಿಸುವ ವಿಚಾರ ಇದಾಗಿರುವುದರಿಂದ ತಿವಾರಿಯವರು ಡಿಎನ್ಎ ಪರೀಕ್ಷೆಗೆ ಒಳಪಡಬೇಕು ಎಂದು ನ್ಯಾಯಮೂರ್ತಿ ಎಸ್. ರವೀಂದ್ರ ಭಟ್ ತನ್ನ ತೀರ್ಪಿನಲ್ಲಿ ತಿಳಿಸಿದ್ದಾರೆ.
ಇದರೊಂದಿಗೆ ತಿವಾರಿಯವರು ಮಹತ್ವದ ಹಿನ್ನಡೆ ಅನುಭವಿಸಿದಂತಾಗಿದೆ. ಈ ಹಿಂದೆ ಆಂಧ್ರಪ್ರದೇಶದ ರಾಜ್ಯಪಾಲರಾಗಿದ್ದ ಸಂದರ್ಭದಲ್ಲಿ ಮೂವರು ಯುವತಿಯರೊಂದಿಗೆ ರಾಜಭವನದಲ್ಲಿ 86ರ ತಿವಾರಿ ರಾಸಲೀಲೆ ನಡೆಸಿದ್ದಾರೆ ಎಂದು ಟೀವಿ ಚಾನೆಲ್ ವೀಡಿಯೋ ಪ್ರಸಾರ ಮಾಡಿತ್ತು. ಬಳಿಕ ಅವರು ರಾಜೀನಾಮೆ ನೀಡಿದ್ದರು.