ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕೇರಳ ಮಾಜಿ ಸಿಎಂ, ಕಾಂಗ್ರೆಸ್ ನಾಯಕ ಕರುಣಾಕರನ್ ಇನ್ನಿಲ್ಲ (K Karunakaran | Congress | Kerala | India)
Bookmark and Share Feedback Print
 
PR
ಕಳೆದ ಕೆಲವು ದಿನಗಳಿಂದ ಗಂಭೀರ ಸ್ಥಿತಿಯಲ್ಲಿದ್ದ ಕಾಂಗ್ರೆಸ್ ಹಿರಿಯ ನಾಯಕ ಕೆ. ಕರುಣಾಕರನ್ ಅವರು ಗುರುವಾರ ಸಂಜೆ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು.

ಕೆಲ ದಿನಗಳ ಹಿಂದೆ ಹೃದಯಾಘಾತಕ್ಕೊಳಗಾಗಿದ್ದ ಕರುಣಾಕರನ್ ಅವರನ್ನು ಡಿಸೆಂಬರ್ 10ರಂದು ತಿರುವನಂತಪುರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ನಂತರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಅವರಿಗೆ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿತ್ತು.

ಇಂದು ಸಂಜೆ 5.30ಕ್ಕೆ ಮತ್ತೊಮ್ಮೆ ಹೃದಯಾಘಾತವಾಗಿತ್ತು. ಈ ಹೊತ್ತಿಗೆ ಚಿಕಿತ್ಸೆಗೆ ಸ್ಪಂದಿಸದ ಅವರು ನಿಧನರಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಕೇರಳದ ಪ್ರಭಾವಿ ಕಾಂಗ್ರೆಸ್ ನಾಯಕರೆಂದು ಗುರುತಿಸಿಕೊಂಡಿದ್ದ ಕರುಣಾಕರನ್, ದೇವರ ಸ್ವಂತ ನಾಡು ಖ್ಯಾತಿಯ ರಾಜ್ಯಕ್ಕೆ ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದರು.

ಕರುಣಾಕರನ್ ಮೊತ್ತ ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದು 1977ರಲ್ಲಿ. ನಂತರ ತುರ್ತು ಪರಿಸ್ಥಿತಿಯ ಅವಧಿಯಲ್ಲಿ ಅವರು ಕೇರಳದ ಗೃಹಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. 1995ರಲ್ಲಿ ಅವರು ಒಂದು ವರ್ಷ ಕಾಲ ಕೇಂದ್ರ ಕೈಗಾರಿಕಾ ಸಚಿವರಾಗಿದ್ದರು.

1970ರಲ್ಲಿ ಸಂಯುಕ್ತ ಪ್ರಜಾ ರಂಗವನ್ನು (ಯುಡಿಎಫ್) ಸ್ಥಾಪಿಸಿದ್ದ ಕರುಣಾಕರನ್, ನೆಹರೂ ಕುಟುಂಬದೊಂದಿಗೆ ಹತ್ತಿರದ ನಂಟು ಹೊಂದಿದ್ದರು.

ಕರುಣಾಕರನ್ ಅವರು ಪಕ್ಷದ ಉನ್ನತ ನಾಯಕರಾಗಿದ್ದವರು. ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಅವರನ್ನು ಕಳೆದುಕೊಂಡ ಕಾಂಗ್ರೆಸ್ ಬಡವಾಗಿದೆ. ಅವರ ಅಗಲಿಕೆ ನಿಜಕ್ಕೂ ದುಃಖದ ಸುದ್ದಿ ಎಂದು ಕಾಂಗ್ರೆಸ್ ವಕ್ತಾರೆ ಜಯಂತಿ ನಟರಾಜನ್ ಸಂತಾಪ ವ್ಯಕ್ತಪಡಿಸಿದ್ದಾರೆ.

ಕರುಣಾಕರನ್ ನಿಧನಕ್ಕೆ ಕೇರಳ ಸಂಸದ, ಮಾಜಿ ಕೇಂದ್ರ ಸಚಿವ ಶಶಿ ತರೂರ್ ಸಂತಾಪ ವ್ಯಕ್ತಪಡಿಸಿದ್ದಾರೆ. ಕೇರಳದ ಜನಪ್ರಿಯ ನಾಯಕರಾಗಿದ್ದ ಅವರ ಅಗಲಿಕೆ ನಮಗಾದ ಅಪಾರ ನಷ್ಟ ಎಂದು ಅವರು ಬಣ್ಣಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ