ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್ಐ ಏಜೆಂಟನೋರ್ವ ಯುವ ಕಾಂಗ್ರೆಸ್‌ನಲ್ಲಿ ಕಳೆದ ಎಂಟು ತಿಂಗಳಿನಿಂದ ಕಾರ್ಯ ನಿರ್ವಹಿಸುತ್ತಿರುವುದು ಬಹಿರಂಗವಾಗಿದ್ದು, ಹಿಂದೂ ಭಯೋತ್ಪಾದನೆ ಅಪಾಯಕಾರಿ ಎಂಬ ವಿವಾದಿತ ಹೇಳಿಕೆಯನ್ನು ನೀಡಿ ಜನಾಕ್ರೋಶ ಎದುರಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೆ ಇಕ್ಕಟ್ಟಿಗೆ ಸಿಲುಕಿದ್ದಾರೆ.
ರಾಹುಲ್ ಗಾಂಧಿ ಮತ್ತು ಐಎಸ್ಐ ನಡುವೆ ಸಂಬಂಧವಿದೆ ಎಂದು ವಾರದ ಹಿಂದಷ್ಟೇ ಜನತಾ ಪಕ್ಷದ ಅಧ್ಯಕ್ಷ ಸುಬ್ರಮಣ್ಯನ್ ಸ್ವಾಮಿ ಆರೋಪಿಸಿರುವ ಬೆನ್ನಿಗೆ ಇಂತಹ ಬೆಳವಣಿಗೆಯೊಂದು ನಡೆದಿರುವುದು ಕಾಂಗ್ರೆಸ್ ನಾಯಕನ ಮೇಲೆ ಸಂಶಯ ಮೂಡಿಸುವಂತೆ ಮಾಡಿದೆ.
ಯುವ ಜನತೆ ರಾಜಕೀಯಕ್ಕೆ ಬರಬೇಕು ಎಂದು ಕರೆ ನೀಡುತ್ತಾ ಹೋಗಿದ್ದ ರಾಹುಲ್ ಗಾಂಧಿ, ಸಾಕಷ್ಟು ಮಂದಿಯನ್ನು ಯುವ ಕಾಂಗ್ರೆಸ್‌ಗೆ ಸೇರಿಸಿದ್ದರು. ಈ ಹೊತ್ತಿನಲ್ಲಿ ಪಾಕಿಸ್ತಾನದ ಐಎಸ್ಐನ ಶಂಕಿತ ಏಜೆಂಟ್ ಜಾವೇದ್ ಮೊಜಾವಾಲಾ ಎಂಬಾತ ಸೇರಿಕೊಂಡಿದ್ದಾನೆ. ಕಳೆದ ಎಂಟು ತಿಂಗಳಿನಿಂದ ಈತ ಕಾಂಗ್ರೆಸ್‌ನಲ್ಲಿದ್ದಾನೆ ಎಂದು ವರದಿಗಳು ಹೇಳಿವೆ.
28ರ ಹರೆಯದ ಐಎಸ್ಐ ಶಂಕಿತ ಏಜೆಂಟನ ಪೂರ್ಣ ಹೆಸರು ಜಾವೇದ್ ಅಬ್ದುಲ್ ಗಫೂರ್ ಮೊಜಾವಾಲಾ. ನಕಲಿ ದಾಖಲೆಗಳ ಸೃಷ್ಟಿ, ಬೇಹುಗಾರಿಕೆ ಮತ್ತು ಸರಕಾರಿ ರಹಸ್ಯ ಕಾಯ್ದೆಗಳ ಉಲ್ಲಂಘನೆ ಆರೋಪದ ಮೇಲೆ ಕೆಲ ದಿನಗಳ ಹಿಂದಷ್ಟೇ ಈತನನ್ನು ಮುಂಬೈ ಅಪರಾಧ ದಳದ ಪೊಲೀಸರು ಬಂಧಿಸಿದ್ದಾರೆ.
ಈ ಜಾವೇದ್, ದಕ್ಷಿಣ ಮುಂಬೈನ ವಾರ್ಡ್ ನಂಬರ್ 222ರಲ್ಲಿ ಯುವ ಕಾಂಗ್ರೆಸ್ ಸದಸ್ಯನಾಗಿದ್ದ. ಇಲ್ಲಿ ಸುಮಾರು 1,390 ಯುವಕರು ಎಂಟು ತಿಂಗಳ ಹಿಂದೆ ಯುವ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದರು.
ದಾವೂದ್-ಶಕೀಲ್ ಸಂಬಂಧ... ಮೂಲಗಳ ಪ್ರಕಾರ ಐಎಸ್ಐ ಉಗ್ರ ಜಾವೇದ್‌ನನ್ನು ಬೆಂಬಲಿಸಿದ್ದು ನವೇದ್ ಶೇಖ್ ಎಂಬಾತ. ಡೀಸೆಲ್ ಡಾನ್ ಚಾಂದ್ ಮದಾರ್ ಎಂಬಾತನನ್ನು ಹತ್ಯೆಗೈದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ತೈಲ ಮಾಫಿಯಾದ ಮುಖ್ಯಸ್ಥ ಮೊಹಮ್ಮದ್ ಆಲಿ ಶೇಖ್ ಎಂಬಾತನ ಪುತ್ರನೇ ಈ ನವೇದ್. ಈ ಕುಟುಂಬಕ್ಕೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಂಬಂಧವೂ ಇದೆ ಎಂದು ಆರೋಪಿಸಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ ಬಂಧಿತ ಜಾವೇದ್, ಭೂಗತ ಪಾತಕಿ ಛೋಟಾ ಶಕೀಲ್ ಆಪ್ತ. ದೆಹಲಿಯಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿಯಲ್ಲಿನ ಇಬ್ಬರು ಅಧಿಕಾರಿಗಳಿಗೆ ಈತ ರಹಸ್ಯ ಮಾಹಿತಿಗಳನ್ನು ಒದಗಿಸುತ್ತಿದ್ದ.
ಮುನೀರ್ ಖಾನ್ ಮತ್ತು ಫಕೀಲ್ ಆಲಿ ಎಂಬ ಇಬ್ಬರು ಈತನ ಸಹಚರರನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ಜಾವೇದ್ ಐಎಸ್ಐ ಏಜೆಂಟ್ ಎಂಬುದನ್ನು ಆತನ ಇಬ್ಬರೂ ಸಹಚರರು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಹುಲ್‌ಗೆ ಐಎಸ್ಐ ಸಂಬಂಧ: ಸ್ವಾಮಿ ಹೀಗೆಂದು ಆರೋಪಿಸಿರುವುದು ಜನತಾ ಪಕ್ಷದ ಅಧ್ಯಕ್ಷ ಸುಬ್ರಮಣ್ಯನ್ ಸ್ವಾಮಿ. ಕಳೆದ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಸ್ವಾಮಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್ಐ ಜತೆ ಹೊಂದಿರುವ ಸಂಬಂಧಗಳ ಕುರಿತು ತನಿಖೆ ನಡೆಯಬೇಕು ಎಂದು ಒತ್ತಾಯಿಸಿದ್ದರು.
ಅದರ ಬೆನ್ನಿಗೆ ರಾಹುಲ್ ನೇತೃತ್ವದ ಯುವ ಕಾಂಗ್ರೆಸ್‌ನಲ್ಲಿ ಐಎಸ್ಐ ಉಗ್ರನೊಬ್ಬ ಸೇರಿಕೊಂಡಿರುವುದು ಬಯಲಾಗಿರುವುದು ಮಹತ್ವ ಪಡೆದುಕೊಂಡಿದೆ.
ಇದು ರಾಷ್ಟ್ರೀಯ ಸುರಕ್ಷತೆಯ ವಿಚಾರವಾಗಿರುವುದರಿಂದ ಸಿಬಿಐ ಇದನ್ನು ತನಿಖೆ ನಡೆಸಬೇಕು. ಕೇಂದ್ರ ಸರಕಾರವು ಇಸ್ಲಾಮಿಕ್ ಭಯೋತ್ಪಾದನೆಯಿಂದ ಗಮನವನ್ನು ಬೇರೆಡೆಗೆ ಸೆಳೆಯಲು ಹಿಂದೂ ತೀವ್ರವಾದಿಗಳ ಕಡೆ ಬೆಟ್ಟು ಮಾಡಿ ತೋರಿಸುತ್ತಿದೆ ಎಂದು ಆರೋಪಿಸಿದ್ದರು.