ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಿಎಂ ಪತ್ನಿಗೆ ಈರುಳ್ಳಿ ಖರೀದಿಗೆ ಬ್ಯಾಂಕ್ ಸಾಲ ಬೇಕಂತೆ!
(loan for onion | Madhya Pradesh | Shivraj Singh Chouhan | Sadhna Singh)
ಹಗರಣಗಳು ಮತ್ತು ಬೆಲೆ ಏರಿಕೆಯನ್ನು ನಿಯಂತ್ರಿಸಲು ಸಂಪೂರ್ಣವಾಗಿ ವಿಫಲವಾಗಿರುವ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವನ್ನು ಈ ರೀತಿಯಾಗಿ ಅಪಹಾಸ್ಯ ಮಾಡಿರುವುದು ಮುಖ್ಯಮಂತ್ರಿಯೊಬ್ಬರ ಪತ್ನಿ. ಉಳ್ಳಾಗಡ್ಡಿ ಖರೀದಿಸಲು ಬ್ಯಾಂಕ್ ಸಾಲ ಬೇಕು ಎನ್ನುವುದೇ ಅವರ ಬೇಡಿಕೆ!
15ರಿಂದ 20 ರೂಪಾಯಿಗಳ ನಡುವೆಯಿದ್ದ ಈರುಳ್ಳಿ 80 ರೂಪಾಯಿಯನ್ನು ದಾಟಿ ಸೆಂಚೂರಿ ಹೊಡೆಯುವ ಸನ್ನಾಹದಲ್ಲಿದ್ದರೂ, ಕೇಂದ್ರ ಸರಕಾರ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಅವರ ಪತ್ನಿ ಸಾಧನಾ ಸಿಂಗ್ ಆರೋಪಿಸಿದ್ದಾರೆ.
ಬಿಜೆಪಿ ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷೆಯೂ ಆಗಿರುವ ಸಾಧನಾ ಸಿಂಗ್ ಗುರುವಾರ ಭೋಪಾಲದ ಬೀದಿಗಳಲ್ಲಿ ಪ್ರತಿಭಟನೆ ಮುಂದಾಳುತ್ವ ವಹಿಸಿದ್ದರು. ಈರುಳ್ಳಿ ಬೆಲೆಯನ್ನು ನಿಯಂತ್ರಿಸಲು ವಿಫಲವಾಗಿರುವ ಕೇಂದ್ರ ಸರಕಾರದ ನೀತಿಗಳ ವಿರುದ್ಧ ಬೀದಿಗಳಲ್ಲಿ ಪ್ರತಿಭಟನೆ ನಡೆಸಲಾಗಿತ್ತು.
ಈಗಲೂ ಭಾರತದ ಕೆಲವು ಮಾರುಕಟ್ಟೆಗಳಲ್ಲಿ ಪ್ರತಿ ಕೆ.ಜಿ. ನೀರುಳ್ಳಿಗೆ 60ರಿಂದ 70 ರೂಪಾಯಿಗಳಿವೆ. ಹಾಗಾಗಿ ನನಗೆ ಈರುಳ್ಳಿ ಖರೀದಿಸಲು ಬ್ಯಾಂಕ್ ಸಾಲ ಬೇಕಾಗಿದೆ ಎಂದಿರುವ ಸಾಧನಾ ಸಿಂಗ್, ಈ ಸಂಬಂಧ ಭರ್ತಿ ಮಾಡಿದ ಅರ್ಜಿಯನ್ನು ಪ್ರದರ್ಶಿಸಿದರು.
ಬೆಲೆಯೇರಿಕೆ ತನ್ನ ಗೃಹ ಚಟುವಟಿಕೆ ಮೇಲೆ ಯಾವ ರೀತಿಯ ಪರಿಣಾಮಗಳನ್ನು ಬೀರಿದೆ ಎನ್ನುವುದನ್ನು ವಿವರಿಸಿದ ಸಿಎಂ ಪತ್ನಿ, ಪ್ರತಿ ದಿನ ಏರಿಕೆಯಾಗುತ್ತಿರುವ ತರಕಾರಿ ಬೆಲೆಗಳಿಂದಾಗಿ ಮನೆ ವಾರ್ತೆಗೂ ತೊಂದರೆಯಾಗಿದೆ ಎಂದರು.
ಈರುಳ್ಳಿ ಬೆಲೆ ಗಗನಕ್ಕೇರುತ್ತಿದ್ದಂತೆ ತ್ವರಿತ ಕ್ರಮಕ್ಕೆ ಮುಂದಾಗಿದ್ದ ಕೇಂದ್ರವು ರಫ್ತು ನಿಷೇಧಿಸಿ ಆದೇಶ ಹೊರಡಿಸಿತ್ತು. ಬೆನ್ನಿಗೆ ಖಾಸಗಿ ಉದ್ಯಮಿಗಳು ಪಾಕಿಸ್ತಾನದಿಂದ ಈರುಳ್ಳಿ ಆಮದು ಮಾಡಿಕೊಂಡಿದ್ದರು. ಆದರೂ ದಲ್ಲಾಳಿಗಳ ಕಾರಣದಿಂದ ಈರುಳ್ಳಿ ಬೆಲೆ ಈ ಹಿಂದಿನ ಮಟ್ಟಕ್ಕೆ ಇಳಿಯುತ್ತಿಲ್ಲ ಎಂದು ಹೇಳಲಾಗಿದೆ.
ಬೆಲೆಯೇರಿಕೆ ನಿಯಂತ್ರಿಸಲು ಇರುವ ದಾರಿ ಒಂದೇ ಒಂದು. ಅದು ಅಕ್ರಮ ದಾಸ್ತಾನುದಾರರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿಸುವುದು. ಹೀಗೆ ಮಾಡಿದಲ್ಲಿ ಖಂಡಿತಾ ಬೆಲೆಯೇರಿಕೆಯನ್ನು ಹತೋಟಿಗೆ ತರಬಹುದಾಗಿದೆ ಎಂದು ಜನತಾ ಪಕ್ಷದ ಸುಬ್ರಮಣ್ಯನ್ ಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.