ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಲ್ಮಾಡಿ ಹಗರಣ; ಊರು ಕೊಳ್ಳೆ ಹೊಡೆದ ಸಿಬಿಐ ದಾಳಿ (CWG scam | CBI | Suresh Kalmadi | India)
Bookmark and Share Feedback Print
 
ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬ ಮಾತನ್ನು ಈ ಹೊತ್ತಿನಲ್ಲಿ ಸ್ಮರಿಸಿಕೊಳ್ಳಬಹುದು. ಯಾಕೆಂದರೆ ಕಾಮನ್‌ವೆಲ್ತ್ ಗೇಮ್ಸ್ ಹಗರಣ ನಡೆದು ಬರೋಬ್ಬರಿ ಮೂರು ತಿಂಗಳುಗಳಾದ ನಂತರ ಇದರ ಸೂತ್ರಧಾರಿ, ಕಾಂಗ್ರೆಸ್ ನಾಯಕ ಸುರೇಶ್ ಕಲ್ಮಾಡಿಯವರ ನಿವಾಸಗಳ ಮೇಲೆ ಸಿಬಿಐ ದಾಳಿ ನಡೆಸಿ 'ಪೌರುಷ' ಪ್ರದರ್ಶಿಸಿದೆ.
PTI

ಅಕ್ಟೋಬರ್ 3ರಿಂದ 14ರವರೆಗೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದ್ದ ಕ್ರೀಡಾಕೂಟದ ಸಂಘಟನಾ ಸಮಿತಿಯ ಅಧ್ಯಕ್ಷರಾಗಿದ್ದ ಕಲ್ಮಾಡಿಯವರು ಭಾರೀ ಅವ್ಯವಹಾರ ನಡೆಸಿದ್ದಾರೆ ಎಂದು ಗೇಮ್ಸ್ ಆರಂಭಕ್ಕೂ ಮೊದಲು ಆರೋಪಿಸಲಾಗಿತ್ತು. ಆದರೆ ಸಿಬಿಐ ಈಗ ದಾಳಿ ನಡೆಸಿದೆ. ಅದೂ ದಾಖಲೆಗಳನ್ನು ವಶ ಪಡಿಸಿಕೊಳ್ಳಲು!

ಕಲ್ಮಾಡಿಯವರ ದೆಹಲಿ ಮತ್ತು ಪುಣೆಗಳಲ್ಲಿನ ನಿವಾಸಗಳಿಗೆ ಇಂದು ಮುಂಜಾನೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಳಿಗ್ಗೆ ಏಳು ಗಂಟೆಗೆ 10ಕ್ಕೂ ಹೆಚ್ಚು ಸಿಬಿಐ ಅಧಿಕಾರಿಗಳು ಎರಡೂ ಕಡೆ ಏಕಕಾಲದಲ್ಲಿ ದಾಳಿ ನಡೆಸಿದರು.

ಕಲ್ಮಾಡಿಯವರ ಜತೆ ಅವರ ಆಪ್ತ ಕಾರ್ಯದರ್ಶಿ ಮನೋಜ್ ಭುರೆಯವರ ನಿವಾಸದ ಮೇಲೂ ದಾಳಿ ಮಾಡಲಾಗಿದೆ.

ಹಗರಣದ ತನಿಖೆಯಲ್ಲಿ ಬೆಳಕು ಚೆಲ್ಲಬಹುದಾದ ಗೇಮ್ಸ್ ಒಪ್ಪಂದಗಳ ಕೆಲವು ಮಹತ್ವದ ದಾಖಲೆ ಪತ್ರಗಳು ಕಾಣೆಯಾಗಿದೆ ಎಂದು ಹೇಳಲಾದ ಮರುದಿನ ಈ ದಾಳಿ ನಡೆದಿದೆ. ದಾಖಲೆಗಳನ್ನು ನಾಶ ಪಡಿಸಲಾಗಿದೆ ಅಥವಾ ಅಡಗಿಸಿಟ್ಟಿರಬಹುದು ಎಂಬ ಭೀತಿ ಹಿನ್ನೆಲೆಯಲ್ಲಿ ಸಿಬಿಐ ಕಾರ್ಯಾಚರಣೆ ನಡೆಸುತ್ತಿದೆ.

ಸಂಘಟನಾ ಸಮಿತಿಯ ಅಧಿಕಾರಿಗಳು ಕೆಲವು ದಾಖಲೆಗಳನ್ನು ತಿರುಚಿರುವುದು ಮತ್ತು ತಮಗೆ ಸುಳ್ಳು ದಾಖಲೆಗಳನ್ನು ಒಪ್ಪಿಸಿರುವ ಕ್ರಿಮಿನಲ್ ಷಡ್ಯಂತ್ರದ ಕುರಿತು ಸಿಬಿಐ ಅಧಿಕಾರಿಗಳಿಗೆ ಸಾಕಷ್ಟು ಪುರಾವೆ ಸಿಕ್ಕಿದೆ. ಅದೇ ಕಾರಣದಿಂದ ಕೆಲವು ದಾಖಲೆಗಳು ಯಾರಿಗೂ ಸಿಗದಂತೆ ಮಾಡಿದ್ದರು.

ಪುಣೆ ಮೂಲದ ಕಾಂಗ್ರೆಸ್ ನಾಯಕರಾಗಿರುವ ಕಲ್ಮಾಡಿಯವರನ್ನು ಆರಂಭದಲ್ಲಿ ರಕ್ಷಿಸಲು ಮುಂದಾಗಿದ್ದ ಕಾಂಗ್ರೆಸ್, ಪ್ರತಿಪಕ್ಷಗಳ ಒತ್ತಡದ ಹಿನ್ನೆಲೆಯಲ್ಲಿ ನೇರವಾಗಿ ಬೆಂಬಲಿಸುವುದನ್ನು ಕೈ ಬಿಟ್ಟಿತ್ತು. ಇವರ ಜತೆ ಆರೋಪ ಎದುರಿಸುತ್ತಿರುವ ಮತ್ತೊಂದು ಪ್ರಮುಖ ಹೆಸರು, ದೆಹಲಿ ಮುಖ್ಯಮಂತ್ರಿ (ಕಾಂಗ್ರೆಸ್) ಶೀಲಾ ದೀಕ್ಷಿತ್.
ಸಂಬಂಧಿತ ಮಾಹಿತಿ ಹುಡುಕಿ