ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅನಂತ್, ಗಡ್ಕರಿ ಮೇಲೆ ನೀರಾ 'ರಾಡಿ'; ಬಿಜೆಪಿಗೆ ಮುಖಭಂಗ (BJP | Niira Radia | Rao Dheeraj Singh | Ananth Kumar)
Bookmark and Share Feedback Print
 
ಸ್ವತಃ ಬಿಜೆಪಿ ನಾಯಕ ಅನಂತ್ ಕುಮಾರ್ ಲಾಬಿಗಾರ್ತಿ ನೀರಾ ರಾಡಿಯಾ ಜತೆ ಆಪ್ತ ಸಂಬಂಧ ಹೊಂದಿದ್ದರು, ಅವರು ಕಾರ್ಪೊರೇಟ್ ಲಾಬಿಯಿಂದ ಪಾಲನ್ನು ಕೂಡ ತೆಗೆದುಕೊಂಡಿದ್ದರು ಎಂದು ಆರೋಪಿಸಲಾಗಿದ್ದು, 2ಜಿ ಹಗರಣದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ವಿರುದ್ಧ ಹೋರಾಟ ನಡೆಸುತ್ತಿದ್ದ ಪ್ರಮುಖ ಪ್ರತಿಪಕ್ಷ ಬಿಜೆಪಿ ತೀವ್ರ ಮುಖಭಂಗ ಅನುಭವಿಸಿದೆ.

ಇಂತಹ ಗಂಭೀರ ಆರೋಪಗಳನ್ನು ಮಾಡಿರುವುದು ರಾಡಿಯಾ ಮಾಜಿ ಪಾಲುದಾರ ರಾವ್ ಧೀರಜ್ ಸಿಂಗ್. ನಿರೀಕ್ಷೆಯಂತೆ ಸ್ವತಃ ಅನಂತ್ ಕುಮಾರ್ ಸೇರಿದಂತೆ ಬಿಜೆಪಿ ನಾಯಕರು ಆರೋಪವನ್ನು ತಳ್ಳಿ ಹಾಕಿದ್ದಾರೆ. ಅಲ್ಲದೆ, ಧೀರಜ್ ಮೇಲೆ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಪ್ರಕಟಿಸಿದ್ದಾರೆ.
NRB

ನೀರಾ ರಾಡಿಯಾ ಪುತ್ರನನ್ನು 2003ರಲ್ಲಿ ಅಪಹರಿಸಿದ್ದ ಆರೋಪ ಎದುರಿಸುತ್ತಿರುವ ಅವರ ಮಾಜಿ ಪಾಲುದಾರ ಧೀರಜ್ ಗುರುವಾರ ಇದ್ದಕ್ಕಿದ್ದಂತೆ ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿದ್ದು, ಅನಂತ್ ಕುಮಾರ್ ಮತ್ತು ರಾಡಿಯಾ ಜತೆಯಾಗಿ ಕಾರ್ಪೊರೇಟ್ ಡೀಲ್‌ಗಳನ್ನು ಕುದುರಿಸುತ್ತಿದ್ದರು ಎಂದು ಆರೋಪಿಸಿದ್ದಾರೆ.

ರಾಡಿಯಾರನ್ನು ತನ್ನ ಪತ್ನಿ ಎಂದು ತೋರಿಸುವ ಕ್ರೆಡಿಟ್ ಕಾರ್ಡ್ ಸೇರಿದಂತೆ ಇನ್ನಿತರ ದಾಖಲೆಗಳನ್ನೂ ಧೀರಜ್ ಪ್ರದರ್ಶಿಸಿದ್ದಾರೆ. ಆರೋಪಗಳನ್ನು ಧೀರಜ್ ಮಾತುಗಳಲ್ಲೇ ಕೇಳಿ.

ರಾಡಿಯಾ-ಅನಂತ್ ಲಿಂಕ್...
ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಅಧಿಕಾರದಲ್ಲಿದ್ದ 1998ರಲ್ಲಿ ಕೇಂದ್ರ ಸಚಿವರಾಗಿದ್ದ ಬಿಜೆಪಿ ನಾಯಕ ಅನಂತ್ ಕುಮಾರ್, ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗುತ್ತಿದ್ದ ಪ್ರಮುಖ ನಿರ್ಧಾರಗಳ ಕುರಿತು ಲಾಬಿಗಾರ್ತಿ ನೀರಾ ರಾಡಿಯಾಗೆ ಮಾಹಿತಿ ನೀಡುತ್ತಿದ್ದರು. ಸಂಪುಟದ ರಹಸ್ಯ ದಾಖಲೆಗಳನ್ನು ಯಾರಿಗೂ ತಿಳಿಯದಂತೆ ರಾಡಿಯಾಗೆ ರವಾನಿಸುತ್ತಿದ್ದರು.

ಸಂಪುಟದ ಮಹತ್ವದ ದಾಖಲೆಗಳನ್ನು ಪಡೆದುಕೊಳ್ಳುತ್ತಿದ್ದ ರಾಡಿಯಾ, ಅದನ್ನು ತನ್ನ ಫ್ರಾನ್ಸ್ ಸೇರಿದಂತೆ ವಿದೇಶಗಳ ಗ್ರಾಹಕರಿಗೆ ನೀಡುತ್ತಿದ್ದರು. ಒಂದು ಹಂತದಲ್ಲಿ ರಾಡಿಯಾ ರಕ್ಷಣಾ ವ್ಯವಹಾರಗಳ ಡೀಲುಗಳನ್ನು ಕೂಡ ಪಡೆದುಕೊಳ್ಳಲು ಬಯಸಿದ್ದರು.

ಪ್ರಸಕ್ತ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದರಾಗಿರುವ ಅನಂತ್ ಕುಮಾರ್, ರಾಡಿಯಾ ಮತ್ತು ಸರಕಾರದ ನಡುವೆ ಸಂಪರ್ಕ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ದೂರವಾಣಿ ಕಂಪನಿಗಳ ಪರವಾಗಿ ಮತ್ತು ವಿಮಾನ ಕಂಪನಿಗಳ ಪರವಾಗಿ ರಾಡಿಯಾ ತನ್ನ ವ್ಯವಹಾರಗಳನ್ನು ಕುದುರಿಸಲು ಅನಂತ್ ಕುಮಾರ್ ಅವರನ್ನು ಬಳಸುತ್ತಿದ್ದರು.

ಶುರುವಾದದ್ದೇ ಬಿಜೆಪಿ ಕಾಲದಲ್ಲಿ...
ನಮ್ಮ ವ್ಯವಹಾರಗಳು ಸರಿಯಾದ ದಾರಿಯಲ್ಲಿ ಸಾಗಲು ಆರಂಭವಾದದ್ದೇ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗ. ನಾವು ನಡೆಸಿದ 'ಕೆಎಲ್ಎಂ ಯುಕೆ' ಡೀಲ್‌ನ ನಂತರ ಹಲವು ಕಂಪನಿಗಳು ರಾಡಿಯಾರನ್ನು ಸಂಪರ್ಕಿಸಲು ಆರಂಭಿಸಿದ್ದವು.

ಆ ಹೊತ್ತಿನಲ್ಲಿ ಕೇಂದ್ರದಲ್ಲಿ ಅನಂತ್ ಕುಮಾರ್ ನಾಗರಿಕ ವಾಯುಯಾನ ಸಚಿವರಾಗಿದ್ದರು. ಸಹರಾ ಕಂಪನಿಗೂ ನಾವು ಕೆಲವು ಹೆಲಿಕಾಪ್ಟರುಗಳನ್ನು ಮಾರಾಟ ಮಾಡಿದ್ದೆವು. ಏರ್‌ಬಸ್ ಒಕ್ಕೂಟ ಕೂಡ ರಾಡಿಯಾರನ್ನು ಬೆಂಬಲಿಸಲು ತೊಡಗಿತ್ತು. ನಂತರ ನಾವು ಕರ್ನಾಟಕ ಮತ್ತು ಮಹಾರಾಷ್ಟ್ರ ಸರಕಾರಗಳಿಗೂ ಯೂರೋಕಾಪ್ಟರುಗಳನ್ನು ಮಾರಾಟ ಮಾಡಿದ್ದೆವು. ಆಗ ಮಹಾರಾಷ್ಟ್ರದಲ್ಲಿ ಬಿಜೆಪಿ ಸರಕಾರ ಆಡಳಿತದಲ್ಲಿತ್ತು.

ಅನಂತ್ ಕುಮಾರ್ ಜತೆ ರಾಡಿಯಾ ಅತ್ಯುತ್ತಮ ಸಂಬಂಧ ಹೊಂದಿದ್ದರು. ಅವರ ಕಾರಣದಿಂದಲೇ ಎಲ್ಲವೂ ನಾವಂದುಕೊಂಡಂತೆ ನಡೆಯುವುದು ಸಾಧ್ಯವಾಯಿತು.

ಗಡ್ಕರಿ ಕೂಡ ಸಹಕರಿಸಿದ್ದರು...
ಯೂರೋಕಾಪ್ಟರ್ ಡೀಲ್ ಸಂದರ್ಭದಲ್ಲಿ ನಾವು ಬಿಜೆಪಿ ಹಿರಿಯ ನಾಯಕರಾಗಿದ್ದ, ಪ್ರಸಕ್ತ ಬಿಜೆಪಿ ಅಧ್ಯಕ್ಷರಾಗಿರುವ ನಿತಿನ್ ಗಡ್ಕರಿಯವರ ಜತೆ ಮಾತುಕತೆ ನಡೆಸಿದ್ದೆವು.

ಮಹಾರಾಷ್ಟ್ರ ಸರಕಾರದ ಜತೆ ಹೆಲಿಕಾಪ್ಟರ್ ವ್ಯವಹಾರ ಮಾತುಕತೆ ನಡೆಯುತ್ತಿದ್ದ ಸಂದರ್ಭದಲ್ಲಿ, ನಾನು ಮತ್ತು ರಾಡಿಯಾ ನಾಗ್ಪುರಕ್ಕೆ ತೆರಳಿ ಗಡ್ಕರಿಯವರನ್ನು ಭೇಟಿ ಮಾಡಿದ್ದೆವು. ಅವರು ರಾಡಿಯಾರಿಗೆ ಬೆಂಬಲ ಸೂಚಿಸಿದ್ದರು.

ಸ್ವಿಸ್ ಬ್ಯಾಂಕಿನಲ್ಲಿ ಭಾರೀ ಹಣವಿದೆ...
ರಾಡಿಯಾ, ಆಕೆಯ ಸಹೋದರಿ ಕರುಣಾ ಮತ್ತು ನಾನು ಸ್ವಿಸ್ ಬ್ಯಾಂಕ್ ಖಾತೆ ತೆರೆಯಲು ಝುರಿಕ್‌ಗೆ ಹೋಗಿದ್ದೆವು. ನಾನು ದೆಹಲಿಗೆ ಬಂದ ನಂತರ ಆ ಬ್ಯಾಂಕಿನ ಹೆಸರು ಮತ್ತು ಖಾತೆಯ ನಂಬರ್ ನೀಡುತ್ತೇನೆ.

1998ರಿಂದ 2001ರ ನಡುವಿನ ಡೀಲ್‌ಗಳಿಂದ ಗಳಿಸಿದ ಹಣ ಸ್ವಿಜರ್ಲೆಂಡ್‌ನ ಝುರಿಕ್ ಮತ್ತು ಫ್ರಾನ್ಸ್‌ನ ಚಾನೆಲ್ ಐಸ್ಲೆಂಡ್ಸ್‌ ಬ್ಯಾಂಕುಗಳಲ್ಲಿ ಜಮಾ ಆಗುತ್ತಿದ್ದವು. ಅಲ್ಲಿ ಎಷ್ಟು ಹಣವಿದೆ ಎಂಬ ಖಚಿತ ಮಾಹಿತಿ ನನಗಿಲ್ಲ. ಆದರೆ ಭಾರೀ ಪ್ರಮಾಣದ ಹಣ ಇರುವುದಂತೂ ಹೌದು.

ಅಡ್ವಾಣಿಯೂ ಹೊರತಲ್ಲ...
ರಾಡಿಯಾ ಅವರ ಬಿಜೆಪಿ ಸರಕಾರದ ಜತೆಗಿನ ಸಂಬಂಧ ಕೇವಲ ಅನಂತ್ ಕುಮಾರ್ ಅವರಿಗೆ ಸೀಮಿತವಾಗಿರಲಿಲ್ಲ. 2002ರಲ್ಲಿ ವಸಂತ್ ಕುಂಜ್‌ನಲ್ಲಿನ ರಾಡಿಯಾ ಅವರ ಟ್ರಸ್ಟ್‌ಗೆ ಎನ್‌ಡಿಎ ಸರಕಾರವು ಭಾರೀ ಪ್ರಮಾಣದ ಜಮೀನು ಮಂಜೂರು ಮಾಡಿತ್ತು. ಸ್ವತಃ ಬಿಜೆಪಿ ವರಿಷ್ಠ ಎಲ್.ಕೆ. ಅಡ್ವಾಣಿಯವರು ಬಂದು ಇದಕ್ಕೆ ಶಂಕು ಸ್ಥಾಪನೆ ನೆರವೇರಿಸಿದ್ದರು.

ಅನಂತ್‌ಗೂ ಸ್ವಿಸ್ ಪಾಲು...
ಝುರಿಕ್‌ನಲ್ಲಿ ಬ್ಯಾಂಕಿನಲ್ಲಿ ಭಾರೀ ಪ್ರಮಾಣದ ಹಣವಿದೆ. ಅದರಲ್ಲಿನ ಒಂದು ಭಾಗ ನನಗೆ ಬರಬೇಕಿತ್ತು. ಆಕೆ ನನಗೆ 1.2 ಕೋಟಿ ರೂಪಾಯಿ ಕೊಡುತ್ತೇನೆ ಎಂದು ಹೇಳಿದ್ದರಿಂದ ನಮ್ಮಿಬ್ಬರ ನಡುವೆ ಭಾರೀ ಗಲಾಟೆ ನಡೆದಿತ್ತು.

ಅಲ್ಲಿ ಸಾಕಷ್ಟು ಸಮಸ್ಯೆಗಳಿವೆ, ಆ ಹಣವನ್ನು ಭಾರತಕ್ಕೆ ಮರಳಿ ತರುವುದು ಅಷ್ಟು ಸುಲಭವಲ್ಲ. ಅದು ಈಗ ಸಾಧ್ಯವಾಗುತ್ತಿಲ್ಲ. ಅಲ್ಲದೆ ಸ್ವಿಸ್ ಖಾತೆಯಲ್ಲಿರುವ ಹಣದಲ್ಲಿ ಒಂದು ಪಾಲು ಬಿಜೆಪಿ ನಾಯಕ ಅನಂತ್ ಕುಮಾರ್ ಅವರಿಗೆ ಸೇರಬೇಕು ಎಂದು ಹೇಳಿದ್ದರು ಎಂದು ಧೀರಜ್ ಆರೋಪಿಸಿದ್ದಾರೆ.

ಕಿಡಿಯಾಗಿದೆ ಬಿಜೆಪಿ...
ರಾವ್ ಧೀರಜ್ ಸಿಂಗ್ ಆರೋಪಗಳಿಂದ ಕೆಂಡಾಮಂಡಲವಾಗಿರುವ ಬಿಜೆಪಿ, ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದೆ.

ಆ ರಾಡಿಯಾ ಎಂದರೆ ಯಾರು ಅಂತಾನೇ ನನಗೆ ಗೊತ್ತಿಲ್ಲ. ಧೀರಜ್ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಸ್ವತಃ ನಿತಿನ್ ಗಡ್ಕರಿ ಸ್ಪಷ್ಟನೆ ನೀಡಿದ್ದಾರೆ. ಬಿಜೆಪಿ ವಕ್ತಾರರು ಕೂಡ ತಮ್ಮ ನಾಯಕರ ಬೆಂಬಲಕ್ಕೆ ನಿಂತಿದ್ದು, ಇದು ವ್ಯವಸ್ಥಿತ ಪಿತೂರಿ ಎಂದು ತಿರುಗೇಟು ನೀಡಿದ್ದಾರೆ.

ಯಡಿಯೂರಪ್ಪ ಬೆಂಬಲ...
ಆರೋಪಗಳನ್ನು ತಳ್ಳಿ ಹಾಕಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಅನಂತ್ ಕುಮಾರ್ ಕೇಂದ್ರ ಸಚಿವರಾಗಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದವರು. ಧೀರಜ್ ಸಿಂಗ್ ಮಾಡಿರುವ ಆರೋಪಗಳು ಸುಳ್ಳು ಎಂದಿದ್ದಾರೆ.

ಧೀರಜ್ ಆರೋಪಗಳು ನಿರಾಧಾರ. ಈ ಕುರಿತು ತನಿಖೆಯ ನಂತರ ಸತ್ಯಾಂಶ ಹೊರ ಬೀಳಲಿದೆ. ಸುಳ್ಳು ಆರೋಪ ಸ್ವತಃ ಕಾಂಗ್ರೆಸ್ಸಿಗೆ ತಿರುಗುಬಾಣವಾಗಲಿದೆ ಎಂದು ಯಡಿಯೂರಪ್ಪ ಅಭಿಪ್ರಾಯಪಟ್ಟಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ