ಮುಂಬೈಗೆ ನುಗ್ಗಿದ್ದಾರೆ ನಾಲ್ವರು ಲಷ್ಕರ್ ಉಗ್ರರು, ಎಚ್ಚರಿಕೆ
ಮುಂಬೈ, ಶುಕ್ರವಾರ, 24 ಡಿಸೆಂಬರ್ 2010( 13:41 IST )
ಎರಡು ವರ್ಷಗಳ ಹಿಂದೆ ಮುಂಬೈ ಮೇಲೆ ದಂಡೆತ್ತಿ ಬಂದಿತ್ತ ಪಾಕಿಸ್ತಾನಿ ಉಗ್ರರು ಮತ್ತೆ ದಾಳಿಗೆ ಸಂಚು ರೂಪಿಸಿದ್ದಾರೆ. ಲಷ್ಕರ್ ಇ ತೋಯ್ಬಾದ ನಾಲ್ವರು ಭಯೋತ್ಪಾದಕರು ದಾಳಿ ನಡೆಸಲು ವಾಣಿಜ್ಯ ನಗರಿಗೆ ನುಗ್ಗಿದ್ದಾರೆ ಎಂದು ಮುಂಬೈ ಪೊಲೀಸರು ಕಟ್ಟೆಚ್ಚರ ರವಾನಿಸಿದ್ದಾರೆ.
ಸಮಾಜದಲ್ಲಿ ಅಶಾಂತಿಯನ್ನು ಸೃಷ್ಟಿಸುವ ಸಲುವಾಗಿ ಪಾಕಿಸ್ತಾನಿ ಪಾತಕಿಗಳು ನಗರಕ್ಕೆ ನುಸುಳಿದ್ದಾರೆ. ಹಾಗಾಗಿ ಮಹಾನಗರದ ಜನತೆ ಎಚ್ಚರಿಕೆಯಿಂದ ಇರಬೇಕು ಎಂದು ಉಗ್ರರಲ್ಲೋರ್ವನ ಭಾವಚಿತ್ರವನ್ನು ಬಿಡುಗಡೆ ಮಾಡಿರುವ ಮುಂಬೈ ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಹಿಮಾಂಶು ರಾಯ್ ತಿಳಿಸಿದ್ದಾರೆ.
ನಾಲ್ವರು ಉಗ್ರರನ್ನು ಅಬ್ದುಲ್ ಕರೀಮ್ ಮೂಸಾ, ನೂರ್ ಅಬೂ ಇಲಾಹಿ, ವಲೀದ್ ಜಿನ್ನಾ ಮತ್ತು ಮಹಫೂಜ್ ಆಲಂ ಎಂದು ಗುರುತಿಸಲಾಗಿದೆ. ವಿದ್ವಂಸಕ ಕೃತ್ಯಗಳನ್ನು ನಡೆಸಲು ಅವರು ಮುಂಬೈಗೆ ನುಗ್ಗಿದ್ದಾರೆ ಎಂದು ಪೊಲೀಸರು ವಿವರಣೆ ನೀಡಿದ್ದಾರೆ.
ಕ್ರಿಸ್ಮಸ್ ಮತ್ತು ಹೊಸ ವರ್ಷದ ಸಂಭ್ರಮದ ಸಂದರ್ಭಗಳಲ್ಲಿ ವಿವಿಧ ಪ್ರದೇಶಗಳ ಮೇಲೆ ದಾಳಿ ನಡೆಸಲು ದುಷ್ಕರ್ಮಿಗಳು ಸಂಚು ರೂಪಿಸಿದ್ದಾರೆ. ಅವರು ನಿರ್ದಿಷ್ಟವಾಗಿ ಯಾವ ದೇಶಕ್ಕೆ ಸೇರಿದವರು ಎಂಬ ಬಗ್ಗೆ ನನ್ನಲ್ಲಿ ಖಚಿತ ಮಾಹಿತಿಗಳಿಲ್ಲ. ಆದರೆ ಅವರು ಪಾಕಿಸ್ತಾನದ ಲಷ್ಕರ್ ಭಯೋತ್ಪಾದಕ ಸಂಘಟನೆಗೆ ಸೇರಿದವರು ಎಂದರು.
ನಾಲ್ವರು ವ್ಯಕ್ತಿಗಳಲ್ಲಿ ಒಬ್ಬನ ಕುರಿತು ಮಾತ್ರ ನಿರ್ದಿಷ್ಟ ಮಾಹಿತಿ ಸಿಕ್ಕಿದೆ. ಆತನ ಭಾವಚಿತ್ರ ಕೂಡ ಬಿಡುಗಡೆ ಮಾಡಿದ್ದೇವೆ. ಉಗ್ರರೆಲ್ಲರೂ 20ರಿಂದ 30ರ ನಡುವಿನ ವಯಸ್ಸಿನವರು. ಈ ಬೆದರಿಕೆ ಗಂಭೀರವಾದದ್ದು ಎಂದು ಆಯುಕ್ತರು ವಿವರಣೆ ನೀಡಿದರು.
ಈ ನಾಲ್ವರು ಉಗ್ರರ ತಂತ್ರಗಳನ್ನು ವಿಫಲಗೊಳಿಸಲು ನಮ್ಮ ವಿಶೇಷ ದಳಗಳಿಗೆ ಸೂಚನೆ ನೀಡಿದ್ದೇವೆ. ಯಾವುದೇ ಶಂಕಿತ ವ್ಯಕ್ತಿಯನ್ನು ಜನತೆ ನೋಡಿದಲ್ಲಿ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದಿರುವ ಅವರು, ನಾಲ್ಕಕ್ಕಿಂತ ಹೆಚ್ಚು ಮಂದಿ ನುಗ್ಗಿರುವ ಸಾಧ್ಯತೆಗಳ ಬಗ್ಗೆ ಹೆಚ್ಚು ಮಾತನಾಡಲು ನಿರಾಕರಿಸಿದರು.