ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಲವಂತದ ಆಹಾರ; ನಾಯ್ಡು ಉಪವಾಸಕ್ಕೆ ವೈದ್ಯರ ತಡೆ? (Andhra Pradesh | N. Chandrababu Naidu | intravenous fluids | TDP)
Bookmark and Share Feedback Print
 
ಭಾರೀ ಮಳೆಯಿಂದಾಗಿ ಬೆಳೆ ಕಳೆದುಕೊಂಡಿರುವ ರೈತರಿಗೆ ಹೆಚ್ಚಿನ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಕಳೆದ ಏಳು ದಿನಗಳಿಂದ ಉಪವಾಸ ನಿರಶನ ನಡೆಸುತ್ತಿರುವ ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಬಲವಂತದಿಂದ ದ್ರವಾಹಾರವನ್ನು ನಳಿಕೆಯ ಮೂಲಕ ನೀಡಲಾಗಿದೆ. ಆದರೂ ತೆಲುಗು ದೇಶಂ ವರಿಷ್ಠ ತನ್ನ ಉಪವಾಸವನ್ನು ಮುಂದುವರಿಸಿದ್ದಾರೆ ಎಂದು ಕಾರ್ಯಕರ್ತರು ಹೇಳಿಕೊಂಡಿದ್ದಾರೆ.

ಕಳೆದೊಂದು ವಾರದಿಂದ ಉಪವಾಸ ನಡೆಸುತ್ತಿರುವ ನಾಯ್ಡು ಅವರ ಆರೋಗ್ಯ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ, ತುರ್ತು ಕ್ರಮ ಕೈಗೊಳ್ಳದೆ ಬೇರೆ ದಾರಿಯಿರಲಿಲ್ಲ ಎಂದು ಇಲ್ಲಿನ ನಿಜಾಮ್ಸ್ ಇನ್ಸಿಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನ (ಎನ್ಐಎಂಎಸ್) ನಿರ್ದೇಶಕ ಪಿ.ವಿ. ರಮೇಶ್ ತಿಳಿಸಿದ್ದಾರೆ.

ನಾಯ್ಡು ಅವರ ಆರೋಗ್ಯವನ್ನು ಸಹಜ ಸ್ಥಿತಿಗೆ ತರುವ ಸಂಬಂಧ ನ್ಯಾಯಾಧೀಶರಿಂದ ಅನುಮತಿ ಪತ್ರ ಪಡೆದ ಪೋಲಿಸರು, ಆಸ್ಪತ್ರೆಯಲ್ಲಿ ನಾಯ್ಡು ಜತೆಗಿದ್ದ ಪಕ್ಷದ ಕೆಲವು ಪ್ರಮುಖರನ್ನು ಬಲವಂತವಾಗಿ ಕೋಣೆಯಿಂದ ಹೊರ ಕಳಿಸಿದರು. ಇದೇ ಸಂದರ್ಭದಲ್ಲಿ ಅಲ್ಲಿದ್ದ ಅವರ ಪತ್ನಿ ಭುವನೇಶ್ವರಿ ಹಾಗೂ ಸಂಬಂಧಿಕರನ್ನೂ ಹೊರ ಹೋಗಲು ಆದೇಶಿಸಲಾಯಿತು.

ಉಪವಾಸ ಮಾಡುತ್ತಾ ಕಳೆದ ಸೋಮವಾರದಿಂದ ಯಾವುದೇ ಔಷಧ ಸೇವಿಸಲು ನಿರಾಕರಿಸಿದ್ದ ನಾಯ್ಡು ಅವರನ್ನು ನಂತರ ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸಿ, ಬಲವಂತವಾಗಿ ನಾಲ್ಕು ಪೌಷ್ಠಿಕ ಚುಚ್ಚುಮದ್ದನ್ನು ನೀಡಲಾಯಿತು.

ನಾಯ್ಡು ಆಪ್ತರಾದ ಪ್ರಸಿದ್ಧ ಹೃದ್ರೋಗ ತಜ್ಞ ಬಿ. ಸೋಮರಾಜು ಸೇರಿದಂತೆ ಐದು ಮಂದಿ ವೈದ್ಯರ ತಂಡ ಆರೋಗ್ಯ ತಪಾಸಣೆ ನಡೆಸಿದರು. ಹೀಗೆ ಬಿಟ್ಟಲ್ಲಿ ನಾಯ್ಡು ಪ್ರಜ್ಞಾಹೀನ ಸ್ಥಿತಿಗೆ ತಲುಪಿ, ಅಂಗಾಂಗ ವೈಫಲ್ಯಗಳು ಎದುರಾಗಬಹುದು ಎಂದು ವೈದ್ಯರು ಕಂಡುಕೊಂಡು ಚಿಕಿತ್ಸೆ ನೀಡಲು ನಿರ್ಧರಿಸಿದರು.

ನಾಯ್ಡು ಅವರಿಗೆ ಬಲವಂತವಾಗಿ ದ್ರವಾಹಾರ ನೀಡಿರುವುದಕ್ಕೆ ಪೊಲೀಸರು ಹಾಗೂ ಆಸ್ಪತ್ರೆ ಆಡಳಿತ ಮಂಡಳಿಯ ವಿರುದ್ಧ ಟಿಡಿಪಿ ಆಕ್ರೋಶ ವ್ಯಕ್ತಪಡಿಸಿದೆ. ತಮ್ಮ ನಾಯಕ ಈಗಲೂ ಉಪವಾಸ ನಿರತರಾಗಿದ್ದಾರೆ. ಸರಕಾರದಿಂದ ಸಂತ್ರಸ್ತ ರೈತರಿಗೆ ಹೆಚ್ಚಿನ ಪರಿಹಾರ ಬಿಡುಗಡೆಯಾಗುವವರೆಗೂ ಉಪವಾಸದಲ್ಲೇ ಮುಂದುವರೆಯಲಿದ್ದಾರೆ ಎಂದು ಕಾರ್ಯಕರ್ತರು ಹೇಳಿಕೊಂಡಿದ್ದಾರೆ.

ತೀವ್ರ ಮಳೆಯಿಂದ ನಷ್ಟ ಅನುಭವಿಸಿರುವ ರೈತರ ಬವಣೆ ನೀಗಿಸಲು, ಸರಕಾರವು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ, ಪ್ರತೀ ಎಕರೆಯ ವಾಣಿಜ್ಯ ಬೆಳೆಗೆ ರೂ.15,000 ಮತ್ತು ಆಹಾರೋತ್ಪನ್ನ ಬೆಳೆಗೆ ರೂ.10,000 ಪರಿಹಾರ ಧನ ವಿತರಿಸಬೇಕೆಂದು ನಾಯ್ಡು ಬೇಡಿಕೆ ಸಲ್ಲಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ