ಪಾಕಿಸ್ತಾನದ ಉಗ್ರ ಸಂಘಟನೆಗಳ ಜತೆ ಕೈ ಜೋಡಿಸಿ ದೇಶದಾದ್ಯಂತ ಹಲವು ಭಯೋತ್ಪಾದನಾ ಕೃತ್ಯಗಳನ್ನು ಎಸಗಿ ನಿಷೇಧಕ್ಕೊಳಗಾಗಿರುವ ಸಿಮಿ ಜತೆ ತನಗೆ ಯಾವುದೇ ಸಂಬಂಧವಿಲ್ಲ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸ್ಪಷ್ಟಪಡಿಸಿದೆ.
ಭಾರತೀಯ ವಿದ್ಯಾರ್ಥಿಗಳ ಇಸ್ಲಾಮಿಕ್ ಸಂಘಟನೆಯು (ಸಿಮಿ) ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್ಐ) ಅಡಿಯಲ್ಲಿ ಮರು ಸಂಘಟಿತಗೊಳ್ಳುತ್ತಿದೆ ಎಂಬ ವರದಿಗಳು ದುರದೃಷ್ಟಕರ ಮತ್ತು ಆಧಾರ ರಹಿತವಾದುದು ಎಂದು ಪಿಎಫ್ಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಕಳೆದ 20 ವರ್ಷಗಳಿಂದ ನಾವು ಸಾಕಷ್ಟು ಸಾಮಾಜಿಕ ಸೇವಾ ಕಾರ್ಯಗಳನ್ನು ಮಾಡುತ್ತಾ ಬಂದಿದ್ದೇವೆ. ಪ್ರಸಕ್ತ ನಾವು 10 ರಾಜ್ಯಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇವೆ. ನಮಗೆ ಸಿಮಿ ಜತೆ ಯಾವುದೇ ರೀತಿಯ ಸಂಬಂಧಗಳಿಲ್ಲ ಎಂದು ಸ್ಪಷ್ಟಪಡಿಸಿದೆ.
ದಕ್ಷಿಣ ಭಾರತದ ರಾಜ್ಯಗಳಲ್ಲಿ ತನ್ನ ಕಾರ್ಯ ವ್ಯಾಪ್ತಿಯನ್ನು ಪಿಎಫ್ಐ ಹೆಸರಿನಲ್ಲಿ ವಿಸ್ತರಿಸಿಕೊಂಡಿರುವ ಸಿಮಿ ಈಗ ಉತ್ತರ ಭಾರತದತ್ತ ಕಣ್ಣಿಟ್ಟಿದೆ ಎಂದು ಕಳೆದ ವಾರವಷ್ಟೇ ವರದಿಗಳು ಹೇಳಿದ್ದವು.
2006ರ ಫೆಬ್ರವರಿ 8ರಂದು ನಿಷೇಧಕ್ಕೊಳಗಾಗಿದ್ದ ಸಿಮಿಗೆ ಮರು ಜೀವ ನೀಡುವ ನಿಟ್ಟಿನಲ್ಲಿ ಐಎಸ್ಐ-ಭೂಗತ ಜಗತ್ತು-ಮಾವೋವಾದಿಗಳ ಜತೆ ಸಂಬಂಧ ಹೊಂದಿರುವ ಮಂಗಳೂರು ಮೂಲದ ಮಾಡೂರು ಇಸುಬು ಬಂಧನಕ್ಕೊಳಗಾದ ನಂತರ ಈ ವರದಿಗಳಿಗೆ ಪುಷ್ಠಿ ಬಂದಿತ್ತು.
ಗಲ್ಫ್ ರಾಷ್ಟ್ರದಿಂದ ವಾಪಸ್ ಬರುತ್ತಿದ್ದ ಹೊತ್ತಿನಲ್ಲಿ ಮಾಡೂರು ಇಸುಬುವನ್ನು ಪೊಲೀಸರು ಬಂಧಿಸಿದ್ದರು. ಈತ ಸಿಮಿ ಪಡೆಯನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಇಸುಬು ಕಾರ್ಯಪ್ರವೃತ್ತಗೊಂಡಿದ್ದ. ಸಿಮಿ ಮತ್ತಿತರ ಉಗ್ರ ಸಂಘಟನೆಗಳು ಭಾರತದಲ್ಲಿ ನೆಲೆ ಕಳೆದುಕೊಳ್ಳುತ್ತಿರುವುದರಿಂದ ಪಾಕಿಸ್ತಾನದ ಐಎಸ್ಐ ಮತ್ತಿತರ ಉಗ್ರ ಸಂಘಟನೆಗಳು ಕೂಡ ಆತಂಕಕ್ಕೊಳಗಾಗಿವೆ ಎಂದೂ ವರದಿಗಳು ಹೇಳಿದ್ದವು.
ಬಂಧಿತ ಮಾಡೂರು ಇಸುಬು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಪರವಾಗಿ ಕೆಲಸ ಮಾಡುತ್ತಿದ್ದ. ಆದರೆ ಇದನ್ನು ಪಿಎಫ್ಐ ನಿರಾಕರಿಸಿತ್ತು. ಸಂಘಟನೆಯ ಹೆಸರಿಗೆ ಕಳಂಕ ತರುವ ನಿಟ್ಟಿನಲ್ಲಿ ಇಂತಹ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಸಂಘಟನೆ ಹೇಳಿತ್ತು.
ಕೆಲ ತಿಂಗಳ ಹಿಂದಷ್ಟೇ ಕೇರಳ ಉಪನ್ಯಾಸ ಜೋಸೆಫ್ ಎಂಬವರ ಕೈ ಕತ್ತರಿಸಿದ ಪ್ರಕರಣದಲ್ಲೂ ಪಿಎಫ್ಐ ಹೆಸರು ರಾರಾಜಿಸಿತ್ತು. ಈ ಸಂಘಟನೆಗೆ ಇಂಡಿಯನ್ ಮುಜಾಹಿದೀನ್ ಸೇರಿದಂತೆ ಹಲವು ತೀವ್ರವಾದಿ ಸಂಘಟನೆಗಳ ಜತೆ ಸಂಬಂಧವಿದೆ ಎಂದು ಆರೋಪಿಸುತ್ತಾ ಬರಲಾಗಿದೆ.