2ಜಿ ಸ್ಪೆಕ್ಟ್ರಂ ಹಗರಣದಲ್ಲಿ ಪ್ರಮುಖ ರೂವಾರಿಯಾಗಿರುವ ಮಾಜಿ ಟೆಲಿಕಾಂ ಸಚಿವ ಎ.ರಾಜಾ ಅವರನ್ನು, ಸಿಬಿಐ ಎರಡನೇ ದಿನವೂ ವಿಚಾರಣೆಗೊಳಪಡಿಸಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.
2ಜಿ ತರಂಗಾಂತರಗಳ ಹಂಚಿಕೆಯಲ್ಲಿ ಅವ್ಯವಹಾರವೆಸಗಿ ದೇಶದ ಖಜಾನೆಗೆ 1.75 ಲಕ್ಷ ಕೋಟಿ ರೂಪಾಯಿಗಳಷ್ಟು ನಷ್ಟ ಎಸಗಿದ್ದಾರೆ ಎನ್ನುವ ಆರೋಪಗಳ ಹಿನ್ನೆಲೆಯಲ್ಲಿ, ಡಿಎಂಕೆ ನಾಯಕ ಎ.ರಾಜಾ ಅವರನ್ನು ಸಿಬಿಐ ಅಧಿಕಾರಿಗಳು ಪ್ರಶ್ನಿಸುತ್ತಿದ್ದಾರೆ.
ಕಳೆದ ಅಕ್ಟೋಬರ್ ತಿಂಗಳ ಅವಧಿಯಲ್ಲಿ ಕೇಂದ್ರದ ಟೆಲಿಕಾಂ ಸಚಿವಾಲಯ ಭ್ರಷ್ಟಾಚಾರವೆಸಗಿ ದೇಶದ ಖಾಸಗಿ ಟೆಲಿಕಾಂ ಕಂಪೆನಿಗಳಿಗೆ 2ಜಿ ತರಂಗಾಂತರಗಳನ್ನು ವಿತರಿಸಿದೆ ಎನ್ನುವ ಆರೋಪಗಳು ಬಹಿರಂಗವಾದ ನಂತರ, ಸಿಬಿಐ ಅಧಿಕಾರಿಗಳು ಟೆಲಿಕಾಂ ಕಚೇರಿಗಳ ಮೇಲೆ ದಾಳಿ ನಡೆಸಿ ಹಲವಾರು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು.
ಸಿಬಿಐ ಅಧಿಕಾರಿಗಳು ವಶಪಡಿಸಿಕೊಂಡ ಮಹತ್ವದ ದಾಖಲೆಗಳು ಹಾಗೂ ಕಂಪ್ಯೂಟರ್‌ಗಳಲ್ಲಿ ದಾಖಲಾದ ವಿವರಗಳ ಬಗ್ಗೆ ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಾಜಿ ಸಚಿವ ರಾಜಾ ಮಾತನಾಡಿ, ಸಿಬಿಐ ಅಧಿಕಾರಿಗಳೊಂದಿಗೆ ಸಂಪೂರ್ಣವಾಗಿ ಸಹಕರಿಸುತ್ತಿದ್ದು, ತನಿಖೆ ಮುಂದುವರಿದಿರುವ ಹಿನ್ನೆಲೆಯಲ್ಲಿ, ಹೆಚ್ಚಿನ ವಿವರಗಳನ್ನು ನೀಡಲು ಬಯಸುವುದಿಲ್ಲ ಎಂದು ತಿಳಿಸಿದ್ದಾರೆ.