ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಿತೀಶ್ ಭಿನ್ನರಾಗ; ಭ್ರಷ್ಟಾಚಾರಕ್ಕೆ ಪ್ರಧಾನಿ ಹೊಣೆಯಲ್ಲ (Nitish Kumar | Corruption | Manmohan Singh | NDA)
Bookmark and Share Feedback Print
 
ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಹಗರಣಗಳ ವಿರುದ್ಧ ಹೋರಾಟ ನಡೆಸುತ್ತಿರುವ ಎನ್‌ಡಿಎ ಒಂದು ಕಡೆಯಿಂದ ಭ್ರಷ್ಟಾಚಾರಕ್ಕೆ ಪ್ರಧಾನಿಯೇ ಹೊಣೆ ಎಂದು ಹೇಳುತ್ತಿದ್ದರೆ, ಇತ್ತ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಭಿನ್ನರಾಗ ನುಡಿಸಿದ್ದಾರೆ. ಭ್ರಷ್ಟಾಚಾರಗಳಿಗೆ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಹೊಣೆಯಲ್ಲ ಎಂದು ಅವರು ಹೇಳಿದ್ದಾರೆ.

ಸಂಯುಕ್ತ ಜನತಾದಳದ ವರಿಷ್ಠ ಶರದ್ ಯಾದವ್ ಮೊನ್ನೆಯಷ್ಟೇ ಪ್ರಧಾನಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದರು. ಆದರೆ ಅದೇ ಪಕ್ಷದ ನಿತೀಶ್ ಪ್ರಧಾನಿ ಹೊಣೆಯಲ್ಲ ಎಂದಿದ್ದಾರೆ. ಇದರೊಂದಿಗೆ ಬಿಜೆಪಿ ನೇತೃತ್ವದ ಎನ್‌ಡಿಎಯಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದು ಸ್ಪಷ್ಟವಾಗಿದೆ.

ದೇಶದ ಪ್ರಮುಖ ಸಮಸ್ಯೆಯಾಗಿ ಹಗರಣಗಳು ಪರಿಣಮಿಸಿವೆ ಎಂಬುದನ್ನು ಒಪ್ಪಿಕೊಂಡಿರುವ ನಿತೀಶ್, ಭ್ರಷ್ಟಾಚಾರಗಳಿಗೆ ಸಂಬಂಧಪಟ್ಟಂತೆ ಪೂರ್ಣವಾಗಿ ಪ್ರಧಾನ ಮಂತ್ರಿಯವರನ್ನು ಹೊಣೆಗಾರನನ್ನಾಗಿ ಮಾಡಲು ನಾನು ಬಯಸುವುದಿಲ್ಲ. ಆದರೆ ಆಡಳಿತವು ನಿರೀಕ್ಷಿತ ಮಟ್ಟದಲ್ಲಿಲ್ಲ ಎಂಬುದನ್ನು ಪರಿಸ್ಥಿತಿಯು ಪ್ರತಿಬಿಂಬಿಸುತ್ತಿದೆ ಎಂದಿದ್ದಾರೆ.

ಅದೇ ಹೊತ್ತಿಗೆ ಇತರ ವಿಚಾರಗಳಲ್ಲಿ ನಿತೀಶ್ ಎನ್‌ಡಿಎ ನಿಲುವುಗಳನ್ನೇ ಬೆಂಬಲಿಸಿದ್ದಾರೆ.

ಸಂಸತ್ತಿನ ಬಜೆಟ್ ಅಧಿವೇಶನಕ್ಕೂ ಮೊದಲು ವಿಶೇಷ ಅಧಿವೇಶನ ಕರೆಯುವ ಬಗ್ಗೆ ವಿತ್ತ ಸಚಿವ ಪ್ರಣಬ್ ಮುಖರ್ಜಿ ಇತ್ತೀಚೆಗಷ್ಟೇ ನೀಡಿರುವ ಆಹ್ವಾನವನ್ನು ಸ್ವೀಕರಿಸದೇ ಇದ್ದದ್ದು ಒಳ್ಳೆಯದಾಯಿತು. 2ಜಿ ಹಗರಣದ ಕುರಿತು ಜಂಟಿ ಸಂಸದೀಯ ಸಮಿತಿ ತನಿಖೆ ನಡೆಸುವ ಬಗ್ಗೆ ಚರ್ಚೆ ನಡೆಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

2ಜಿ ಹಗರಣಕ್ಕೆ ಸಂಬಂಧಪಟ್ಟಂತೆ ಪ್ರತಿಪಕ್ಷಗಳು ಕೇಳುತ್ತಿರುವ ಜೆಪಿಸಿ ಬೇಡಿಕೆಗೆ ಕೇಂದ್ರ ಸರಕಾರವು ಒಪ್ಪಿಗೆ ಸೂಚಿಸಬೇಕಿತ್ತು ಎಂದು ಬಿಹಾರ ಮುಖ್ಯಮಂತ್ರಿ ಹೇಳಿದರಾದರೂ, ಇದೇ ವಿಚಾರದಲ್ಲಿ ನೈತಿಕ ಹೊಣೆ ಹೊತ್ತು ಪ್ರಧಾನಿ ರಾಜೀನಾಮೆ ನೀಡಬೇಕೆಂದು ಎನ್‌ಡಿಎ ಒತ್ತಾಯಿಸುತ್ತಿರುವುದರ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.

ಕುಖ್ಯಾತ ಲಾಬಿಗಾರ್ತಿ ನೀರಾ ರಾಡಿಯಾ ಜತೆ ಬಿಜೆಪಿ ನಾಯಕ ಅನಂತ್ ಕುಮಾರ್ ಸಂಬಂಧ ಹೊಂದಿದ್ದಾರೆಂಬ ಆರೋಪಗಳ ಕುರಿತು ಕೂಡ ಪ್ರತಿಕ್ರಿಯಿಸಲು ಅವರು ಒಪ್ಪಿಕೊಂಡಿಲ್ಲ. ನಿಮ್ಮ ಪ್ರಶ್ನೆ ಉತ್ತರಿಸಲು ಸ್ವತಃ ಅನಂತ್ ಕುಮಾರ್ ಸಮರ್ಥರಿದ್ದಾರೆ ಎಂದರು.

2ಜಿ ಹಗರಣದ ವಿಚಾರದಲ್ಲಿ ಸರಕಾರ ಬಿದ್ದು ಹೋಗಿ ಮಧ್ಯಂತರ ಚುನಾವಣೆ ಎದುರಾಗಬಹುದೇ ಎಂದು ಪತ್ರಕರ್ತರು ಪ್ರಶ್ನಿಸಿದರು. ಸದನದಲ್ಲಿ ಯುಪಿಎ ಸಾಕಷ್ಟು ಸದಸ್ಯರ ಬೆಂಬಲವನ್ನು ಹೊಂದಿರುವುದರಿಂದ ಅಂತಹ ಸಾಧ್ಯತೆ ಉದ್ಭವಿಸುತ್ತದೆ ಎಂದು ನಾನು ಯೋಚಿಸುವುದಿಲ್ಲ ಎಂದಷ್ಟೇ ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ