ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ತೆಲಂಗಾಣ ಬೇಡಿಕೆ; ಕಾಂಗ್ರೆಸ್ ಸಚಿವರಿಂದ ರಾಜೀನಾಮೆ ಬೆದರಿಕೆ (Telangana | Congress | Srikrishna Committee | Telangana Rashtra Samiti)
Bookmark and Share Feedback Print
 
ಪ್ರತ್ಯೇಕ ತೆಲಂಗಾಣ ರಾಜ್ಯ ನಿರ್ಮಾಣಕ್ಕೆ ಶ್ರೀಕೃಷ್ಣ ಸಮಿತಿಯು ಶಿಫಾರಸು ಮಾಡದೇ ಇದ್ದರೆ ತಾವು ರಾಜೀನಾಮೆ ನೀಡುವುದಾಗಿ ಆ ಭಾಗದ ಕಾಂಗ್ರೆಸ್ ಸಂಸದರು, ಸಚಿವರುಗಳು ಮತ್ತು ಶಾಸಕರು ಬೆದರಿಕೆ ಹಾಕಿದ್ದಾರೆ. ಇದರೊಂದಿಗೆ ತೆಲಂಗಾಣ ಬಿಸಿ ಮತ್ತೆ ಕಾಣಿಸಿಕೊಳ್ಳುವ ಲಕ್ಷಣಗಳು ಗೋಚರಿಸಿವೆ.

ಪ್ರತ್ಯೇಕ ರಾಜ್ಯ ಸ್ಥಾಪನೆಯಾದರೆ ತೆಲಂಗಾಣ ರಾಷ್ಟ್ರ ಸಮಿತಿಯು (ಟಿಆರ್ಎಸ್) ಕಾಂಗ್ರೆಸ್ ಜತೆ ವಿಲೀನಗೊಳ್ಳಲು ಸಿದ್ಧವಿದೆ ಎಂದು ಘೋಷಿಸಿದ ನಂತರ ಈ ಬೆಳವಣಿಗೆ ಕಂಡು ಬಂದಿದೆ.

ಕೇಂದ್ರ ಸರಕಾರಕ್ಕೆ ಸಮಿತಿಯು ತನ್ನ ವರದಿಯನ್ನು ಡಿಸೆಂಬರ್ 31ರಂದು ಒಪ್ಪಿಸಲಿದ್ದು, ಆ ನಂತರದ ನಡೆಗಳು ಹೇಗಿರಬೇಕು ಎಂಬುದನ್ನು ಚರ್ಚಿಸಲು ತೆಲಂಗಾಣದ ಕಾಂಗ್ರೆಸ್ ನಾಯಕರು ಸಭೆ ಕರೆದಿದ್ದರು.

ಸಂಸತ್ತಿನ ಬಜೆಟ್ ಅಧಿವೇಶನದ ಸಂದರ್ಭದಲ್ಲಿ ಪ್ರತ್ಯೇಕ ರಾಜ್ಯ ಕುರಿತ ಮಸೂದೆಯನ್ನು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ಮಂಡಿಸಬೇಕು ಎಂಬ ನಿರ್ಣಯವನ್ನು ನಾಯಕರು ತೆಗೆದುಕೊಂಡಿದ್ದು, ಇದನ್ನು ಸಂಬಂಧಪಟ್ಟವರಿಗೆ ರವಾನಿಸಲಾಗಿದೆ.

ಒಂಬತ್ತು ಸಂಸದರು, ಏಳು ಸಚಿವರುಗಳು, 15 ಶಾಸಕರು ಹಾಗೂ ನಾಲ್ಕು ಮಂದಿ ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಪ್ರತ್ಯೇಕ ರಾಜ್ಯದ ರಚನೆಗಾಗಿ ತಮ್ಮ ಸ್ಥಾನಗಳನ್ನು ತ್ಯಜಿಸಲು ಬದ್ಧ ಎಂದು ಈ ಸಭೆಯಲ್ಲಿ ಘೋಷಿಸಿದರು.

ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಯ ಪರವಾಗಿ ಶ್ರೀಕೃಷ್ಣ ಸಮಿತಿಯು ತನ್ನ ವರದಿಯನ್ನು ನೀಡುವ ಭರವಸೆಯನ್ನು ನಾವು ಇಟ್ಟುಕೊಂಡಿದ್ದೇವೆ. ಒಂದು ವೇಳೆ ಆ ಭರವಸೆ ಸುಳ್ಳಾದರೆ, ನಾವು ನಮ್ಮ ರಾಜೀನಾಮೆ ಸಲ್ಲಿಸುತ್ತೇವೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಕೇಶವ ರಾವ್ ತಿಳಿಸಿದರು.

ಎಲ್ಲಾ ಸಂಸದರು, ಸಚಿವರು ಮತ್ತು ಶಾಸಕರು ತಮ್ಮ ರಾಜೀನಾಮೆ ಪತ್ರಗಳನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ರವಾನಿಸಲಾಗುವುದು ಎಂದರು.

ಅಲ್ಲದೆ ತೆಲಂಗಾಣ ರಾಜ್ಯಕ್ಕಾಗಿ ಒತ್ತಾಯಿಸಿ ಕಳೆದ ವರ್ಷ ಮತ್ತು ಈ ವರ್ಷ ನಡೆಸಿರುವ ಪ್ರತಿಭಟನೆಯ ವಿರುದ್ಧ ವಿದ್ಯಾರ್ಥಿಗಳು ಮತ್ತು ಇತರರ ಮೇಲೆ ಹಾಕಲಾಗಿರುವ ಇಲ್ಲಾ ಕೇಸುಗಳನ್ನು ಹಿಂದಕ್ಕೆ ಪಡೆಯಬೇಕು. ಇದಕ್ಕೆ ತಪ್ಪಿದಲ್ಲಿ ಮಂಗಳವಾರದಿಂದ ತೆಲಂಗಾಣ ಪ್ರಾಂತ್ಯದ ಎಲ್ಲಾ ಸಂಸದರು ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ ಎಂದೂ ಪ್ರಕಟಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ