ಛತ್ರಪತಿ ಶಿವಾಜಿ ಮಹಾರಾಜ್ ಗುರು ದಾದೋಜಿ ಕುಂದದೇವ್ ಪುತ್ಥಳಿಯನ್ನು ಪುಣೆ ಮಹಾನಗರಪಾಲಿಕೆ ಧ್ವಂಸಗೊಳಿಸಿದ ವಿಚಾರದಲ್ಲಿ ಶಿವಸೇನೆ ಮತ್ತು ಪೋಲೀಸರ ನಡುವೆ ಮಾರಾಮಾರಿ ನಡೆದಿದೆ.
ಐತಿಹಾಸಿಕ ಲಾಲ್ ಮಹಲ್ ಸ್ಥಾಪನೆಯಾದ ಸಂದರ್ಭದಲ್ಲಿ ನಿರ್ಮಾಣಗೊಂಡ ಮೂರು ಪುತ್ಥಳಿಗಳಲ್ಲಿ ಇದೂ ಒಂದಾಗಿತ್ತು. ಈ ಪ್ರತಿಮೆಯನ್ನು ತೆಗೆಯಬೇಕು ಎಂದು ಇತ್ತೀಚೆಗಷ್ಟೇ ಪುಣೆ ಮಹಾನಗರ ಪಾಲಿಕೆ ನಿರ್ಣಯ ಅಂಗೀಕರಿಸಿತ್ತು.
ಕುಂದದೇವ್ ಪ್ರತಿಮೆಯನ್ನು ತೆಗೆದು, ಅಲ್ಲಿ ಶಿವಾಜಿ ತಂದೆಯ ಪುತ್ಥಳಿಯನ್ನು ಸ್ಥಾಪಿಸುವುದು ಮಹಾನಗರ ಪಾಲಿಕೆ ಉದ್ದೇಶ. ಆದರೆ ಕುಂದದೇವ್ ಪ್ರತಿಮೆಯನ್ನು ತೆಗೆಯುವುದಕ್ಕೆ ಶಿವಸೇನೆ ಆಕ್ಷೇಪಿಸಿತ್ತು. ಇದನ್ನು ಲೆಕ್ಕಿಸದ ಪಾಲಿಕೆ, ಪೊಲೀಸರ ಸಹಕಾರದೊಂದಿಗೆ ಪ್ರತಿಮೆ ಸ್ಥಳಾಂತರಕ್ಕೆ ಮುಂದಾಗಿತ್ತು. ಈ ಸಂಬಂರ್ಭದಲ್ಲಿ ಪೊಲೀಸರು ಮತ್ತು ಶಿವ ಸೈನಿಕರ ನಡುವೆ ಘರ್ಷಣೆ ನಡೆಯಿತು ಎಂದು ವರದಿಗಳು ಹೇಳಿವೆ.
ಈ ನಡುವೆ ಮರಾಠ ಸೇನಾಧಿಪತಿ ಶಿವಾಜಿಯ ಗುರು ದಾದೋಜಿ ಕುಂದದೇವ್ ಎಂಬುದು ಕೇವಲ ಬ್ರಾಹ್ಮಣ ಸಮುದಾಯದ ಪಿತೂರಿ ಎಂದು ಕೆಲವು ಮರಾಠ ಸಂಘನೆಗಳು ಆರೋಪಿಸುತ್ತಿವೆ. ಶಿವಾಜಿಯು ಸಕಲ ಯುದ್ಧಕಲೆಗಳನ್ನು ತನ್ನ ತಾಯಿಯಿಂದ ಕಲಿತಿರುವುದಾಗಿ ಈ ಸಂಘಟನೆ ಹೇಳುತ್ತಿದೆ.
ಅಲ್ಲಿ ಇನ್ನುಳಿದಿರುವುದು ಶಿವಾಜಿ ಮತ್ತು ಅವರ ತಾಯಿ ಜೀಜಾಮಾತಾ ಅವರ ಪ್ರತಿಮೆಗಳು.
ದಾದೋಜಿ ಕುಂದದೇವ್ ಪುತ್ಥಳಿ ಧ್ವಂಸದಿಂದ ಗುರು ದಾದೋಜಿ ಮತ್ತು ಶಿವಾಜಿಯ ನಡುವಿನ ಸಂಬಂಧದ ಕುರಿತ ಹೊಸ ವಿವಾದ ಎದ್ದಿದೆ. ಶಿವಾಜಿಯ ಜೀವನದಲ್ಲಿ ದಾದೋಜಿ ಪಾತ್ರವನ್ನು ಕಡೆಗಣಿಸಲು ಈ ಪಿತೂರಿ ನಡೆದಿದೆ ಎಂದು ಕೆಲವರ ಅಭಿಪ್ರಾಯ.