ಸಾಗರ ಮಾರ್ಗದಲ್ಲಿ ಉಗ್ರರು; ದೇಶದೆಲ್ಲೆಡೆ ತೀವ್ರ ಕಟ್ಟೆಚ್ಚರ
ಮುಂಬೈ, ಸೋಮವಾರ, 27 ಡಿಸೆಂಬರ್ 2010( 17:51 IST )
ಭಾರತ ಪ್ರವೇಶಿಸಿರುವ ಪಾಕಿಸ್ತಾನ ಮೂಲದ ಲಷ್ಕರ್ ಇ ತೋಯ್ಬಾ ಭಯೋತ್ಪಾದಕರು ಸಾಗರ ಮಾರ್ಗದಲ್ಲಿ ಕರ್ನಾಟಕದಿಂದ ಮುಂಬೈಯತ್ತ ತೆರಳುತ್ತಿದ್ದು, ದೇಶದಾದ್ಯಂತ ಕಟ್ಟೆಚ್ಚರ ಘೋಷಿಸಲಾಗಿದೆ.
ಬೇಹುಗಾರಿಕಾ ಮಾಹಿತಿಗಳ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯವು ಎಲ್ಲಾ ರಾಜ್ಯಗಳಿಗೆ ಕಟ್ಟೆಚ್ಚರ ರವಾನಿಸಿದೆ. ಅದರಲ್ಲೂ ಕರಾವಳಿ ರಾಜ್ಯಗಳು ಹೆಚ್ಚಿನ ಭದ್ರತೆ ನಿಯೋಜಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಇತ್ತೀಚಿನ ವರದಿಗಳ ಪ್ರಕಾರ ನಾಲ್ವರು ಲಷ್ಕರ್ ಉಗ್ರರು ಮಂಗಳೂರು-ಕೇರಳ ಕರಾವಳಿಯಲ್ಲಿನ ಕವರಟ್ಟಿ - ಲಕ್ಷದ್ವೀಪದ ಮಧ್ಯೆ ಬೋಟಿನಲ್ಲಿ ಪ್ರಯಾಣಿಸುತ್ತಿದ್ದಾರೆ. ಅವರು ಮುಂಬೈ ಅಥವಾ ಬೆಂಗಳೂರಿಗೆ ತೆರಳಿ ದುಷ್ಕೃತ್ಯ ನಡೆಸುವ ಸಂಚು ರೂಪಿಸಿದ್ದಾರೆ.
ಕೆಲವು ಮೂಲಗಳ ಪ್ರಕಾರ ಬಾಂಗ್ಲಾದೇಶದಿಂದ ಮುಂಬೈಗೆ ಬಂದಿದ್ದ ಉಗ್ರರು, ಮುಂಬೈಯಿಂದ ಮಂಗಳೂರು ಮಾರ್ಗವಾಗಿ ಬೆಂಗಳೂರು ಸೇರಿಕೊಳ್ಳಲು ಸಾಗರ ಮಾರ್ಗದಲ್ಲಿ ಹೊರಟಿದ್ದಾರೆ. ಆದರೆ ಇನ್ನು ಕೆಲವು ಮೂಲಗಳ ಪ್ರಕಾರ ಲಕ್ಷದ್ವೀಪದಿಂದ ಮುಂಬೈ ಕಡೆ ಬೋಟಿನಲ್ಲಿ ಹೊರಟಿದ್ದಾರೆ.
ಇವರನ್ನು ಪತ್ತೆ ಹಚ್ಚಲು ಭಾರತೀಯ ನೌಕಾ ಪಡೆ ಮತ್ತು ಕರಾವಳಿ ತಟ ರಕ್ಷಣಾ ಪಡೆಗಳು ಈಗಾಗಲೇ ಕಾರ್ಯಾಚರಣೆ ಆರಂಭಿಸಿವೆ. ಈ ಕಾರ್ಯಾಚರಣೆಯನ್ನು 'ಆಪರೇಷನ್ ರಕ್ಷಾ 5/10' ಎಂದು ಹೆಸರಿಸಲಾಗಿದೆ.
ಲಷ್ಕರ್ ಉಗ್ರ, ಪ್ರಸಕ್ತ ಅಮೆರಿಕಾ ಬಂಧನದಲ್ಲಿರುವ ಡೇವಿಡ್ ಕೋಲ್ಮನ್ ಹೆಡ್ಲಿ ಭಾರತದಲ್ಲಿ ಭೇಟಿ ನೀಡಿರುವ ಸ್ಥಳಗಳ ಮೇಲೆ ದಾಳಿ ನಡೆಸುವ ಸಂಚಿನೊಂದಿಗೆ ನಾಲ್ವರು ಹೊರಟಿದ್ದಾರೆ. ಈ ನಿಟ್ಟಿನಲ್ಲಿ ಗುಪ್ತಚರ ಇಲಾಖೆಯು ಆಂಧ್ರಪ್ರದೇಶ, ಮಹಾರಾಷ್ಟ್ರ, ಉತ್ತರ ಪ್ರದೇಶ, ಗೋವಾ, ಕೇರಳ ಮತ್ತು ಕರ್ನಾಟಕಗಳಿಗೆ ಕಟ್ಟೆಚ್ಚರ ರವಾನಿಸಿದೆ.
ಇದುವರೆಗೆ ಜಾರಿ ಮಾಡಲಾಗಿರುವ ನಿರ್ದಿಷ್ಟ ಸ್ಥಳಗಳೆಂದರೆ ಉತ್ತರ ಪ್ರದೇಶದ ಆಗ್ರಾದಲ್ಲಿರುವ ತಾಜ್‌ಮಹಲ್ ಮತ್ತು ಮುಂಬೈನ ತಾಜ್ ಮಹಲ್ ಹೊಟೇಲ್.
ಅಬ್ದುಲ್ ಕರೀಂ ಮೂಸಾ, ನೂರ್ ಅಬೂ ಇಲಾಹಿ, ವಲೀದ್ ಜಿನ್ನಾ ಮತ್ತು ಮೆಹ್ಫೂಜ್ ಆಲಂ ಎಂಬ ನಾಲ್ವರು ಉಗ್ರರು ಈಗಾಗಲೇ ಭಾರತ ಪ್ರವೇಶಿಸಿದ್ದಾರೆ ಎಂದು ಕೆಲವು ದಿನಗಳ ಹಿಂದೆಯೇ ಮುಂಬೈ ಪೊಲೀಸರು ಅಲರ್ಟ್ ಘೋಷಿಸಿದ್ದರು. ಆದರೆ ಇದುವರೆಗೂ ಅವರನ್ನು ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ.
ಇಂದು ಮುಂಬೈ ವಿಮಾನ ನಿಲ್ದಾಣದಲ್ಲೂ ಹೈ ಅಲರ್ಟ್ ಘೋಷಿಸಲಾಗಿದೆ. ವಿಮಾನ ನಿಲ್ದಾಣದಲ್ಲಿ ಅಲ್ಲಲ್ಲಿ ಉಗ್ರರ ಭಾವಚಿತ್ರಗಳನ್ನು ಅಂಟಿಸಲಾಗಿದೆ.
ಕರ್ನಾಟಕದಲ್ಲಿ ಹೈ ಅಲರ್ಟ್... ಕೇಂದ್ರ ಗೃಹ ಸಚಿವಾಲಯವು ಕಟ್ಟೆಚ್ಚರ ರವಾನಿಸಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ, ಅದರಲ್ಲೂ ಕರಾವಳಿ ಜಿಲ್ಲೆಗಳಲ್ಲಿ ತೀವ್ರ ಕಟ್ಟೆಚ್ಚರ ಘೋಷಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಸೋಮವಾರ ಗೃಹ ಸಚಿವಾಲಯದ ಉನ್ನತ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಮುಖ್ಯಮಂತ್ರಿ, ಸೂಕ್ತ ಭದ್ರತೆ ಮಾಡುವಂತೆ ಆದೇಶ ನೀಡಿದ್ದಾರೆ. ಆಯಕಟ್ಟಿನ ಸ್ಥಳಗಳಲ್ಲಿ ಹೆಚ್ಚಿನ ಭದ್ರತಾ ಪಡೆಗಳನ್ನು ನಿಯೋಜಿಸುವಂತೆ ಸೂಚಿಸಿದ್ದಾರೆ.