ಎನ್‌ಡಿಎ ಆಡಳಿತಾವಧಿಯಲ್ಲಿ ಸಚಿವ ಸಂಪುಟದ ರಹಸ್ಯ ಮಾಹಿತಿಗಳನ್ನು ಲಾಬಿಗಾರ್ತಿ ನೀರಾ ರಾಡಿಯಾಗೆ ಆಗಿನ ಬಿಜೆಪಿ ಸಚಿವ, ಈಗಿನ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್ ಅವರು ರವಾನಿಸಿರುವ ಆರೋಪಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರ ತನಿಖೆ ನಡೆಸಲಿದೆ. ಆರೋಪ ಸಾಬೀತಾದರೆ, ರಾಷ್ಟ್ರವಿರೋಧಿ ಕಾಯ್ದೆಯಡಿ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ವಿ. ನಾರಾಯಣಸ್ವಾಮಿ ತಿಳಿಸಿದ್ದಾರೆ.
ಅಟಲ್ ಬಿಹಾರಿ ವಾಜಪೇಯಿ ಅವರ ಆಡಳಿತಾವಧಿಯಲ್ಲಿ ಗ್ರಾಮೀಣ ಅಭಿವೃದ್ಧಿ ಹಾಗೂ ನಾಗರಿಕ ವಾಯುಯಾನ ಸಚಿವರಾಗಿದ್ದ ಅನಂತ್ ಕುಮಾರ್, ರಾಡಿಯಾ ಆಧೀನದ ಟ್ರಸ್ಟ್‌ಗೆ ಭೂಮಿ ಮಂಜೂರು ಮಾಡಲು ಸಹಾಯ ಮಾಡಿದ್ದರು ಹಾಗೂ ಸಚಿವ ಸಂಪುಟದ ರಹಸ್ಯ ದಾಖಲೆಗಳನ್ನು ತಲುಪಿಸಿದ್ದರು ಎಂದು ರಾಡಿಯಾ ಅವರ ಮಾಜಿ ಪಾಲುದಾರ ರಾವ್ ಧೀರಜ್ ಸಿಂಗ್ ಕೆಲ ದಿನಗಳ ಹಿಂದಷ್ಟೇ ಆರೋಪಿಸಿದ್ದರು.
2ಜಿ ಹಗರಣದ ವಿಚಾರದ ಕುರಿತು ಸಂಸತ್ ಬಿಕ್ಕಟ್ಟನ್ನು ನಿವಾರಿಸುವ ಬಗ್ಗೆ ಲೋಕಸಭಾ ಸ್ಪೀಕರ್ ಮೀರಾ ಕುಮಾರ್ ಅವರು ಡಿಸೆಂಬರ್ 30ರಂದು ಸರ್ವಪಕ್ಷಗಳ ಸಭೆ ಕರೆದಿದ್ದಾರೆ ಎಂದೂ ಇದೇ ಸಂದರ್ಭದಲ್ಲಿ ಸಚಿವರು ತಿಳಿಸಿದರು.
2ಜಿ ಹಗರಣದ ಬಗ್ಗೆ ಸಂಸತ್ತಿನಲ್ಲಿ ಚರ್ಚಿಸಲು ಯುಪಿಎ ಸರ್ಕಾರ ತಯಾರಿದೆ. ಆದರೆ ಬಿಜೆಪಿ ಸೇರಿದಂತೆ ಉಳಿದ ಪ್ರತಿಪಕ್ಷಗಳು ಹಗರಣದ ಸತ್ಯ ಶೋಧನೆಗೆ ಒಲವು ತೋರಿಸುತ್ತಿಲ್ಲ ಎಂದರು.
ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆಗಿಂತ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಉತ್ತಮ ಎಂದ ಅವರು, ಜೆಪಿಸಿ ನಡೆಸಿದ ಕಳೆದ ಹಲವು ತನಿಖೆಗಳನ್ನು ಗಮನಿಸಿದರೆ ಯಾವುದೇ ಪ್ರಕರಣಗಳು ಪರಿಣಾಮಕಾರಿಯಾಗಿ ಬೆಳಕಿಗೆ ಬಂದಿಲ್ಲ ಎಂದರು.