ಪಕ್ಕದ ಮನೆಯ ಹುಡುಗನನ್ನು ಪ್ರೀತಿಸುತ್ತಿದ್ದಳು ಎಂಬ ಏಕೈಕ ಕಾರಣಕ್ಕೆ ತಂದೆಯೇ ತನ್ನ ಮಗಳನ್ನು ಕೆಲಸದಾಳಿನ ಮೂಲಕ ಕೊಲ್ಲಿಸಿದ್ದಾನೆ. ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದ 15ರ ಹರೆಯದ ಹುಡುಗಿ ಅನ್ಯಾಯವಾಗಿ ಪ್ರಾಣ ಕಳೆದುಕೊಂಡಿದ್ದಾಳೆ.
ಈ ಘಟನೆ ನಡೆದಿರುವುದು ಹರ್ಯಾಣದ ರೋಹ್ಟಕ್ ಜಿಲ್ಲೆಯಲ್ಲಿ. ಕೊಲೆಯಾದ ಹುಡುಗಿ ತಪಸ್ಯ ಸಿಂಗ್. ಹತ್ಯೆಗೈಯಲು ಸೂಚನೆ ನೀಡಿದ ಅಪ್ಪ ಅಮೇತ್ ಸೈನಿ. ಆಜ್ಞೆ ಪಾಲಿಸಿದ ಕೆಲಸದಾಳು ಮೋಹನ್.
ವಾಸ್ತವದಲ್ಲಿ ತಪಸ್ಯಳ ನಿಜವಾದ ಅಪ್ಪ ಸೈನಿ ಅಲ್ಲ. ಆತ ತಪಸ್ಯಳನ್ನು ದತ್ತು ಸ್ವೀಕರಿಸಿದ್ದ. ಸೋನಿಪತ್ ಜಿಲ್ಲೆಯ ಗೊಹಾನಾದಲ್ಲಿನ ಅವಳಿ-ಜವಳಿಯಾಗಿದ್ದರಲ್ಲಿ ಒಂದು ಹುಡುಗಿಯನ್ನು ದತ್ತು ಪಡೆದುಕೊಂಡು ಸೈನಿ ಸಾಕುತ್ತಿದ್ದ.
ಪಕ್ಕದ ಮನೆಯ ಹುಡುಗನ ಜತೆ ಮಗಳಿಗೆ ಸಂಬಂಧವಿದೆ ಎಂಬುದನ್ನು ಸಹಿಸದೇ ಹೋದ ತಂದೆ, ಆಕೆಯನ್ನು ಮುಗಿಸಲು ಸುಸಜ್ಜಿತ ಯೋಜನೆಯೊಂದನ್ನು ರೂಪಿಸಿದ್ದ. ಅದಕ್ಕಾಗಿ ಕೆಲಸದಾಳನ್ನು ಕೂಡ ನೇಮಿಸಿಕೊಂಡಿದ್ದ. ಆತನಿಗೆ ಮದುವೆ ಮಾಡಿಸುವುದು ಮತ್ತು ಭಾರೀ ಹಣವನ್ನು ನೀಡುವುದಾಗಿ ಭರವಸೆ ನೀಡಿದ್ದ.
ಕೆಲವು ಸಮಯದ ನಂತರ ಡಿಸೆಂಬರ್ 2ರಿಂದ ಬಾಲಕಿ ತಪಸ್ಯ ಕಾಣೆಯಾಗಿದ್ದಳು. ಶಾಲೆಗೆಂದು ಹೋಗಿದ್ದ ತಪಸ್ಯ ವಾಪಸ್ ಬಂದಿರಲಿಲ್ಲ. ಈ ಸಂಬಂಧ ಕುಟುಂಬವು ಪೊಲೀಸರಿಗೆ ದೂರನ್ನೂ ನೀಡಿತ್ತು. ಶಾಲೆಯ ಮೂವರು ಇತರ ವಿದ್ಯಾರ್ಥಿಗಳ ಜತೆ ಆಕೆ ಪರಾರಿಯಾಗಿರಬಹುದು ಎಂದು ಕುಟುಂಬ ಶಂಕೆ ವ್ಯಕ್ತಪಡಿಸಿತ್ತು.
ತನಿಖೆ ನಡೆಸಿದ ಪೊಲೀಸರು, ತಪಸ್ಯಳ ಪ್ರಿಯಕರ ಸೇರಿದಂತೆ ವಿದ್ಯಾರ್ಥಿಗಳ ತಪ್ಪಿಲ್ಲ ಎಂಬುದನ್ನು ಕಂಡುಕೊಂಡರು. ಅಲ್ಲದೆ ಉತ್ತರ ಪ್ರದೇಶ ಮೂಲದ ಕೆಲಸದಾಳು ಮೋಹನನನ್ನು ವಿಚಾರಣೆಗೊಳಪಡಿಸಿದರು. ಆತ ಎಲ್ಲವನ್ನೂ ಪೊಲೀಸರಲ್ಲಿ ಬಾಯ್ಬಿಟ್ಟ.
ಅಷ್ಟರಲ್ಲಿ ಸುಮಾರು 20 ದಿನಗಳೇ ಕಳೆದು ಹೋಗಿದ್ದವು.
ಕೆಲಸದಾಳು ಮೋಹನನೇ ಹೇಳಿರುವ ಪ್ರಕಾರ, ಬಾಲಕಿಯನ್ನು ಮನೆಯಿಂದ ಹೊರಗೆ ಗದ್ದೆಯತ್ತ ಕರೆದುಕೊಂಡು ಹೋಗಲಾಗಿತ್ತು. ನಂತರ ಸೈನಿಯ ಆದೇಶದಂತೆ ಮೋಹನ ತಪಸ್ಯಳ ಕತ್ತು ಹಿಡಿದು, ಉಸಿರುಗಟ್ಟಿಸಿ ಸಾಯಿಸಿ ಅಲ್ಲೇ ಗುಂಡಿ ತೋಡಿ ಹೂತು ಹಾಕಿದ್ದ. ಆದರೆ ಬಳಿಕ ಗುಂಡಿಯಿಂದ ಕಳೇಬರವನ್ನು ತೆಗೆದು, ಸಮೀಪದ ತೊರೆಗೆ ಎಸೆಯಲಾಗಿತ್ತು.
ಬಾಲಕಿ ತಪಸ್ಯಳನ್ನು ಕೊಂದಿರುವ ಮೋಹನ ಮತ್ತು ಬಾಲಕಿಯ ತಂದೆಯನ್ನು ಪೊಲೀಸರು ಈಗ ಬಂಧಿಸಿದ್ದಾರೆ.
ಆದರೂ ಸೈನಿಯ ಮುಖದಲ್ಲಿ ಅಪರಾಧಿ ಪ್ರಜ್ಞೆಯಿಲ್ಲ. ತನ್ನ ಕುಟುಂಬದ ಮರ್ಯಾದೆಯನ್ನು ಉಳಿಸಿದ ಹೆಮ್ಮೆ ನಲಿದಾಡುತ್ತಿದೆ. ಹರ್ಯಾಣದಲ್ಲಿ ಸಾಮಾನ್ಯವಾಗಿ ಹೋಗಿರುವ ಇಂತಹ ಮರ್ಯಾದಾ ಹತ್ಯೆಗಳನ್ನು ತಡೆಯಲು ಸರಕಾರ ಸೂಕ್ತ ಕಾನೂನೊಂದನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಲಾಗುತ್ತಿದ್ದರೂ, ಅಧಿಕಾರಸ್ಥರು ಇದನ್ನು ಗಂಭೀರವಾಗಿ ಪರಿಗಣಿಸಿದಂತಿಲ್ಲ.