'ಶಿವಾಜಿ'ಗಾಗಿ ಶಿವಸೇನೆಯಿಂದ ಪುಣೆ ಬಂದ್, ಬಸ್ಸುಗಳಿಗೆ ಕಲ್ಲು
ಪುಣೆ, ಮಂಗಳವಾರ, 28 ಡಿಸೆಂಬರ್ 2010( 10:31 IST )
ಶಿವಾಜಿಯ ಗುರು ದಾದೋಜಿ ಕುಂದದೇವ್ ಪುತ್ಥಳಿಯನ್ನು ತೆಗೆದಿರುವ ಕ್ರಮವನ್ನು ಪ್ರತಿಭಟಿಸಿ ಶಿವಸೇನೆ ಮತ್ತು ಬಿಜೆಪಿ ಕರೆ ನೀಡಿರುವ ಪುಣೆ ಬಂದ್ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಸುಮಾರು ಎಂಟಕ್ಕೂ ಹೆಚ್ಚು ಬಸ್ಸುಗಳನ್ನು ಜಖಂಗೊಳಿಸಲಾಗಿದೆ. ನೂರಾರು ಮಂದಿಯನ್ನು ಪೊಲೀಸರು ಬಂಧಿಸಿದರೂ, ಹಿಂಸಾಚಾರಗಳು ಮುಂದುವರಿದಿವೆ ಎಂದು ವರದಿಗಳು ಹೇಳಿವೆ.
ಕಾಂಗ್ರೆಸ್-ಎನ್‌ಸಿಪಿ ಮೈತ್ರಿಕೂಟದ ಪುಣೆ ಮಹಾನಗರ ಪಾಲಿಕೆಯು ಲಾಲ್ ಮಹಲ್‌ನಲ್ಲಿದ್ದ ದಾದೋಜಿಯವರ ಪ್ರತಿಮೆಯನ್ನು ತೆಗೆದಿತ್ತು. ಈ ಸಂಬಂಧ ಸೂಕ್ತ ನಿರ್ಣಯವನ್ನು ಅಂಗೀಕರಿಸಿದ ನಂತರ ಪಾಲಿಕೆ ಈ ಕ್ರಮಕ್ಕೆ ಬಂದಿತ್ತು. ಇದನ್ನು ವಿರೋಧಿಸಿದ್ದ ಶಿವಸೇನೆ ಪುಣೆ ಬಂದ್‌ಗೆ ಕರೆ ನೀಡಿದೆ.
'ಸಂಬಾಜಿ ಬ್ರಿಗೇಡ್' ಎಂಬ ಮರಾಠಿ ಪರ ಸಂಘಟನೆ ಒತ್ತಾಯದ ಹಿನ್ನೆಲೆಯಲ್ಲಿ ದಾದೋಜಿಯವರ ಪುತ್ಥಳಿಯನ್ನು ತೆಗೆಯಲಾಗಿತ್ತು. ಶಿವಾಜಿಯ ನಿಜವಾದ ಗುರು ದಾದೋಜಿ ಅಲ್ಲ ಎನ್ನುವುದು ಆ ಸಂಘಟನೆ ವಾದವಾಗಿತ್ತು.
ಪುಣೆಯಾದ್ಯಂತ ಮಂಗಳವಾರ ಬಹುತೇಕ ಬಂದ್ ಗಂಭೀರ ಪರಿಣಾಮ ಬೀರಿದೆ. ಎಂಟಕ್ಕೂ ಹೆಚ್ಚು ಬಸ್ಸುಗಳಿಗೆ ಕಲ್ಲು ತೂರಾಟ ನಡೆಸಲಾಗಿದೆ. ಕನಿಷ್ಠ ಎರಡು ರೈಲುಗಳನ್ನು ತಡೆಯಲಾಗಿದೆ. ಪ್ರತಿಭಟನಾಕಾರರು ರಸ್ತೆಗಳಿಗೆ ಇಳಿದು ಕಲ್ಲೆಸೆತದಲ್ಲಿ ನಿರತರಾಗಿದ್ದಾರೆ.
ಪೊಲೀಸರ ಮಧ್ಯಪ್ರವೇಶದ ನಂತರ ರೈಲು ಸೇವೆಗಳನ್ನು ಪುನರಾರಂಭಿಸಲಾಗಿದ್ದು, ನೂರಾರು ಶಿವಸೈನಿಕರನ್ನು ಸೆರೆ ಹಿಡಿಯಲಾಗಿದೆ.
ದಾದೋಜಿ ಪ್ರತಿಮೆಯನ್ನು ತೆಗೆದಿರುವುದನ್ನು ಶಿವಸೇನೆ ಕಾರ್ಯಕಾರಿ ಅಧ್ಯಕ್ಷ ಉದ್ಧವ್ ಠಾಕ್ರೆ ದುರದೃಷ್ಟಕರ ಎಂದು ಬಣ್ಣಿಸಿದ್ದಾರೆ. ದಾದೋಜಿ ಭಯೋತ್ಪಾದಕರೆಂಬ ಕಾರಣಕ್ಕೆ ಪಾಲಿಕೆಯು ಪುತ್ಥಳಿಯನ್ನು ತೆಗೆದಿದೆಯೇ ಎಂದು ಪ್ರಶ್ನಿಸಿದ್ದಾರೆ.
ಅತ್ತ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ವರಿಷ್ಠ ರಾಜ್ ಠಾಕ್ರೆ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದಾದೋಜಿ ಕುಂದದೇವ್ ಅವರ ಪ್ರತಿಮೆಯನ್ನು ಯಾಕೆ ತೆಗೆಯಲಾಯಿತು ಎಂಬ ಪ್ರಶ್ನೆ ಬಂದಾಗ ಯಾವ ಉತ್ತರವನ್ನು ನೀವು ನೀಡುತ್ತೀರಿ? ಶಿವಾಜಿ ಪ್ರತಿಮೆಯ ಜತೆ ದಾದೋಜಿಯವರದ್ದೂ ಇದ್ದರೆ, ಯಾರಿಗೇನು ತೊಂದರೆ ಎಂದು ಪ್ರಶ್ನಿಸಿರುವ ರಾಜ್ ಠಾಕ್ರೆ, ಕಾಂಗ್ರೆಸ್ - ಎನ್‌ಸಿಪಿ ಮೈತ್ರಿಕೂಟವು ಜಾತಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.