ಜೆಪಿಸಿಯೇ ಬೇಕು, ಪ್ರಧಾನಿ ಹೇಳಿಕೆಗೆ ಮಹತ್ವವಿಲ್ಲ: ಸುಷ್ಮಾ
ನವದೆಹಲಿ, ಮಂಗಳವಾರ, 28 ಡಿಸೆಂಬರ್ 2010( 15:30 IST )
2ಜಿ ತರಂಗಾಂತರ ಹಂಚಿಕೆ ಹಗರಣದ ಕುರಿತು ಜಂಟಿ ಸಂಸದೀಯ ಸಮಿತಿ ತನಿಖೆಯೇ ಬೇಕು ಎಂದು ಪಟ್ಟು ಹಿಡಿದಿರುವ ಬಿಜೆಪಿ, ಸಾರ್ವಜನಿಕ ಲೆಕ್ಕ ಸಮಿತಿಯ ವಿಚಾರಣೆಗೆ ಹಾಜರಾಗಲು ತಾನು ಸಿದ್ಧ ಎಂಬ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಹೇಳಿಕೆಗೆ 'ಅರ್ಥವಿಲ್ಲ' ಎಂದು ಪ್ರತಿಕ್ರಿಯಿಸಿದೆ.
ಹಗರಣದ ವಿಚಾರಣೆಯಲ್ಲಿ ಸಾರ್ವಜನಿಕ ಲೆಕ್ಕ ಸಮಿತಿಯು (ಪಿಎಸಿ) ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ಅದರ ಅಧ್ಯಕ್ಷ, ಬಿಜೆಪಿ ನಾಯಕ ಮುರಳಿ ಮನೋಹರ ಜೋಶಿಯವರು ಸ್ಪಷ್ಟಪಡಿಸಿರುವ ಹೊತ್ತಿನಲ್ಲೇ ಅತ್ತ ಬಿಜೆಪಿ ತನ್ನ ನಿಲುವನ್ನು ಮತ್ತೊಮ್ಮೆ ಪ್ರಚುರಪಡಿಸಿದೆ.
ಪಿಎಸಿಗೆ ಸಂಬಂಧಪಟ್ಟ ಲೋಕಸಭೆಯ ನಿಯಮಗಳ ಪ್ರಕಾರ ಪ್ರಧಾನಿ ಬಿಡಿ, ಸಚಿವರನ್ನೂ ಕರೆಸಿ ವಿಚಾರಣೆ ಮಾಡುವಂತಿಲ್ಲ. ಹಾಗಾಗಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರು ನೀಡಿರುವ ಆಹ್ವಾನಕ್ಕೆ ಯಾವುದೇ ಅರ್ಥವಿಲ್ಲ ಎಂದು ಲೋಕಸಭೆಯ ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಹೇಳಿದ್ದಾರೆ.
ಪಿಎಸಿ ಮತ್ತು ಜಂಟಿ ಸಂಸದೀಯ ಸಮಿತಿಗಳಿಗೆ (ಜೆಪಿಸಿ) ಅಂತಹ ವ್ಯತ್ಯಾಸಗಳಿಲ್ಲ ಎಂದು ವಿತ್ತ ಸಚಿವ ಪ್ರಣಬ್ ಮುಖರ್ಜಿಯವರು ಹೇಳಿದ್ದಕ್ಕೂ ಇದೇ ಸಂದರ್ಭದಲ್ಲಿ ಸುಷ್ಮಾ ಪ್ರತಿಕ್ರಿಯಿಸಿದ್ದಾರೆ.
ಪ್ರಣಬ್ ಅವರೇ, ಜೆಪಿಸಿಗಿಂತ ಪಿಎಸಿ ಭಿನ್ನವಾಗಿಲ್ಲವೆಂದರೆ ನೀತಿಗಳ ಪುಸ್ತಕದಲ್ಲಿ ಜೆಪಿಸಿ ಎಂಬ ವಿಭಾಗವನ್ನು ಯಾಕೆ ಇಟ್ಟುಕೊಳ್ಳಲಾಗಿದೆ? ಪಿಎಸಿಯ ವ್ಯಾಪ್ತಿಯೇ ಬೇರೆ, ಜೆಪಿಸಿ ವ್ಯಾಪ್ತಿಯೇ ಬೇರೆ. ಪಿಎಸಿ ಆಕೌಂಟ್ಸ್ ವಿಚಾರಗಳಲ್ಲಿ ಹೆಚ್ಚಿನ ಅಧಿಕಾರ ಹೊಂದಿದೆ. ಜೆಪಿಸಿಯು ಹೊಣೆಗಾರಿಕೆ ಮತ್ತು ಆಡಳಿತದ ಕುರಿತಾಗಿದ್ದು ಎಂದು ಟ್ವಿಟ್ಟರಿನಲ್ಲಿ ತಿಳಿಸಿದ್ದಾರೆ.
ಜೆಪಿಸಿ ಬೇಕೇ ಬೇಕೆಂದು ನಡೆಸಲಾಗುತ್ತಿರುವ ಹೋರಾಟದ ಬಗ್ಗೆ ಹೆಚ್ಚೇನೂ ಆಸಕ್ತಿ ಹೊಂದಿರದವರಂತೆ ನಿನ್ನೆಯಷ್ಟೇ ಹೇಳಿಕೆ ನೀಡಿದ್ದ ಪಿಎಸಿ ಅಧ್ಯಕ್ಷ ಜೋಶಿ, ಪ್ರಧಾನಿಯ ಆಹ್ವಾನದ ಕುರಿತು ಪ್ರತಿಕ್ರಿಯಿಸುತ್ತಾ, ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತದೆ ಎಂದಿದ್ದರು.
ಲೋಕಸಭೆಯ ನಿಯಮಾವಳಿಗಳ ಪ್ರಕಾರ 22 ಸದಸ್ಯರ ಪಿಎಸಿಯು ಯಾವುದೇ ಸಚಿವರನ್ನು ಕರೆಸುವುದು ಅಥವಾ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆ ನಡೆಸುವಂತಿಲ್ಲ. ಆದರೆ ಸಮಿತಿಯ ಸದಸ್ಯರ ಒಪ್ಪಿಗೆಯೊಂದಿಗೆ ಅದರ ಅಧ್ಯಕ್ಷರು ಸಚಿವರ ಜತೆ ಅನೌಪಚಾರಿಕ ಮಾತುಕತೆ ನಡೆಸಬಹುದಾಗಿದೆ.