ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮಾತು ಕೇಳದ ಜೋಶಿ; ಬಿಜೆಪಿಗೆ ಶಾಕ್, ಕಾಂಗ್ರೆಸ್ ಖುಷ್ (BJP | PAC | Murli Manohar Joshi | 2G scam)
Bookmark and Share Feedback Print
 
ಬಿಜೆಪಿ ಮುಖಂಡ ಮುರಳಿ ಮನೋಹರ ಜೋಶಿಯೇ ಅಧ್ಯಕ್ಷರಾಗಿರುವ ಸಾರ್ವಜನಿಕ ಲೆಕ್ಕಪತ್ರ ಸಮಿತಿಯೇ 2ಜಿ ಹಗರಣ ವಿಚಾರಣೆಗೆ ಸಾಕು ಎಂಬಂತೆ ಹೇಳಿಕೆ ನೀಡುವ ಮೂಲಕ ಜಂಟಿ ಸಂಸದೀಯ ಸಮಿತಿಗಾಗಿ ಭಾರೀ ಹೋರಾಟ ನಡೆಸುತ್ತಿರುವ ಕೇಸರಿ ಪಕ್ಷಕ್ಕೆ ಒಳಗಿನಿಂದಲೇ ಹೊಡೆತ ಬಿದ್ದಿದೆ. ಹಿರಿಯ ನಾಯಕರಾಗಿರುವ ಜೋಶಿಯನ್ನು ಪಕ್ಷದ ಚೌಕಟ್ಟಿಗೆ ತರಲು ಆರೆಸ್ಸೆಸ್ ಬಾಗಿಲನ್ನೂ ಬಿಜೆಪಿ ತಟ್ಟಿದೆ.

ಬಿಜೆಪಿ ವರಿಷ್ಠರ ಮಾತನ್ನು ಮುರಳಿ ಮನೋಹರ ಜೋಶಿ ಕೇಳುವುದಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಬಿಜೆಪಿಯ ಹಿರಿಯ ನಾಯಕರಲ್ಲಿ ಒಬ್ಬರಾಗಿರುವ ಜೋಶಿಯವರಿಗೆ ಆದೇಶ ನೀಡುವಂತಹ ನಾಯಕರು ಬಿಜೆಪಿಯಲ್ಲಿರುವುದು ಬೆರಳೆಣಿಕೆಯಷ್ಟು. ಅವರನ್ನು ನಿಯಂತ್ರಿಸುವುದು ಸುಲಭವಲ್ಲ ಎಂದು ಅರಿತಿರುವ ಬಿಜೆಪಿ ಈಗ ಆರೆಸ್ಸೆಸ್ ನಾಯಕತ್ತ ನೋಡುತ್ತಿದೆ. ಆರೆಸ್ಸೆಸ್ ಹೇಳಿದಂತೆ ಜೋಶಿ ಕೇಳಬಹುದು ಎನ್ನುವುದು ಬಿಜೆಪಿ ನಿರೀಕ್ಷೆ.
PTI

ಪ್ರತಿಪಕ್ಷದಲ್ಲಿ ಇಂತಹ ಬಿರುಕು ಕಾಣಿಸಿಕೊಂಡಿರುವುದು ಜೋಶಿಯವರು ನಿನ್ನೆ ಹೇಳಿಕೆಯೊಂದನ್ನು ನೀಡುವ ಮೂಲಕ. ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ಅಧ್ಯಕ್ಷರಾಗಿರುವ ಜೋಶಿ, ಪ್ರಸಕ್ತ 2ಜಿ ಹಗರಣದ ವಿಚಾರಣೆ ನಡೆಸುತ್ತಿದ್ದಾರೆ. ಈ ಸಮಿತಿಯಲ್ಲಿ ಒಟ್ಟು ಇರುವ ಸದಸ್ಯರು 22. ಜಸ್ವಂತ್ ಸಿಂಗ್ ಕೈಯಲ್ಲಿದ್ದ ಪಿಎಸಿ ಅಧ್ಯಕ್ಷಗಾದಿಯನ್ನು ಅವರ ಜಿನ್ನಾ ಕುರಿತ ಪುಸ್ತಕ ವಿವಾದದ ನಂತರ ಜೋಶಿಗೆ ನೀಡಲಾಗಿತ್ತು.

ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆಗೆ ಸರಕಾರ ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಅಷ್ಟಕ್ಕೂ ಜೆಪಿಸಿಗೂ ಪಿಎಸಿಗೂ ಅಂತಹ ವ್ಯತ್ಯಾಸವೇನೂ ಇಲ್ಲ. ಪಿಎಸಿ ಎದುರು ಪ್ರಧಾನಿ ಹಾಜರಾಗಬೇಕಾದ ನಿಯಮಗಳು ಇಲ್ಲವಾದರೂ, ನಾನು ಸಿದ್ಧನಿದ್ದೇನೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ಪತ್ರ ಬರೆದು ಜೋಶಿಯವರಿಗೆ ಮನವರಿಕೆ ಮಾಡಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿದ್ದ ಜೋಶಿ, ಪ್ರಧಾನಿಯವರನ್ನು ವಿಚಾರಣೆಗೆ ಕರೆಸುವ ಕುರಿತು ಸ್ವತಂತ್ರ ನಿರ್ಧಾರ ಕೈಗೊಳ್ಳಲಾಗುತ್ತದೆ. ಅಷ್ಟಕ್ಕೂ 2ಜಿ ಹಗರಣದ ತನಿಖೆ ನಡೆಸಲು ಜೆಪಿಸಿ ಬೇಕಾಗಿಲ್ಲ, ಪಿಎಸಿಯೇ ಸಾಕು ಎಂಬಂತೆ ಮಾತನಾಡಿದ್ದರು. ಆ ಮೂಲಕ ಎನ್‌ಡಿಎ ಹೋರಾಟಕ್ಕೆ ಹಿನ್ನಡೆ ಒದಗಿಸಿದ್ದರು.

ಜೋಶಿಯವರು ಇಂತಹ ಹೇಳಿಕೆ ನೀಡುತ್ತಿರುವಂತೆ ಉಬ್ಬಿ ಹೋಗಿರುವ ಕಾಂಗ್ರೆಸ್, ತನ್ನ ಅಸ್ತ್ರಗಳನ್ನು ಹೊರ ತೆಗೆದು ಒಂದೊಂದಾಗಿ ಬಿಡಲಾರಂಭಿಸಿದೆ.

ಪಿಎಸಿ ಅಧ್ಯಕ್ಷರಾಗಿರುವ ಜೋಶಿಯನ್ನು ನೇಮಕ ಮಾಡಿರುವುದು ಬಿಜೆಪಿ. ಅವರೀಗ ಬಿಜೆಪಿಯ ಮಾತನ್ನು ಕೇಳುತ್ತಿಲ್ಲವೆಂದಾದರೆ, ರಾಜೀನಾಮೆ ಕೇಳಿ. ಬಿಜೆಪಿಯೊಳಗೆ ಪರಸ್ಪರ ವೈರುಧ್ಯಗಳು ಇರುವುದು ಹೌದಾದರೆ, ಜೋಶಿ ಅಥವಾ ಸುಷ್ಮಾ ಸ್ವರಾಜ್ ರಾಜೀನಾಮೆ ನೀಡಲಿ ಎಂದು ಕಾಂಗ್ರೆಸ್ ವಕ್ತಾರ ಶಕೀಲ್ ಅಹ್ಮದ್ ಒತ್ತಾಯಿಸಿದ್ದಾರೆ.

ಪಿಎಸಿಯೇ ಬೇರೆ, ಜೆಪಿಸಿಯೇ ಬೇರೆ. ಪಿಎಸಿಗೆ ಪ್ರಧಾನಿ ಬಿಡಿ, ಸಚಿವರನ್ನು ಕರೆಸಿ ವಿಚಾರಣೆ ನಡೆಸುವ ಅಧಿಕಾರವೂ ಇಲ್ಲ. ಅವೆರಡೂ ಪ್ರತ್ಯೇಕ ಕಾರ್ಯವ್ಯಾಪ್ತಿಯನ್ನು ಹೊಂದಿದೆ. ನಾವು ಪಿಎಸಿಯನ್ನು ಯಾವತ್ತೂ ಒಪ್ಪಲು ಸಿದ್ಧರಿಲ್ಲ. ನಮಗೆ ಜೆಪಿಸಿಯೇ ಬೇಕು ಎಂದು ಸುಷ್ಮಾ ಬಿಜೆಪಿ ನಿಲುವನ್ನು ಮತ್ತೆ ಸ್ಪಷ್ಟಪಡಿಸಿದ್ದರ ಹಿನ್ನೆಲೆಯಲ್ಲಿ ಬಿಜೆಪಿಯಲ್ಲೇ ಬಿರುಕುಗಳಿರುವುದು ಬಯಲಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ