ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಚಿದಂಬರಂಗೆ ಬೇಕಾಗಿದ್ದು ಹೆಡ್ಲಿಯ ತೋರಿಕೆ ವಿಚಾರಣೆ ಮಾತ್ರ! (Wikileaks | P Chidambaram | Mumbai attack | David Coleman Headley)
Bookmark and Share Feedback Print
 
2008ರ ಮುಂಬೈ ದಾಳಿಕೋರರಿಗೆ ದಾರಿ ತೋರಿಸಿದವನು ಲಷ್ಕರ್ ಇ ತೋಯ್ಬಾದ ಭಯೋತ್ಪಾದಕ ದಾವೂದ್ ಸಯ್ಯದ್ ಗಿಲಾನಿ ಆಲಿಯಾಸ್ ಡೇವಿಡ್ ಕೋಲ್ಮನ್ ಹೆಡ್ಲಿ ಎಂಬುದು ಜಗತ್ತಿಗೆ ಗೊತ್ತಿರುವ ವಿಚಾರ. ಆದರೆ ಆತನನ್ನು ವಿಚಾರಣೆ ನಡೆಸಿದ್ದೇವೆಂದು ಜಗತ್ತಿಗೆ ಗೊತ್ತಾದರೆ ಸಾಕು ಎಂಬಂತೆ ಕೇಂದ್ರ ಗೃಹಸಚಿವ ಪಿ. ಚಿದಂಬರಂ ವರ್ತಿಸಿದ್ದರು ಎನ್ನುವುದು ಈಗ ಬಯಲಾಗಿದೆ.

ಇದನ್ನು ಬಹಿರಂಗಪಡಿಸಿರುವುದು ಅಮೆರಿಕಾದ ಪಾಲಿಗೆ ಬಹುದೊಡ್ಡ ಸವಾಲಾಗಿ ಪರಿಣಮಿಸಿರುವ ವಿಕಿಲೀಕ್ಸ್.

ಮುಂಬೈ ದಾಳಿಗೂ ಮೊದಲು ತನ್ನ ಮುಸ್ಲಿಂ ಹೆಸರನ್ನು ಕ್ರಿಶ್ಚಿಯನೀಕರಣಗೊಳಿಸಿದ್ದ ಪಾಕಿಸ್ತಾನ ಮೂಲದ ಅಮೆರಿಕಾ ಪ್ರಜೆ ಹೆಡ್ಲಿ, ಭಾರತಕ್ಕೆ ಬಂದು ಹಲವು ಪ್ರಮುಖ ಸ್ಥಳಗಳ ಚಿತ್ರೀಕರಣ ನಡೆಸಿ, ದಾಳಿ ನಡೆಸಬೇಕಾದ ಮಾಹಿತಿಗಳನ್ನು ಲಷ್ಕರ್ ಉಗ್ರರಿಗೆ ಹಸ್ತಾಂತರಿಸಿದ್ದ. ಈತನನ್ನು 2009ರ ಅಕ್ಟೋಬರ್ ತಿಂಗಳಲ್ಲಿ ಅಮೆರಿಕಾ ಬಂಧಿಸಿತ್ತು.
PTI

ಮುಂಬೈ ದಾಳಿ ಆರೋಪಿಯಾಗಿರುವ ಹೆಡ್ಲಿಯನ್ನು ನಮಗೆ ಒಪ್ಪಿಸಬೇಕು ಎಂದು ಗಟ್ಟಿಯಾಗಿ ಅಮೆರಿಕಾದ ಜತೆ ಕೇಳಲೂ ಹೆದರಿದ್ದ ಕೇಂದ್ರ ಸರಕಾರವು, ಆತ ಒಬ್ಬನೇ ಕಾರ್ಯಾಚರಿಸಿರುವ ಸಾಧ್ಯತೆಗಳಿಲ್ಲ ಎಂದು ಹೇಳಿತ್ತು ಎಂಬುದನ್ನು ವಿಕಿಲೀಕ್ಸ್ ಹೇಳಿದೆ.

ವಿಕಿಲೀಕ್ಸ್ ದಾಖಲೆಗಳ ಪ್ರಕಾರ, 2010ರ ಆರಂಭದಲ್ಲಿ ಎಫ್‌ಬಿಐ ನಿರ್ದೇಶಕ ರಾಬರ್ಟ್ ಮುಲ್ಲರ್ ಜತೆ ಚಿದಂಬರಂ ಮಾತುಕತೆ ನಡೆಸಿದ್ದರು. ಮುಂಬೈ ದಾಳಿಯ ಸಂಚನ್ನು ಹೆಡ್ಲಿ ಏಕಾಂಗಿಯಾಗಿ ಮಾಡಿರುವ ಸಾಧ್ಯತೆಗಳಿಲ್ಲ ಎಂದು ಚಿದಂಬರಂ ಶಂಕೆ ವ್ಯಕ್ತಪಡಿಸಿದ್ದರು.

ಅದಕ್ಕಿಂತಲೂ ಮಹತ್ವದ ವಿಚಾರವೆಂದರೆ ಭಾರತವು ನಿಜವಾಗಿಯೂ ಹೆಡ್ಲಿಯನ್ನು ವಿಚಾರಣೆ ನಡೆಸಲು ಆಸಕ್ತಿ ಹೊಂದಿರಲಿಲ್ಲ ಎನ್ನುವಂತದ್ದು. ಕೇವಲ ಹೆಡ್ಲಿಯನ್ನು ವಿಚಾರಣೆ ನಡೆಸಿದ್ದೇವೆ ಎಂದು ತೋರಿಕೆಗಾಗಿ ಅವಕಾಶ ಸಿಕ್ಕರೆ ಸಾಕು ಎಂಬಂತೆ ಚಿದಂಬರಂ ಮಾತನಾಡಿದ್ದರು. ಇದು ಕೂಡ ವಿಕಿಲೀಕ್ಸ್ ದಾಖಲೆಗಳಲ್ಲಿ ನಮೂದಾಗಿವೆ.

ಹೆಡ್ಲಿ ನಮ್ಮ ತನಿಖಾ ತಂಡದ ಜತೆ ಮಾತನಾಡದಿದ್ದರೂ, ನಾವು ಆತನನ್ನು ವಿಚಾರಣೆ ನಡೆಸಿದ್ದೇವೆ ಎಂದು ಹೇಳಿಕೊಳ್ಳಲು ಸಾಧ್ಯವಾಗುವಂತಿರಬೇಕು ಎಂದು ಇದೇ ವರ್ಷದ ಫೆಬ್ರವರಿಯಲ್ಲಿ ಗೃಹಸಚಿವರು ಹೇಳಿದ್ದರು.

ಮತ್ತೂ ಚೌಕಾಶಿಗೆ ಇಳಿದಿದ್ದ ಚಿದಂಬರಂ, ನಮಗೆ ಹೆಡ್ಲಿಯನ್ನು ನೇರವಾಗಿ ವಿಚಾರಣೆ ನಡೆಸಲು ಅವಕಾಶ ಇಲ್ಲದೇ ಇದ್ದರೆ, ಕನಿಷ್ಠ ಮತ್ತೊಂದು ಕೊಠಡಿಯಿಂದ ಹೆಡ್ಲಿಗೆ ಪ್ರಶ್ನೆ ಕೇಳಲು ಅವಕಾಶ ನೀಡಿ ಎಂದಿದ್ದರು.

ವಿಚಿತ್ರ ಎಂದರೆ ಅಮೆರಿಕಾವು ನೇರವಾಗಿ ವಿಚಾರಣೆ ನಡೆಸಲು ಭಾರತಕ್ಕೆ ಅವಕಾಶ ನೀಡುವ ಆಸಕ್ತಿ ಹೊಂದಿರುವ ಹೊತ್ತಿನಲ್ಲಿ ಸಚಿವರು ಇಂತಹ ಮಾತುಗಳನ್ನಾಡಿರುವುದು ಮತ್ತು ವಿಚಾರಣೆಯಲ್ಲಿ ಅತ್ಯಮೂಲ್ಯ ಮಾಹಿತಿಗಳನ್ನು ಹೆಡ್ಲಿ ಹೊರಗೆಡವಿರುವುದು. ಇದನ್ನು ಕೂಡ ಬಹಿರಂಗಪಡಿಸಿದ್ದ ಸಚಿವರಲ್ಲ, ಬದಲಿಗೆ ಹೆಡ್ಲಿಯನ್ನು ವಿಚಾರಣೆ ನಡೆಸಿದ್ದ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಅಧಿಕಾರಿಗಳು.

ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರವು, ತಾನು ಭಯೋತ್ಪಾದನೆ ವಿರುದ್ಧ ಕಠಿಣವಾಗಿದ್ದೇನೆ ಎಂಬ ಹೇಳಿಕೆಗಳನ್ನು ಆಗಾಗ ಹೇಳುತ್ತಿರುತ್ತದೆ. ಆದರೆ ಅದು ಯಾವ ಮಟ್ಟದಲ್ಲಿತ್ತು ಎನ್ನುವುದು ವಿಕಿಲೀಕ್ಸ್‌ನ ಹಲವು ದಾಖಲೆಗಳಿಂದ ಒಂದೊಂದೇ ಬಯಲಿಗೆ ಬರುತ್ತಿವೆ.
ಸಂಬಂಧಿತ ಮಾಹಿತಿ ಹುಡುಕಿ