ವಿವಾಹಿತ ಯುವಕನ ಜತೆ ಹುಡುಗಿಯೊಬ್ಬಳು ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಆರೋಪಿಸಿ ಆಕೆ ಮತ್ತು ಆಕೆಯ ತಾಯಿ ಇಬ್ಬರನ್ನೂ ಬೆತ್ತಲೆ ಮೆರವಣಿಗೆ ಮಾಡಿ, ಥಳಿಸಿದ ಅಮಾನವೀಯ ಪ್ರಕರಣವಿದು. ನಡೆದಿರುವುದು ಪಶ್ಚಿಮ ಬಂಗಾಲದಲ್ಲಿ.
ಕೊಲ್ಕತ್ತಾ ಸಮೀಪದ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಸ್ಥಳೀಯ ಗೂಂಡಾಗಳ ಗುಂಪೊಂದು ನೈತಿಕ ಪೊಲೀಸರಂತೆ ಶಿಕ್ಷೆ ಕೊಟ್ಟಿದೆ. ಅಲ್ಲದೆ ಇದನ್ನು ಪೊಲೀಸರಿಗೆ ಏನಾದರೂ ತಿಳಿಸಿದರೆ, ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆಯನ್ನೂ ಹಾಕಿದೆ.
ಹುಡುಗಿ ಹತ್ತನೇ ತರಗತಿಯಲ್ಲಿ ಓದುತ್ತಿರುವವಳು. ಕಳೆದ ಶುಕ್ರವಾರ ಟ್ಯೂಷನ್ ಮುಗಿಸಿ ಮನೆಗೆ ವಾಪಸ್ ಬರುತ್ತಿದ್ದಾಗ ಗುಂಪೊಂದು ದಾರಿಗೆ ಅಡ್ಡ ಬಂದು ಪ್ರಶ್ನಿಸಿ, ಆ ಗ್ರಾಮದ ಉನ್ನತ ವಿವಾಹಿತ ವ್ಯಕ್ತಿಯೊಬ್ಬನ ಜತೆ ಅಕ್ರಮ ಸಂಬಂಧವಿರುವುದರ ಕುರಿತು ನಿಂದಿಸಲಾರಂಭಿಸಿತು.
ಇಷ್ಟಕ್ಕೆ ತಣಿಯದ ಗೂಂಡಾಗಳು, ಆಕೆಯ ಬಟ್ಟೆಯನ್ನೂ ಬಿಚ್ಚಿದರು. ಬೆತ್ತಲೆಯಾಗಿ ಆಚೀಚೆ ಹೋಗುವಂತೆಯೂ ಗುಂಪು ಆದೇಶ ನೀಡಿತು. ಈ ಹೊತ್ತಿನಲ್ಲಿ ಮಗಳನ್ನು ದುಷ್ಟರಿಂದ ರಕ್ಷಿಸಲು ಮಧ್ಯಪ್ರವೇಶಿಸಿದ ಆಕೆಯ ತಾಯಿಯನ್ನೂ ಗುಂಪು ಬಿಡಲಿಲ್ಲ. ನೂರಾರು ಮಂದಿ ನೆರೆದಿದ್ದ ಗ್ರಾಮಸ್ಥರ ಎದುರೇ ತಾಯಿಯನ್ನೂ ಬೆತ್ತಲೆ ಮಾಡಲಾಯಿತು.
ನಂತರ ಆಕೆಯನ್ನು ಅಲ್ಲೇ ಇದ್ದ ಮರವೊಂದಕ್ಕೆ ಕಟ್ಟಿ ಹಾಕಲಾಯಿತು. ಮಗಳನ್ನು ರಕ್ಷಿಸಲು ಯತ್ನಿಸಿದಕ್ಕೆ ಮನಬಂದಂತೆ ಥಳಿಸಲಾಯಿತು. ತಮ್ಮನ್ನು ಬಿಟ್ಟು ಬಿಡಿ ಎಂದು ಎಷ್ಟೇ ಮನವಿ ಮಾಡಿಕೊಂಡರೂ, ಅಮಾನವೀಯವಾಗಿ ತಮ್ಮ ರಾಕ್ಷಸೀ ಕೃತ್ಯವನ್ನು ಮುಂದುವರಿಸಿದರು.
ಹುಡುಗಿಯ ಕೂದಲಿಗೂ ಪುಂಡರು ಕತ್ತರಿ ಹಾಕಿ ತಮ್ಮ ವಿಕೃತಿಯನ್ನು ಪ್ರದರ್ಶಿಸಿದ್ದಾರೆ. ಪೊಲೀಸರಿಗೆ ದೂರು ನೀಡಿದ್ದೇ ಆದಲ್ಲಿ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಬೆದರಿಕೆಯನ್ನೂ ಹಾಕಲಾಯಿತು.
ಇಷ್ಟೆಲ್ಲ ನಡೆದ ಮೇಲೆ ಪ್ರಾಣದ ಮೇಲೆ ಆಸೆಯಾದರೂ ಯಾಕೆ ಎಂಬಂತೆ ಬೆದರಿಕೆಗಳ ಹೊರತಾಗಿಯೂ ಕೆಲದಿನಗಳ ನಂತರ ಪೊಲೀಸ್ ಠಾಣೆಗೆ ತೆರಳಿದ ತಾಯಿ-ಮಗಳನ್ನು ಪೊಲೀಸರು ಕ್ಯಾರೇ ಅನ್ನಲಿಲ್ಲ. ಪ್ರಕರಣ ದಾಖಲಿಸಲು ನಿರಾಕರಿಸಿದರು. ಆದರೆ ಗ್ರಾಮದ ಸಭ್ಯರ ಒತ್ತಡ ಹೆಚ್ಚಿದ ನಂತರ ತನಿಖೆಗೆ ಮುಂದಾಗಿದ್ದಾರೆ.
ಪ್ರಕರಣವೂ ದಾಖಲಾಗಿದೆ. ಇದುವರೆಗೆ ನಾಲ್ಕು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಇಬ್ಬರು ಮಾತ್ರ ಇವರೆದುರಿನಲ್ಲೇ ಆರಾಮವಾಗಿ ತಿರುಗಾಡುತ್ತಿದ್ದಾರೆ. ಅವರ ವಿರುದ್ಧ ಪೊಲೀಸರು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ.