ಪಾಕಿಸ್ತಾನ ತನ್ನ ಕಾಲು ಕೆರೆದು ಜಗಳಕ್ಕೆ ಬರುವ ಚಾಳಿಯನ್ನು ಮತ್ತೆ ತೋರಿಸಿದೆ. ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿ ಗಡಿಯಲ್ಲಿ ಭಾರತೀಯ ಪ್ರದೇಶಗಳತ್ತ ಅಪ್ರಚೋದಿತವಾಗಿ ದಾಳಿ ನಡೆಸಿದೆ. ಘಟನೆಯಲ್ಲಿ ಯಾರೂ ಗಾಯಗೊಂಡಿರುವ ಅಥವಾ ಪ್ರಾಣ ಹಾನಿಯಾಗಿರುವ ವರದಿಗಳು ಬಂದಿಲ್ಲ.
ಈ ಘಟನೆ ನಡೆದಿರುವುದು ಬುಧವಾರ ಮುಂಜಾನೆ ಹೊತ್ತಿನಲ್ಲಿ. ಜಮ್ಮು ಪ್ರಾಂತ್ಯದ ಸಾಂಬಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯಲ್ಲಿ ಭಾರತೀಯ ಭೂ ಪ್ರದೇಶದ ಮೇಲೆ ಪಾಕಿಸ್ತಾನವು ಅಪ್ರಚೋದಿತವಾಗಿ ರಾಕೆಟ್ ಯೋಜಿತ ಗ್ರಾನೆಡ್ ಮತ್ತು ಗುಂಡಿನ ದಾಳಿ ನಡೆಸಿದೆ ಎಂದು ಗಡಿ ರಕ್ಷಣಾ ಪಡೆಯ ಅಧಿಕಾರಿ ಜಿ. ಒಬೆರಾಯ್ ತಿಳಿಸಿದ್ದಾರೆ.
ಮುಂಜಾನೆ 4.30ರ ವೇಳೆ ಪಾಕಿಸ್ತಾನದ ಪಡೆಗಳು ಈ ದಾಳಿಯನ್ನು ನಡೆಸಿವೆ. ತಕ್ಷಣವೇ ಪಾಕ್ ಪಡೆಗೆ ಭಾರತೀಯ ಸೈನಿಕರೂ ಪ್ರತ್ಯುತ್ತರ ನೀಡಿದ್ದಾರೆ. ಸುಮಾರು ಒಂದು ಗಂಟೆಗಳ ಕಾಲ ನಡೆದ ಗುಂಡಿನ ಚಕಮಕಿಯಲ್ಲಿ ಪ್ರಾಣ ಅಥವಾ ಆಸ್ತಿ ಹಾನಿಯಾಗಿಲ್ಲ. ಪಾಕಿಸ್ತಾನದ ಲಹರಿ ಕಲಂ ಪ್ರದೇಶದಿಂದ ಈ ದಾಳಿ ನಡೆದಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಸಾಮಾನ್ಯವಾಗಿ ತನ್ನ ದೇಶದ ಭಯೋತ್ಪಾದಕರನ್ನು ಭಾರತಕ್ಕೆ ನುಸುಳಲು ಅನುವಾಗುವಂತೆ ಪಾಕಿಸ್ತಾನ ಸೇನೆಯು ಈ ರೀತಿಯಾಗಿ ಪರೋಕ್ಷ ಸಹಕಾರ ನೀಡುತ್ತಿರುವುದು ಸಾಮಾನ್ಯ. ಇಂತಹ ದಾಳಿ ನಡೆದ ತಕ್ಷಣ ಮಿಲಿಟರಿಯು, ಭಾರತ ಗಡಿ ಪ್ರದೇಶಕ್ಕೆ ಉಗ್ರರು ನುಸುಳಿದ್ದಾರೆಯೇ ಎಂಬುದನ್ನು ತಪಾಸಣೆ ನಡೆಸುತ್ತದೆ.
ಈ ತಿಂಗಳಲ್ಲಿ ಪಾಕಿಸ್ತಾನ ಸೇನೆಯು ನಡೆಸಿರುವ ಮೂರನೇ ಕದನ ವಿರಾಮ ಉಲ್ಲಂಘನೆಯಿದು. ಡಿಸೆಂಬರ್ 2ರಂದು ಪಾಕ್ ಪಡೆಗಳು ಭಾರತದ ಗಡಿಭಾಗದಲ್ಲಿನ ಹಲವು ಔಟ್‌ಪೋಸ್ಟ್‌ಗಳ ಮೇಲೆ ಮೋರ್ಟಾರ್ ಮತ್ತು ರಾಕೆಟ್ ದಾಳಿ ನಡೆಸಿದ್ದವು.
ಪೂಂಚ್ ಜಿಲ್ಲೆಯ ಕೃಷ್ಣಘಾಟಿ ಉಪ ವಲಯದ ಗಡಿ ನಿಯಂತ್ರಣಾ ರೇಖೆಯಲ್ಲಿನ ಕಿರ್ಪಾನ್, ಕಿರ್ಪಾನ್ ವನ್, ಚಾಜಾ, ಕ್ರಾಂತಿ, ಗೋಡಾ, ನಂಗಿ ತಿಕ್ರಿ, ಮಂಡಲ್ ಮುಂತಾದ ಪೋಸ್ಟ್‌ಗಳ ಮೇಲೆ ಪಾಕಿಸ್ತಾನವು ರಾಕೆಟ್ ಮತ್ತು ಗುಂಡಿನ ಮಳೆಗರೆದಿತ್ತು.