ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ಸಂಬಂಧ ಜನರ ಅಭಿಪ್ರಾಯ ಸಂಗ್ರಹಣೆಗಾಗಿ ನೇಮಕಗೊಂಡಿದ್ದ ಶ್ರೀಕೃಷ್ಣ ಸಮಿತಿಯು ತನ್ನ ಶಿಫಾರಸ್ಸನ್ನು ಒಳಗೊಂಡ ವರದಿಯನ್ನು ಡಿಸೆಂಬರ್ 31ರಂದು ಕೇಂದ್ರಕ್ಕೆ ಸಲ್ಲಿಸಲಿದೆ. ಈ ಹಿನ್ನೆಲೆಯಲ್ಲಿ ದೆಹಲಿ-ಆಂಧ್ರ ರಾಜಕಾರಣ ತೀವ್ರ ಬಿಸಿಯೇರುತ್ತಿದೆ. ಸ್ವತಃ ಪ್ರಧಾನಿಯೇ ಸಚಿವರುಗಳನ್ನು ಕರೆಸಿ ಮಾತುಕತೆ ನಡೆಸುತ್ತಿದ್ದಾರೆ. ಅತ್ತ ಮತ್ತೊಂದು ಕಡೆ ವಿದ್ಯಾರ್ಥಿಗಳು ಬೆದರಿಕೆ ಹಾಕಲಾರಂಭಿಸಿದ್ದಾರೆ.
ಪ್ರತ್ಯೇಕ ತೆಲಂಗಾಣ ರಾಜ್ಯಕ್ಕೆ ಕೇಂದ್ರ ಶಿಫಾರಸು ಮಾಡಿದರೆ, 'ಕಠಿಣ ಪರಿಣಾಮವನ್ನು ಎದುರಿಸಬೇಕಾಗುತ್ತದೆ' ಎಂದಿರುವ ಅಖಂಡ ಆಂಧ್ರಪ್ರದೇಶ ವಿದ್ಯಾರ್ಥಿಗಳ ಜಂಟಿ ಕ್ರಿಯಾ ಸಮಿತಿ (ಜೆಎಸಿ), ಹಾಗೇನಾದರೂ ನಡೆದರೆ ಇತರ ಪ್ರಾಂತ್ಯಗಳ ಜನಪ್ರತಿನಿಧಿಗಳು ಅಧಿಕಾರ ತ್ಯಜಿಸಬೇಕೆಂದು ಒತ್ತಾಯಿಸಿದೆ.
ಏಕೀಕೃತ ಆಂಧ್ರಪ್ರದೇಶದ ವಿರುದ್ಧದ ನಿರ್ಣಯಕ್ಕೆ ಸರಕಾರ ಬಂದರೆ, ಮುಂದೆ ಮಾಡಬೇಕಾದ ಹೋರಾಟದ ಮಜಲುಗಳ ಬಗ್ಗೆ ಈಗಾಗಲೇ ಸಭೆ ಸೇರಿರುವ ಜೆಎಸಿ ಚರ್ಚಿಸಿ ಯೋಜನೆ ಸಿದ್ಧಪಡಿಸಿದೆ. ಸುಮಾರು 14 ವಿಶ್ವವಿದ್ಯಾಲಯಗಳ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿ, ನಾಗಾರ್ಜುನ ವಿಶ್ವವಿದ್ಯಾನಿಲಯದಲ್ಲಿ ಸಭೆ ಸೇರಿತ್ತು.
ರಾಜ್ಯದ ವಿವಿಧ ರಾಜಕೀಯ ಪಕ್ಷಗಳು ಈ ನಿಟ್ಟಿನಲ್ಲಿ ತಮ್ಮ ಕಸರತ್ತು ಮುಂದುವರಿಸಿವೆ. ಈಗಾಗಲೇ ಸಾಕಷ್ಟು ಸಂಕಷ್ಟಗಳಿಗೆ ಸಿಲುಕಿರುವ ಕಾಂಗ್ರೆಸ್, ಸರಕಾರವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಯೋಚನೆ ಮಾಡುತ್ತಿದೆ. ತೆಲಂಗಾಣ ಪ್ರಾಂತ್ಯದ ಶಾಸಕರನ್ನು ಹೇಗೆ ಉಳಿಸಿಕೊಳ್ಳುವುದು ಎಂಬ ಚಿಂತೆಯಲ್ಲಿದೆ.
ಟಿಆರ್ಎಸ್‌ನ ಚಂದ್ರಶೇಖರ ರಾವ್, ತೆಲುಗು ದೇಶಂನ ಚಂದ್ರಬಾಬು ನಾಯ್ಡು, ಬಂಡಾಯನಾಗಿ ಕಾಣಿಸಿಕೊಂಡಿರುವ ವೈಎಸ್ ಜಗನ್ ಮೋಹನ್ ರೆಡ್ಡಿ ತಮಗೆ ಇದರಿಂದ ಏನು ಲಾಭ ಎನ್ನುವುದನ್ನು ಕಾದು ನೋಡುತ್ತಿದೆ.
ತೆಲಂಗಾಣ ವಿವಾದದಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿರುವ ಒಸ್ಮಾನಿಯಾ ವಿಶ್ವವಿದ್ಯಾಲಯದಲ್ಲೂ ಸೂಕ್ಷ್ಮ ಪರಿಸ್ಥಿತಿಯಿದೆ. ಕೇಂದ್ರಕ್ಕೆ ವರದಿ ಸಲ್ಲಿಕೆಯಾಗಲಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಪ್ರತಿಕ್ರಿಯೆ ಹೇಗಿರುತ್ತದೆ ಎನ್ನುವುದೂ ಆತಂಕಕ್ಕೆ ಕಾರಣವಾಗಿದೆ.
ಅತ್ತ ಕೇಂದ್ರದಲ್ಲಿಯೂ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ಶ್ರೀಕೃಷ್ಣ ಸಮಿತಿಯು ಯಾವ ವರದಿ ನೀಡಿದರೂ ಆಂಧ್ರದಲ್ಲಿ ಹಿಂಸಾಚಾರ ನಡೆಯುವುದು ಖಚಿತವೆನ್ನುವ ಮಾತುಗಳು ಕೇಳಿ ಬರುತ್ತಿರುವುದರಿಂದ, ಅದನ್ನು ತಡೆಯುವುದು ಹೇಗೆ ಮತ್ತು ಕಾಂಗ್ರೆಸ್ ಜನಾಕ್ರೋಶದಿಂದ ಪಾರಾಗುವುದು ಹೇಗೆ ಎಂಬು ಚರ್ಚೆಗಳು ನಡೆದಿವೆ.
ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ತನ್ನ ಸಂಪುಟ ಸಭೆಯನ್ನು ನಡೆಸಿದ್ದಾರೆ. ಹಣಕಾಸು ಸಚಿವ ಪ್ರಣಬ್ ಮುಖರ್ಜಿ, ಗೃಹಸಚಿವ ಪಿ. ಚಿದಂಬರಂ, ರಕ್ಷಣಾ ಸಚಿವ ಎ.ಕೆ. ಆಂಟನಿ ಮತ್ತು ಕಾನೂನು ಸಚಿವ ಎಂ. ವೀರಪ್ಪ ಮೊಯ್ಲಿಯವರ ಜತೆ ಪ್ರಧಾನಿ ಮಹತ್ವದ ಸಭೆ ನಡೆಸಿದ್ದಾರೆ.
ಪ್ರತ್ಯೇಕ ರಾಜ್ಯ ಬೇಡಿಕೆಯ ಬಗ್ಗೆ ಸಾಕಷ್ಟು ಪರ-ವಿರೋಧ ಅಭಿಪ್ರಾಯಗಳಿವೆ. ಆದರೂ ತಾವು ಸಿದ್ಧಪಡಿಸಿರುವ ವರದಿಯಿಂದ ವಿವಾದಕ್ಕೆ ಶಾಶ್ವತ ಪರಿಹಾರ ಸಿಗುವ ವಿಶ್ವಾಸ ತನಗಿದೆ ಎಂದು ಶ್ರೀಕೃಷ್ಣ ಸಮಿತಿಯ ಅಧ್ಯಕ್ಷ, ಸುಪ್ರಿಂ ಕೋರ್ಟ್ ಮಾಜಿ ನ್ಯಾಯಮೂರ್ತಿ ಶ್ರೀಕೃಷ್ಣ ತಿಳಿಸಿದ್ದಾರೆ.