ಭೂಹಗರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ಕಾಂಗ್ರೆಸ್ ಮಾಜಿ ಮುಖ್ಯಮಂತ್ರಿ ರೋಸಯ್ಯ ಹಾಗೂ ಇತರ ಹದಿನಾರು ಮಂದಿಗಳ ಮೇಲೆ ಕೇಸು ದಾಖಲಿಸಲು ಭ್ರಷ್ಟಾಚಾರ ನಿರ್ಮೂಲನ ಇಲಾಖೆ (ಎಸಿಬಿ)ಗೆ ಬುಧವಾರ ನ್ಯಾಯಾಲಯ ಸೂಚಿಸಿದೆ.
ರೋಸಯ್ಯ ಅವರ ಅಧಿಕಾರಾವಧಿಯಲ್ಲಿ 200 ಕೋಟಿ ರೂ. ಮೌಲ್ಯದ ಒಂಬತ್ತು ಎಕರೆ ಆಸ್ತಿಯನ್ನು ರಾಜ್ಯ ಸರಕಾರ, ಖಾಸಗಿ ವ್ಯಕ್ತಿಗಳ ಸುಪರ್ದಿಗೆ ಒಪ್ಪಿಸಿತ್ತು ಎಂದು ಮೂಲ ಆಸ್ತಿಯ ವಾರಸುದಾರರು ಎನ್ನಲಾದ ಕಕ್ಷಿದಾರರ ಬಣ ಆರೋಪಿಸಿದೆ.
ಹೈದರಾಬಾದಿನ ಎಸಿಬಿ ವಿಶೇಷ ನ್ಯಾಯಾಲಯದಲ್ಲಿ ಮುಖ್ಯಮಂತ್ರಿ ಮತ್ತಿತರರ ಮೇಲೆ ವಕೀಲರಾದ ಮೋಹನ್ ಎಂಬವರು ಕೇಸು ದಾಖಲಿಸಿದ್ದರು. ಈ ನಿಮಿತ್ತ ಎಸಿಬಿಗೆ ನಿರ್ದೇಶನ ನೀಡಿರುವ ನ್ಯಾಯಾಲಯ, ಜನವರಿ 28ರ ಒಳಗೆ ವರದಿ ಸಲ್ಲಿಸಲು ಸೂಚಿಸಿದೆ.
ಅಮೀರ್ ಪೇಟೆ ಗ್ರಾಮ ಮತ್ತು ಹೈದರಾಬಾದ್ ಜಿಲ್ಲೆಯ ಮಂಡಲವೊಂದರಲ್ಲಿರುವ ಆಸ್ತಿಯನ್ನು ರೋಸಯ್ಯ ಡಿನೋಟಿಫೈ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಬಳಿಕ ಆ ಪ್ರದೇಶದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕಾಗಿ ಆ ಭೂಮಿಯನ್ನು ಖಾಸಗಿ ಡೆವೆಲಪರ್‌ಗೆ ಒಪ್ಪಿಸಲಾಗಿತ್ತು.
1997ರಲ್ಲಿ ಭೂಸ್ವಾಧೀನ ಅಧಿಸೂಚನೆಯ ನಂತರ, ಜಿ.ಎನ್.ನಾಯ್ಡು ಮತ್ತಿತರರು ಆ ಜಮೀನನ್ನು ಭೂಮಾಲೀಕರಿಂದ ಖರೀದಿಸಿದ್ದರು. ಆದರೆ, 2010ರಲ್ಲಿ ನಾಯ್ಡು ಮನವಿ ಮಾಡಿದ ಹಿನ್ನೆಲೆಯಲ್ಲಿ, ರೋಸಯ್ಯ ಸರಕಾರವು ಭೂಸ್ವಾಧೀನ ಅಧಿಸೂಚನೆಯನ್ನು ಹಿಂತೆಗೆದುಕೊಂಡು, ಈ ಭೂಮಿಯನ್ನು ಜಿ.ಎನ್.ನಾಯ್ಡು ಅವರಿಗೆ ಕಾನೂನು ಬಾಹಿರವಾಗಿ ಒಪ್ಪಿಸಿದೆ ಎಂದು ಕಕ್ಷಿದಾರರು ಆರೋಪಿಸಿದ್ದಾರೆ.
ಇದೇ ಪ್ರಕರಣಕ್ಕೆ ಸಂಬಂಧಿಸಿ ಜಿ.ಎನ್.ನಾಯ್ಡು, ಈ ಹಿಂದೆ ಆಂಧ್ರಪ್ರದೇಶದ ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ತಳ್ಳಿ ಹಾಕಿ, ಸ್ವಾಧೀನವಾದ ಭೂಮಿಯನ್ನು ಮರುಪಡೆಯಲು ಸಾಧ್ಯವಿಲ್ಲ ಎಂದು ಹೇಳಿತ್ತು.