ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಹೆಣ್ಣು ಹೆತ್ತವರಿಗೆ ಅವರ ಮದುವೆಯೆನ್ನುವುದು 'ಸಾಲ'ವೇ? (Supreme Court | India | judge | Gyan Sudha Mishra)
Bookmark and Share Feedback Print
 
ರಾಷ್ಟ್ರದ ಉನ್ನತ ನ್ಯಾಯಾಲಯದ ನ್ಯಾಯಾಧೀಶೆಯೊಬ್ಬರು ಹೇಳಿಕೊಂಡಿರುವ ಆಘಾತಕಾರಿ ಸುದ್ದಿಯಿದು. ನನ್ನ ಇಬ್ಬರು ಹೆಣ್ಣು ಮಕ್ಕಳಿಗೆ ಇನ್ನಷ್ಟೇ ಮದುವೆಯಾಗ ಬೇಕಿದೆ ಎಂದು 'ಸಾಲ'ವನ್ನು ತುಂಬಬೇಕಾಗಿರುವ ಕಾಲಂನಲ್ಲಿ ನ್ಯಾಯಾಧೀಶೆ ನಮೂದಿಸಿ ಅಚ್ಚರಿ ಹುಟ್ಟಿಸಿದ್ದಾರೆ.

'ಹೆಣ್ಣಿಗೆ ಹೆಣ್ಣೇ ಶತ್ರು' ಎಂಬ ಬುದ್ಧಿವಂತರ ಮಾತನ್ನು ನಿಜ ಮಾಡಲು ಹೊರಟಿರುವುದು ಸುಪ್ರೀಂ ಕೋರ್ಟ್‌ನ ಏಕೈಕ ಮಹಿಳಾ ನ್ಯಾಯಮೂರ್ತಿ ಜ್ಞಾನ ಸುಧಾ ಮಿಶ್ರಾ. ಅವರು ತನ್ನ ಆಸ್ತಿ-ಪಾಸ್ತಿಯನ್ನು ನ್ಯಾಯಾಲಯದ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದು, ತನ್ನ ಇಬ್ಬರು ಹೆಣ್ಮಕ್ಕಳನ್ನೂ ಸಾಲದ ಸಾಲಿಗೆ ಸೇರಿಸಿ ಬಿಟ್ಟಿದ್ದಾರೆ. ಆ ಮೂಲಕ ವಿವಾದಕ್ಕೆ ತುತ್ತಾಗಿದ್ದಾರೆ.

ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆ ಮುನ್ನುಗ್ಗುತ್ತಿರುವ ಹೊತ್ತಿನಲ್ಲಿ, ಪುರುಷನಿಗಿಂತ ತಾನೇನೂ ಕಡಿಮೆಯಿಲ್ಲ, ಯಾವ ವಿಚಾರದಲ್ಲೂ ಹಿಂದೆ ಇಲ್ಲ ಎಂಬುದನ್ನು ನಿರೂಪಿಸುತ್ತಿರುವ ದಿನಗಳಲ್ಲಿ, ಮಹಿಳೆಯರ ಪರವಾಗಿ ದನಿ ಎತ್ತಬೇಕಾಗಿದ್ದ ಆಯಕಟ್ಟಿನ ಜಾಗದಲ್ಲಿರುವ ಮಹಿಳೆಯೇ ಇಂತಹ ಅಪದ್ಧತೆಯನ್ನು ಪ್ರದರ್ಶಿಸಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ನ್ಯಾಯಾಧೀಶರು ತಮ್ಮ ಆಸ್ತಿ-ಪಾಸ್ತಿ, ಹೂಡಿಕೆ ಮತ್ತು ಸಾಲದ ವಿವರಗಳನ್ನು ಕಡ್ಡಾಯವಾಗಿ ಘೋಷಿಸಬೇಕು ಎಂದು ಸುಪ್ರೀಂ ಕೋರ್ಟ್ ನೀತಿಯನ್ನು ರೂಪಿಸಿರುವುದರಿಂದ ಎಲ್ಲಾ ನ್ಯಾಯಾಧೀಶರು ವಿವರಗಳನ್ನು ಪ್ರಕಟಿಸಿದ್ದಾರೆ. ಅವೆಲ್ಲವನ್ನೂ ಸುಪ್ರೀಂ ಕೋರ್ಟಿನ ವೆಬ್‌ಸೈಟಿನಲ್ಲಿ ಪ್ರಕಟಿಸಲಾಗಿದೆ.

ಸ್ಥಿರಾಸ್ತಿಗಳ ವಿಭಾಗದಲ್ಲಿ ತನಗೊಂದು ನಿವೇಶನವಿದೆ, ಒಂದು ಕಟ್ಟಡವಿದೆ, ಇನ್ನೊಂದು ವಸತಿ ಸಂಕೀರ್ಣವಿದೆ ಎಂದು ನ್ಯಾಯಾಧೀಶೆ ಸುಧಾ ಮಿಶ್ರಾ ಹೇಳಿಕೊಂಡಿದ್ದಾರೆ.

ಹೂಡಿಕೆಗಳ ವಿಭಾಗದಲ್ಲೂ ಬಾಂಡ್‌ಗಳು, ಶೇರುಗಳು ಮತ್ತು ಇನ್ನಿತರ ವಿಚಾರಗಳನ್ನು ನಮೂದಿಸಿದ್ದಾರೆ. ಇತರ ಚರಾಸ್ತಿ ವಿಭಾಗದಲ್ಲಿ ಚಿನ್ನ ಮತ್ತು ಗಂಡನಲ್ಲಿ ಮಾರುತಿ 800 ವಾಹನವೊಂದಿದೆ ಎಂದು ನ್ಯಾಯಾಧೀಶೆ ಘೋಷಿಸಿದ್ದಾರೆ.

ಹೊಣೆಗಾರಿಕೆ ವಿಭಾಗದಲ್ಲಿ, 'ಮಗಳ ಶೈಕ್ಷಣಿಕ ಸಾಲಕ್ಕೆ ತಾನು ಜಾಮೀನುಗಾರ್ತಿ' ಎಂದು ನಮೂದಿಸಿರುವ ಮಿಶ್ರಾ, ಇತರ ಹೊಣೆಗಾರಿಕೆ ವಿಭಾಗದಲ್ಲಿ, 'ಇಬ್ಬರು ಮಗಳಂದಿರ ಮದುವೆ ಮಾಡಬೇಕಿದೆ. ನಿವೃತ್ತಿಯ ನಂತರದ ಜೀವನಕ್ಕಾಗಿ ಮನೆಯೊಂದನ್ನು ಕಟ್ಟಬೇಕಿದೆ' ಎಂದು ಹೇಳಿಕೊಂಡಿದ್ದಾರೆ.

ಮಹಿಳಾ ಹಕ್ಕುಗಳ ಕಾರ್ಯಕರ್ತೆ ರಂಜನಾ ಕುಮಾರಿಯವರು, ನ್ಯಾಯಾಧೀಶೆಯ ನಿಲುವು ದುರದೃಷ್ಟಕರ ಎಂದಿದ್ದಾರೆ.

ಪುರುಷ ಮತ್ತು ಮಹಿಳೆಗೆ ಸಮಾನ ಹಕ್ಕುಗಳನ್ನು ನೀಡಿರುವ ಭಾರತದ ಸಂವಿಧಾನವನ್ನು ಎತ್ತಿ ಹಿಡಿಯಬೇಕಾದ ವ್ಯಕ್ತಿಯೊಬ್ಬರು ಈ ರೀತಿಯಾಗಿ ಹೇಳಿರುವುದು ದುರದೃಷ್ಟಕರ. ಇದು ಸಮಾಜದ ಮನಸ್ಥಿತಿಯನ್ನು ಬಿಂಬಿಸುತ್ತದೆ ಎಂದು ರಂಜನಾ ಅಭಿಪ್ರಾಯಪಟ್ಟಿದ್ದಾರೆ.

ಹೆತ್ತವರ ದೃಷ್ಟಿಯಿಂದ ಮಾತನಾಡುವುದಾದರೆ ತಮ್ಮ ಮಕ್ಕಳ, ಅದರಲ್ಲೂ ಹೆಣ್ಣು ಮಕ್ಕಳ ಮದುವೆಯನ್ನು ಸುಸೂತ್ರವಾಗಿ ಮಾಡಲು ಅದರ ಖರ್ಚಿಗಾಗಿ ಒಂದಷ್ಟು ಹಣವನ್ನು ಕೂಡಿಡುವುದು ಅಗತ್ಯ. ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳು ಈ ರೀತಿಯಾಗಿ ಬೆಳೆದಿರುವುದು ದುರದೃಷ್ಟಕರ ಎಂದು ನ್ಯಾಯವಾದಿ ಕೀರ್ತಿ ಸಿಂಗ್ ಪ್ರತಿಕ್ರಿಯಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ