ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬೆತ್ತಲಾಗಿದೆ ಸಿಬಿಐ; ಆರುಷಿ ಪ್ರಕರಣ ಇನ್ನೆಂದೂ ನಿಗೂಢ (CBI | Aarushi murder | Rajesh Talwar | Nupur)
Bookmark and Share Feedback Print
 
ಎರಡೂವರೆ ವರ್ಷಗಳ ಹಿಂದೆ ರಾಷ್ಟ್ರವ್ಯಾಪಿ ಭಾರೀ ಸುದ್ದಿಯಾಗಿದ್ದ ಆರುಷಿ ಕೊಲೆ ಪ್ರಕರಣ ಮುಚ್ಚಿ ಹೋಗುವ ಕಾಲ ಸನ್ನಿಹಿತವಾಗಿದೆ. ಈ ಪ್ರಕರಣದ ಹಿಂದಿನ ನೈಜ ರೂವಾರಿಗಳು ಯಾರು ಎಂಬುದನ್ನು ಪತ್ತೆ ಹಚ್ಚಲು ವಿಫಲವಾಗಿರುವ ಸಿಬಿಐ, ಪ್ರಕರಣವನ್ನು ಮುಚ್ಚಿ ಬಿಡಿ ಎಂದು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದೆ. ಆ ಮೂಲಕ ಮತ್ತೊಮ್ಮೆ ನಾಗರಿಕ ಜಗತ್ತಿನಲ್ಲಿ ಸಿಬಿಐ ಬೆತ್ತಲಾಗಿದೆ!

ರಾಜೇಶ್ ತಲ್ವಾರ್ ಮತ್ತು ನೂಪುರ್ ತಲ್ವಾರ್ ಎಂಬ ದಂತವೈದ್ಯ ದಂಪತಿಯ ಪುತ್ರಿ 14ರ ಹರೆಯದ ಆರುಷಿ ತಲ್ವಾರ್ 2008ರ ಮೇ 16ರಂದು ದೆಹಲಿ ಸಮೀಪದ ನೋಯ್ಡಾದಲ್ಲಿನ ಜಲವಾಯು ವಿಹಾರದ ಅವರ ನಿವಾಸದಲ್ಲಿ ಕೊಲೆಯಾಗಿದ್ದಳು. ಕತ್ತು ಸೀಳಿ ಆರುಷಿಯನ್ನು ಹತ್ಯೆ ಮಾಡಲಾಗಿತ್ತು.
PTI

ಅವರ ಮನೆಯಲ್ಲಿ ಮನೆಗೆಲಸ ಮಾಡುತ್ತಿದ್ದ, ಪ್ರಕರಣ ಪ್ರಮುಖ ಆರೋಪಿ ಎಂದು ಶಂಕಿಸಲಾಗಿದ್ದ 45ರ ಹರೆಯದ ಯಾಮ್ ಪ್ರಸಾದ್ ಬಂಜಾಡೆ ಆಲಿಯಾಸ್ ಹೇಮರಾಜ್ ಶವ ಮರುದಿನ ಅದೇ ಮನೆಯ ಮಹಡಿಯಲ್ಲಿ ಪತ್ತೆಯಾಗಿತ್ತು.

ಕೊಲೆ ನಿಗೂಢತೆಗಳನ್ನು ಭೇದಿಸಲು ವಿಫಲರಾಗಿದ್ದ ಉತ್ತರ ಪ್ರದೇಶ ಪೊಲೀಸರಿಂದ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಿದ ನಂತರ, 2008ರ ಜೂನ್ 1ರಂದು ಆರುಷಿ ತಂದೆ ರಾಜೇಶ್ ತಲ್ವಾರ್ ಅವರನ್ನು ಬಂಧಿಸಲಾಯಿತು. ನಂತರದ ದಿನಗಳಲ್ಲಿ ತಲ್ವಾರ್ ಜತೆ ಸಹಾಯಕರಾಗಿ ಕೆಲಸ ಮಾಡಿದ್ದ ಹಲವು ಮಂದಿಯನ್ನು ಬಂಧಿಸಿ, ತನಿಖೆ ನಡೆಸಿತ್ತು.

ಸುಮಾರು 18 ತಿಂಗಳುಗಳ ಕಾಲ ನಿರಂತರವಾಗಿ ತನಿಖೆ ನಡೆಸಿದ ಸಿಬಿಐ ಕೂಡ ಯಾವುದೇ ಅಂತಿಮ ತೀರ್ಮಾನಕ್ಕೆ ಬರಲು ವಿಫಲವಾಗಿದೆ. ನಮಗೆ ಪುರಾವೆಗಳು ಸಿಕ್ಕಿರದೇ ಇರುವುದರಿಂದ, ಕೊಲೆ ಪ್ರಕರಣವನ್ನು ಮುಚ್ಚಬೇಕು ಎಂದು ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಮನವಿ ಮಾಡಿಕೊಂಡಿದೆ. ಇದನ್ನು ನ್ಯಾಯಾಲಯ ಸ್ವೀಕರಿಸಿದರೆ, ಜೈಲಿನಲ್ಲಿರುವ ಎಲ್ಲಾ ಆರೋಪಿಗಳು ಖುಲಾಸೆಗೊಳ್ಳುತ್ತಾರೆ.

ಸಿಬಿಐ ನಿಜಕ್ಕೂ ವಿಫಲವಾಗಿದೆಯೇ? ನಿಜಕ್ಕೂ ಅದಕ್ಕೆ ಸಾಕ್ಷಿಗಳು ಸಿಕ್ಕಿಲ್ಲವೇ? ಬ್ರೈನ್‌ಮ್ಯಾಪಿಂಗ್, ಪಾಲಿಗ್ರಾಫ್‌ಗಳಂತಹ ತಂತ್ರಜ್ಞಾನಗಳನ್ನು ಬಳಸಿದರೂ ಸತ್ಯವನ್ನು ಹೊರಗೆಳೆಯಲು ಯಾಕೆ ಸಾಧ್ಯವಾಗಲಿಲ್ಲ? ಪ್ರಕರಣದ ಹಿಂದೆ ಕಾಣದ ಕೈಗಳ ಕೈವಾಡವಿದೆಯೇ? ರಾಜಕಾರಣಿಗಳು ಇಲ್ಲಿ ಕೈಯಾಡಿಸಿದ್ದಾರೆಯೇ? -- ಇದು ಈ ಹಿಂದೆ ಸಿಬಿಐಯನ್ನು ಕಂಡಿರುವ ಹಲವರ ಪ್ರಶ್ನೆಗಳು.

ಪ್ರಕರಣವನ್ನು ಮುಗಿಸುವ ಬಗ್ಗೆ ನ್ಯಾಯಾಲಯ ಇನ್ನಷ್ಟೇ ತನ್ನ ತೀರ್ಮಾನವನ್ನು ಕೈಗೊಳ್ಳಬೇಕಿದೆ.

ಆರುಷಿ ಪ್ರಕರಣದ ಪ್ರಮುಖ ಬೆಳವಣಿಗೆಗಳು:
16-05-2008 - ಆರುಷಿ ಹತ್ಯೆ. ಕೆಲಸದಾಳು ಹೇಮರಾಜ್ ಮೇಲೆ ಶಂಕೆ.
17-05-2008 - ಆರುಷಿ ಮರಣೋತ್ತರ ಪರೀಕ್ಷೆ ನಂತರ ದಹನ.
17-05-2008 - ಆರುಷಿ ಅಸ್ಥಿ ವಿಸರ್ಜನೆಗೆ ಹರಿದ್ವಾರಕ್ಕೆ ತೆರಳಿದ ಹೆತ್ತವರು.
17-05-2008 - ತಲ್ವಾರ್ ಕುಟುಂಬಕ್ಕೆ ಸಂತಾಪ ವ್ಯಕ್ತಪಡಿಸಲೆಂದು ಮಾಜಿ ಪೊಲೀಸ್ ಅಧಿಕಾರಿಯೊಬ್ಬರು ತೆರಳಿದಾಗ, ಹೇಮರಾಜ್ ಶವ ಪತ್ತೆ. ಆಗಿನ್ನೂ ತಲ್ವಾರ್ ಕುಟುಂಬ ಮನೆಗೆ ವಾಪಸ್ ಬಂದಿರಲಿಲ್ಲ.
17-05-2008 - ಅತ್ಯಾಚಾರ ಅಥವಾ ಲೈಂಗಿಕ ಕಿರುಕುಳ ನಡೆದಿಲ್ಲ ಎಂದು ಸ್ಪಷ್ಟನೆ.
18-05-2008 - ಹತ್ತಿರದವರಿಂದಲೇ ವೈದ್ಯಕೀಯ ಸಾಧನಗಳನ್ನು ಬಳಸಿ ಹತ್ಯೆ ಶಂಕೆ.
19-05-2008 - ತಲ್ವಾರ್ ಮಾಜಿ ಸಹಾಯಕ, ನೇಪಾಳ ಮೂಲದ ವಿಷ್ಣು ಶರ್ಮಾ ಮೇಲೆ ಅನುಮಾನ.
21-05-2008 - ಮರ್ಯಾದಾ ಹತ್ಯೆ ಶಂಕೆ. ಕೊನೆಯ 45 ದಿನಗಳ ಅವಧಿಯಲ್ಲಿ 688 ಬಾರಿ ಮೊಬೈಲ್ ಮೂಲಕ ಮಾತನಾಡಿದ್ದ ಆರುಷಿಯ ಗೆಳೆಯನ ವಿಚಾರಣೆ.
23-05-2008 - ಎರಡು ಕೊಲೆ ಆರೋಪಗಳ ಮೇಲೆ ಆರುಷಿ ತಂದೆ ರಾಜೇಶ್ ತಲ್ವಾರ್ ಬಂಧನ.
13-06-2008 - ತಲ್ವಾರ್ ಅವರ ನೇಪಾಳಿ ಸಹಾಯ ಕೃಷ್ಣ ಬಂಧನ. ಆತನಿಗೆ ಪಾಲಿಗ್ರಾಫ್ ಮತ್ತು ನಾರ್ಕೊ ಅನಾಲಿಸಿಸ್ ಪರೀಕ್ಷೆ.
14-06-2008 - ತಲ್ವಾರ್ ಮತ್ತೊಬ್ಬ ಸಹಾಯಕ ರಾಜ್‌ಕುಮಾರ್‌ಗೆ ಪಾಲಿಗ್ರಾಫ್ ಪರೀಕ್ಷೆ.
20-06-2008 - ರಾಜೇಶ್ ತಲ್ವಾರ್‌ಗೆ ಸುಳ್ಳು ಪತ್ತೆ ಪರೀಕ್ಷೆ. ಕೆಲ ದಿನಗಳ ನಂತರ ಆರುಷಿ ತಾಯಿಗೂ ಅದೇ ಪರೀಕ್ಷೆ.
10-07-2008 - ಆರುಷಿ ಕೊಲೆ ಪ್ರಕರಣದ ರೂವಾರಿ ರಾಜ್‌ಕುಮಾರ್. ಈತನಿಗೆ ಸಹಕಾರ ನೀಡಿದ್ದು ಕೃಷ್ಣ, ಶಂಭು ಮತ್ತು ಹೇಮರಾಜ್. ಇದಕ್ಕಿದ್ದ ಕಾರಣ ಆರುಷಿ ಮೇಲಿನ ಮೋಹ. ಹೇಮರಾಜ್‌ನನ್ನು ಕೊಂದದ್ದು ಆತ ಪ್ರಕರಣ ಬಾಯಿ ಬಿಡಬಹುದು ಎಂಬ ನಿಟ್ಟಿನಲ್ಲಿ. ಹೀಗೆಂದು ರಾಜ್‌ಕುಮಾರ್ ನಾರ್ಕೊ ಅನಾಲಿಸಿಸ್ ಪರೀಕ್ಷೆಯಲ್ಲಿ ಹೇಳಿದ್ದಾನೆ ಎಂದು ಪತ್ರಿಕಾ ವರದಿ.
11-07-2008 - ವಿಜಯ್ ಮಂಡಲ್ ಆಲಿಯಾಸ್ ಶಂಭು ಬಂಧನ.
12-07-2008 - ರಾಜೇಶ್ ತಲ್ವಾರ್ ಬಿಡುಗಡೆ.
04-09-2009 - ಆರುಷಿ ಗುಪ್ತಾಂಗದ ಅಂಶಗಳ ಮಾದರಿಗಳು ಅಪರಿಚಿತ ಮಹಿಳೆಯ ಮಾದರಿಗಳೊಂದಿಗೆ ಅದಲು ಬದಲು. ಆರುಷಿಯ ಶವ ಪತ್ತೆಯಾಗಿದ್ದಾಗ ಇದ್ದ ಬಟ್ಟೆಗಳು ರಕ್ತಸಿಕ್ತವಾಗಿದ್ದವು. ಆದರೆ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ತಲುಪಿದ್ದು ಶುದ್ಧ ಬಟ್ಟೆಗಳು.
05-01-2010 - ತಲ್ವಾರ್ ದಂಪತಿಯ ನಾರ್ಕೊ ಪರೀಕ್ಷೆ. ಫಲಿತಾಂಶ ಶೂನ್ಯ.
16-05-2010 - ಮಗಳ ಸಾವಿನ ಕುರಿತು ಎರಡನೇ ವರ್ಷದ ಪುಣ್ಯಾಚರಣೆ ನಡೆಸಿದ ಹೆತ್ತವರು.
29-12-2010 - ಪುರಾವೆಗಳು ಲಭ್ಯವಾಗದೇ ಇರುವ ಹಿನ್ನೆಲೆಯಲ್ಲಿ ಆರುಷಿ ಹತ್ಯಾ ಪ್ರಕರಣ ಮುಚ್ಚಲು ಸಿಬಿಐ ಶಿಫಾರಸು.
ಸಂಬಂಧಿತ ಮಾಹಿತಿ ಹುಡುಕಿ