ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 'ಗೇಮ್ಸ್' ಕಲ್ಮಾಡಿಯನ್ನು ಸಿಬಿಐ ವಿಚಾರಣೆ ನಡೆಸಲಿದೆಯೇ? (Suresh Kalmadi | CWG Organizing Committee | CWG | CBI)
Bookmark and Share Feedback Print
 
ಕಾಮನ್‌ವೆಲ್ತ್ ಗೇಮ್ಸ್ ಹಗರಣ ಸಂಬಂಧ ಅದರ ರೂವಾರಿ ಎಂದು ಪರಿಗಣಿಸಲ್ಪಟ್ಟಿರುವ ಕಾಂಗ್ರೆಸ್ ಸಂಸದ ಹಾಗೂ ಗೇಮ್ಸ್ ಸಂಘಟನಾ ಸಮಿತಿಯ ಅಧ್ಯಕ್ಷ ಸುರೇಶ್ ಕಲ್ಮಾಡಿಯವರನ್ನು ಕೊನೆಗೂ ವಿಚಾರಣೆಗೆ ಒಳಪಡಿಸಲು ಸಿಬಿಐ ನಿರ್ಧರಿಸಿದೆ.

ನಕಲಿ ಒಪ್ಪಂದಗಳು, ಬ್ಲ್ಯಾಕ್‌ಮೇಲ್ ಪತ್ರ ಮತ್ತು ಸಾಕ್ಷಿಗಳನ್ನು ನಾಶಪಡಿಸಿದ ವಿಚಾರಗಳಲ್ಲಿ ಕಲ್ಮಾಡಿಯವರ ಪಾತ್ರಗಳೇನು ಎಂಬುದನ್ನು ಸಿಬಿಐ ಪ್ರಶ್ನಿಸುವ ಸಾಧ್ಯತೆಗಳಿವೆ.

2ಜಿ ಹಗರಣದಲ್ಲಿ ಡಿಎಂಕೆಯ ಎ. ರಾಜಾ ನಡೆದುಕೊಂಡಂತೆಯೇ, ಕಲ್ಮಾಡಿ ಸಹ ವಿಚಾರಣೆಗೆ ಹಾಜರಾಗಲು ಸಮಯದ ಅಭಾವದ ಕಾರಣ ನೀಡಿದ್ದಾರೆ. ಅವರು ಜನವರಿ ಮೂರರವರೆಗೆ ಕಾಲಾವಕಾಶ ಕೋರಿದ್ದಾರೆ.

ಕ್ವೀನ್ಸ್ ಬೇಟನ್ ರಿಲೇಯಲ್ಲಿ ನಡೆದಿರುವ ಅಕ್ರಮಗಳು, ಫಲಿತಾಂಶ ಬೋರ್ಡುಗಳ ಒಪ್ಪಂದಗಳಲ್ಲಿ ನಿಯಮಾವಳಿಗಳನ್ನು ಉಲ್ಲಂಘಿಸಿರುವುದು, ನಿರ್ದಿಷ್ಟ ಸಂಸ್ಥೆಗಳ ಜತೆಗಿನ ವ್ಯವಹಾರ ಮುಂತಾದ ಆರೋಪಗಳನ್ನು ಎದುರಿಸುತ್ತಿರುವ ಕಲ್ಮಾಡಿ ವಿರುದ್ಧ ಸಿಬಿಐ ತನಿಖೆ ನಡೆಯುತ್ತಿರುವ ಹೊತ್ತಿನಲ್ಲಿ, ಗೇಮ್ಸ್ ಸಂಘಟನಾ ಸಮಿತಿಯನ್ನು ವಿಸರ್ಜಿಸಲು ಕಾಂಗ್ರೆಸ್ ಸಂಸದ ಯತ್ನಿಸಿದ್ದಾಗ ಅದನ್ನು ಪ್ರಧಾನಿ ಕಚೇರಿಯ ಸಿಇಒ ಜರ್ನೈಲ್ ಸಿಂಗ್ ತಡೆದಿದ್ದರು.

ಸಂಘಟನಾ ಸಮಿತಿಯನ್ನು ವಿಸರ್ಜಿಸುವ ಕಲ್ಮಾಡಿ ಆದೇಶವನ್ನು ತಡೆಯುವ ಆದೇಶ ಹೊರಡಿಸಿರುವ ಜರ್ನೈಲ್ ಸಿಂಗ್, ಕಾಮನ್‌ವೆಲ್ತ್ ಗೇಮ್ಸ್‌ನ ಸಂಘಟನಾ ಸಮಿತಿಯಿಂದ ಯಾವುದೇ ಅಧಿಕಾರಿ ಪ್ರಧಾನಿ ಕಚೇರಿಯ ಸಿಇಒ ಒಪ್ಪಿಗೆ ಇಲ್ಲದೆ ಹೊರ ಹೋಗುವಂತಿಲ್ಲ ಎಂದು ಡಿಸೆಂಬರ್ 27ರಂದು ಹೊರಡಿಸಿದ ಸುತ್ತೋಲೆಯಲ್ಲಿ ತಿಳಿಸಿದ್ದರು. ಇದರೊಂದಿಗೆ ಗೇಮ್ಸ್ ಸಮಿತಿಯ ಅಧಿಕಾರಿಗಳನ್ನು ಕಲ್ಮಾಡಿಯಿಂದ ದೂರ ಇಡುವ ಮಹತ್ವದ ಕ್ರಮಕ್ಕೆ ಪ್ರಧಾನಿ ಕಛೇರಿ ಮುಂದಾಗಿರುವುದು ಸ್ಪಷ್ಟವಾಗಿದೆ.

ಸಂಸದರಾಗಿರುವ ಕಲ್ಮಾಡಿಯನ್ನು ವಿಚಾರಣೆಗೊಳಪಡಿಸ ಬೇಕಾದರೆ ಲೋಕಸಭಾ ಸ್ಪೀಕರ್ ಅವರಿಂದ ಸಿಬಿಐ ಅನುಮತಿ ಪಡೆಯಬೇಕಾಗುತ್ತದೆ. ಆದರೆ ಇದುವರೆಗೆ ಈ ಸಂಬಂಧ ಯಾವುದೇ ಅನುಮತಿಯನ್ನು ಕೇಳಲಾಗಿಲ್ಲ ಎಂದು ಮೂಲಗಳು ಹೇಳಿವೆ.

ಕಲ್ಮಾಡಿ ಮತ್ತು ಅವರ ಕಾರ್ಯಾಲಯ ಸಿಬಿಐನ ಎಲ್ಲಾ ತನಿಖೆಗಳಿಗೂ ಸ್ಪಂದಿಸುವುದಾಗಿ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ