ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮೇಲಿನ ಆರೋಪಿತ ಭೂ ಹಗರಣ ಅನೈತಿಕ ಹೌದು, ಆದರೆ ಕಾನೂನು ಬಾಹಿರವಲ್ಲ-- ಹೀಗೆಂದು ಸಮರ್ಥಿಸಿಕೊಂಡಿರುವುದು ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ.
ಮುಖ್ಯಮಂತ್ರಿ ಯಡಿಯೂರಪ್ಪ ಮೀಸಲು ಕೆಟಗರಿಯಿಂದ ಭೂಮಿಯನ್ನು ವಾಪಸ್ ಪಡೆದಿರುವುದು ಮತ್ತು ತನ್ನ ಪುತ್ರನಿಗೆ ಜಮೀನು ಮಂಜೂರು ಮಾಡಿರುವುದು ಕಾನೂನು ಬಾಹಿರವಲ್ಲ, ಇದು ಕೇವಲ ಅನೈತಿಕ. ಆದರೆ ಇದಕ್ಕಿಂತ ಮುಂಚಿನ ಮುಖ್ಯಮಂತ್ರಿಗಳಿಗೆ ಹೋಲಿಸಿದರೆ ಯಡಿಯೂರಪ್ಪನವರ ಪಾಲು ಈ ವಿಚಾರದಲ್ಲಿ ತುಂಬಾ ಕಡಿಮೆ ಎಂದು ಅಭಿಪ್ರಾಯಪಟ್ಟರು.
ಎಸ್.ಎಂ. ಕೃಷ್ಣ, ಎಚ್.ಡಿ. ಕುಮಾರಸ್ವಾಮಿ ಮತ್ತು ಎನ್. ಧರಂ ಸಿಂಗ್ ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದಾಗ ನಡೆದಿರುವ ಭೂ ಅತಿಕ್ರಮಣಗಳು ಈಗಿನದ್ದಕ್ಕೆ ಹೋಲಿಸಿದರೆ ಏನೂ ಅಲ್ಲ. ಮೀಸಲು ಕೆಟಗರಿಯಿಂದ ಭೂಮಿಯನ್ನು ಪಡೆದು, ಅದನ್ನು ತನ್ನ ಮಗನಿಗೆ ಕೊಡುವುದು ಅನೈತಿಕ ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ ಅದು ಕಾನೂನು ಬಾಹಿರವಲ್ಲ ಎಂದರು.
ಎ. ರಾಜಾ ಮತ್ತು ಪ್ರಧಾನಿ ಮನಮೋಹನ್ ಸಿಂಗ್ ವಿರುದ್ಧ ಭ್ರಷ್ಟಾಚಾರದ ಕುರಿತು ಹುಯಿಲೆಬ್ಬಿಸುವ ನೀವು ಯಡಿಯೂರಪ್ಪ ಬಗ್ಗೆ ಯಾಕೆ ಚಕಾರ ಎತ್ತುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಗಡ್ಕರಿ, ಭೂ ಅತಿಕ್ರಮ ನನ್ನ ಗಮನಕ್ಕೆ ಬರುತ್ತಿದ್ದಂತೆ ಅದನ್ನು ಮೊದಲು ವಾಪಸ್ ಮಾಡುವಂತೆ ಯಡಿಯೂರಪ್ಪ ಅವರಿಗೆ ಸೂಚನೆ ನೀಡಿದೆ. ತಕ್ಷಣವೇ ನನ್ನ ಸೂಚನೆಯನ್ನು ಪಾಲಿಸಿದ ಅವರು ಭೂಮಿ ಮರಳಿಸಿದರು. ರಾಜಕೀಯದಿಂದ ಮಕ್ಕಳು ಮತ್ತು ಅಳಿಯಂದಿರನ್ನು ದೂರ ಇಡುವಂತೆ ಮತ್ತು ಯಾವುದೇ ವಿಚಾರದಲ್ಲಿ ಮಧ್ಯ ಪ್ರವೇಶಕ್ಕೆ ಅವಕಾಶ ನೀಡದಂತೆ ಸೂಚಿಸಿದೆ. ಅದರಂತೆ ನಡೆದುಕೊಂಡರು ಎಂದು ವಿವರಣೆ ನೀಡಿದರು.
ಯಡಿಯೂರಪ್ಪನವರನ್ನು ಯಾಕೆ ರಾಜೀನಾಮೆ ಕೊಡಿಸಲಿಲ್ಲ ಎಂದು ಗಡ್ಕರಿಯವರನ್ನು ಪ್ರಶ್ನಿಸಲಾಯಿತು. ಈ ಸಂದರ್ಭದಲ್ಲಿ ಬಹುತೇಕ ಯಡಿಯೂರಪ್ಪನವರನ್ನು ಬಿಜೆಪಿ ವರಿಷ್ಠ ಸಮರ್ಥಿಸಿಕೊಂಡರು.
'ಅವರು ಕೆಲವೊಂದು ತಪ್ಪುಗಳನ್ನು ಮಾಡಿದ್ದಾರೆ. ವ್ಯಕ್ತಿಯೊಬ್ಬ ಕಾರ್ಯ ನಿರ್ವಹಿಸುವಾಗ ಕೆಲವು ತಪ್ಪುಗಳು ಆಗುವುದು ಸಹಜ. ಆ ತಪ್ಪುಗಳು ದುರುದ್ದೇಶಪೂರಿತವಾಗಿದ್ದರೆ, ಆಗ ವಜಾಗೊಳಿಸಬೇಕು. ಪ್ರಮಾದಗಳು ಪ್ರಾಮಾಣಿಕತೆಯಿಂದ ಬಂದಿದ್ದರೆ, ಮತ್ತೆ ಹಾಗೆ ಮಾಡದಂತೆ ಅವರಿಗೆ ಹೇಳಬೇಕು. ಆ ರೀತಿಯಲ್ಲಿ ಅವರಿಂದ ಕೆಲವು ಸಣ್ಣ ತಪ್ಪುಗಳು ಆಗಿರಬಹುದು' ಎಂದರು.