ನವದೆಹಲಿ: ಸಾರ್ವಜನಿಕ ಲೆಕ್ಕಪತ್ರ ಸಮಿತಿಯ (ಪಿಎಸಿ) ಮುಖ್ಯಸ್ಥರಾಗಿ, ಅದರ ಗೌರವಕ್ಕೆ ಚ್ಯುತಿ ಬಾರದಂತಾಗಲು, ಅದರ ಅಧಿಕಾರ ವ್ಯಾಪ್ತಿಯ ಬಗ್ಗೆ ಅರಿವಿದೆ ಎಂದಿರುವ ಬಿಜೆಪಿ ಸಂಸದ ಮುರಳಿ ಮನೋಹರ ಜೋಶಿ, 2ಜಿ ಹಗರಣದ ತನಿಖೆಯನ್ನು ತನ್ನ ಪಕ್ಷವಾಗಿರುವ ಬಿಜೆಪಿ ಆಗ್ರಹಿಸುತ್ತಿರುವಂತೆ ಜಂಟಿ ಸದನ ಸಮಿತಿ (ಜೆಪಿಸಿ)ಗೆ ವಹಿಸುವುದೇ ಸೂಕ್ತ ಎಂದು ಹೇಳುವ ಮೂಲಕ, ಬಿಜೆಪಿ ಮತ್ತು ತಮ್ಮ ನಡುವೆ ತಿಕ್ಕಾಟ ಆರಂಭವಾಗಿದೆ ಎಂಬ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಸಾರ್ವಜನಿಕ ಹಣದ ವ್ಯಯ ಮಾಡುವಲ್ಲಿ ಹೆಚ್ಚಿನ ಹೊಣೆಗಾರಿಕೆ ತರುವಲ್ಲಿ ಪಿಎಸಿಗೆ ಇರುವ ಅಧಿಕಾರ ವ್ಯಾಪ್ತಿಯ ಮೇಲೆ ನನಗೆ ವಿಶ್ವಾಸವಿದೆ ಎಂದು ಗುರುವಾರ ತಿಳಿಸಿದ ಅವರು, ಆದರೆ ಒಬ್ಬ ಬಿಜೆಪಿ ಸಂಸದನಾಗಿ, ದೇಶದ ಬೃಹತ್ ಭ್ರಷ್ಟಾಚಾರವನ್ನು ಸಮಗ್ರವಾಗಿ ವಿಚಾರಣೆಗೊಳಪಡಿಸಲು, ಜಂಟಿ ಸದನ ಸಮಿತಿಯ ರಚನೆಗೆ ಸಂಪೂರ್ಣವಾಗಿ ಬದ್ಧನಾಗಿರುವುದಾಗಿ ಹೇಳುತ್ತಾ, ಪಿಎಸಿ ಅಧ್ಯಕ್ಷ ಮತ್ತು ಬಿಜೆಪಿಯ ಹಿರಿಯ ನಾಯಕನೆಂಬ ಎರಡೂ ಹೊಣೆಗಳನ್ನು ಸಂತುಲಿತವಾಗಿಡಲು ಪ್ರಯತ್ನಿಸಿದರು.
2ಜಿ ಹಗರಣಕ್ಕೆ ಸಂಬಂಧಪಟ್ಟಂತೆ ಪಿಎಸಿ ಮುಂದೆ ಹಾಜರಾಗಲು ತಾನು ಸಿದ್ಧ ಎಂದು ಪ್ರಧಾನಿ ಮನಮೋಹನ್ ಸಿಂಗ್ ಅವರು ಮುಂದಿಟ್ಟ ಪ್ರಸ್ತಾಪವನ್ನು ಪರಿಗಣಿಸಲು ಜೋಶಿ ಮನ ಮಾಡಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಬಿಜೆಪಿಯು ಜೋಶಿ ಬಗ್ಗೆ ಮುನಿಸಿಕೊಂಡಿತ್ತು ಎಂಬುದಾಗಿ ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಜೋಶಿ ಅವರು ಬುಧವಾರ ರಾತ್ರಿ ಪಕ್ಷಾಧ್ಯಕ್ಷ ನಿತಿನ್ ಗಢ್ಕರಿ ಜೊತೆ ಮಾತುಕತೆ ನಡೆಸಿದ ಬಳಿಕ ತಮ್ಮ ನಿರ್ಧಾರವನ್ನು ಸ್ಪಷ್ಟಪಡಿಸಿದರು.
ಅವರ ನಿಲುವು ಬಿಜೆಪಿಯ ಜೆಪಿಸಿ ತನಿಖೆ ಆಗ್ರಹದ ತೀವ್ರತೆಯನ್ನು ತಗ್ಗಿಸುತ್ತದೆ ಎಂಬ ಕಾರಣಕ್ಕೆ, ಜೋಶಿ ಮತ್ತು ಪಕ್ಷದ ನಡುವೆ ಮನಸ್ತಾಪವುಂಟಾಗಿದೆ ಎಂಬ ವರದಿಗಳಿದ್ದವು. ಇದೀಗ ಜೋಶಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, ಭ್ರಷ್ಟಾಚಾರದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಸಾರ್ವಜನಿಕ ಮಹಾ ಲೆಕ್ಕಪತ್ರಾಧಿಕಾರಿ (ಸಿಎಜಿ) ವರದಿಗಳ ಆಧಾರದಲ್ಲಿ, ಸಾರ್ವಜನಿಕರ ಹಣ ದುರುಪಯೋಗವಾದ ಕುರಿತು ಪಿಎಸಿ ತನಿಖೆ ನಡೆಸುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಸಾಂವಿಧಾನಿಕ ಕಾನೂನಿನ ನೆಲೆಗಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅದಕ್ಕೆ ಅದರದ್ದೇ ಆದ ನಿರ್ಣಾಯಕ ಅಧಿಕಾರ ಪರಿಧಿ ಇದೆ. ಈ ಮಿತಿಯಲ್ಲಿ ಮತ್ತು ಸಂಸತ್ತಿನ ನಿಯಮಗಳ ಅನುಸಾರ ವಿಚಾರಣೆ ಕೈಗೊಳ್ಳುತ್ತದೆ. ಸಾರ್ವಜನಿಕರ ಪ್ರತಿಯೊಂದು ಪೈಸೆಯೂ ಸದುಪಯೋಗವಾಗುವಂತೆ ಅದು ನೋಡಿಕೊಳ್ಳುತ್ತದೆ ಎಂದ ಅವರು, ಬರೇ ದೂರಸಂಪರ್ಕ ಸಚಿವಾಲಯವನ್ನು ಮಾತ್ರವೇ ಪಿಎಸಿ ವಿಚಾರಣೆಗೊಳಪಡಿಸುವುದಿಲ್ಲ. ಬದಲಾಗಿ, ವಿಭಿನ್ನ ಸಚಿವಾಲಯಗಳಿಗೆ ಸಂಬಂಧಿಸಿದಂತೆ ಸಿಎಜಿ ನೀಡುವ ವರದಿಗಳನ್ನೂ ಪರಿಶೀಲಿಸುತ್ತದೆ ಎಂದರು.