ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಂಸತ್ ದಾಳಿಕೋರನದ್ದು 'ಸಭ್ಯ ನಡತೆ'ಯೆಂದು ಬಿಡುಗಡೆ!
(Parliament attack | Afzal Guru | Shaukat Hussain Guru | Congress)
ಸಂಸತ್ ಮೇಲಿನ ಭಯೋತ್ಪಾದನಾ ದಾಳಿಗಾಗಿ ಸುಪ್ರೀಂ ಕೋರ್ಟಿನಿಂದ ಮರಣ ದಂಡನೆ ಶಿಕ್ಷೆಯನ್ನು ಪಡೆದುಕೊಂಡು ಪ್ರಸಕ್ತ ಜೈಲಿನಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಕೃಪೆಯಿಂದ ಕಾಯುತ್ತಿರುವ ಕಾಶ್ಮೀರಿ ಉಗ್ರ ಅಫ್ಜಲ್ ಗುರುವಿನ ಪ್ರಕರಣದಲ್ಲಿ ದೋಷಿಯೆಂದು ತೀರ್ಪು ಪಡೆದುಕೊಂಡಿರುವ ಇನ್ನೊಬ್ಬ ವ್ಯಕ್ತಿಯ ಕಥೆಯಿದು. ಆತನದ್ದು ಸಭ್ಯ ವರ್ತನೆ ಎಂದು ಬಿಡುಗಡೆ ಮಾಡಲಾಗಿದೆ!
2001ರ ಡಿಸೆಂಬರ್ 13ರಂದು ಪಾಕಿಸ್ತಾನದ ಲಷ್ಕರ್ ಇ ತೋಯ್ಬಾ ಭಯೋತ್ಪಾದಕ ಸಂಘಟನೆಯ ನೆರವಿನಿಂದ ನಡೆದಿದ್ದ ದಾಳಿಯ ಹಿಂದೆ ಕೆಲಸ ಮಾಡದೇ ಇದ್ದರೂ, ಅದಕ್ಕೆ ಒಂದು ರೀತಿಯಲ್ಲಿ ಸಹಕರಿಸಿದವರಲ್ಲಿ ಶೌಕತ್ ಹುಸೇನ್ ಗುರು ಕೂಡ ಒಬ್ಬ. ಈತ ತಪ್ಪಿತಸ್ಥ ಎಂದು ತೀರ್ಪು ನೀಡಿದ್ದ ಸರ್ವೋಚ್ಚ ನ್ಯಾಯಾಲಯ, 10 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಿತ್ತು.
2005ರಲ್ಲಿ ಸುಪ್ರೀಂ ಕೋರ್ಟ್ ಈ ತೀರ್ಪು ನೀಡಿತ್ತು. 10 ವರ್ಷಗಳ ಜೈಲು ಶಿಕ್ಷೆಯ ಜತೆ, 25,000 ರೂಪಾಯಿಗಳ ದಂಡವನ್ನೂ ಹೇರಿತ್ತು.
ನ್ಯಾಯಾಲಯದ ತೀರ್ಪಿನ ಪ್ರಕಾರ ಆತ ಬಿಡುಗಡೆಯಾಗ ಬೇಕಾಗಿರುವುದು 2011ರಲ್ಲಿ. ಆದರೆ ಆತನನ್ನು ಒಂಬತ್ತು ತಿಂಗಳು ಮೊದಲೇ ಬಿಡುಗಡೆ ಮಾಡಲಾಗಿದೆ. ಇದಕ್ಕೆ ಅಧಿಕಾರಿಗಳು ನೀಡಿರುವ ಕಾರಣ 'ಸಭ್ಯ ನಡತೆ'.
ವಿಚಾರಣೆ ಸಂದರ್ಭದಲ್ಲಿ ಪ್ರಸಕ್ತ ಬಿಡುಗಡೆಯಾಗಿರುವ ಶೌಕತ್ ಹುಸೇನ್ ಗುರು ಮತ್ತು ದಾಳಿಯ ಹಿಂದಿನ ರೂವಾರಿಗಳಿಗೆ ನೇರ ಸಂಬಂಧವಿರುವುದು ಕಂಡು ಬಂದಿರಲಿಲ್ಲ. ಆದರೆ ಪ್ರಕರಣಕ್ಕೆ ಸಂಬಂಧಪಟ್ಟ ಮಾಹಿತಿಗಳನ್ನು ಮುಚ್ಚಿಟ್ಟದ್ದರಲ್ಲಿ ತಪ್ಪಿತಸ್ಥ ಎಂದು ಸಾಬೀತಾಗಿತ್ತು.
ತನಗೆ 10 ವರ್ಷಗಳ ಶಿಕ್ಷೆಯನ್ನು ವಿಧಿಸಿರುವುದರ ವಿರುದ್ಧ ಸುಪ್ರೀಂ ಕೋರ್ಟಿನಲ್ಲಿ ಶೌಕತ್ ಮಾಡಿದ್ದ ಮೇಲ್ಮನವಿ 2008ರ ಮೇ 14ರಂದು ವಜಾಗೊಂಡಿತ್ತು. ತಾನು ಎಸಗದ ಕೃತ್ಯದ ಕುರಿತು ಮಾಹಿತಿಯನ್ನು ಮುಚ್ಚಿಟ್ಟಿದ್ದರಲ್ಲಿ ತಪ್ಪಿತಸ್ಥ ಎಂದು ನ್ಯಾಯಾಲಯವು ತೀರ್ಪು ನೀಡಿರುವುದನ್ನು ಆತ ಪ್ರಶ್ನಿಸಿದ್ದ.