ಹಿಂದೂಗಳ ಭೀತಿಯಿಂದ ಕರಸೇವಕರಿಗೆ ಗುಂಡಿಕ್ಕಲಿಲ್ಲ: ಕಾಂಗ್ರೆಸ್
ನವದೆಹಲಿ, ಶುಕ್ರವಾರ, 31 ಡಿಸೆಂಬರ್ 2010( 11:57 IST )
ಬಾಬ್ರಿ ಮಸೀದಿ ಧ್ವಂಸ ಮಾಡುತ್ತಿದ್ದ ಕರಸೇವಕರನ್ನು ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರಕಾರವು ಯಾಕೆ ತಡೆಯಲಿಲ್ಲ ಎಂಬುದಕ್ಕೆ ಕಾಂಗ್ರೆಸ್ ತನ್ನಲ್ಲೇ ಉತ್ತರ ಕಂಡುಕೊಂಡಿದೆ. ಉದ್ರಿಕ್ತ ಹಿಂದೂಗಳಿಂದ ತೀವ್ರತರದ ಪ್ರತಿರೋಧ ಬರಬಹುದು ಎಂಬ ಭೀತಿಯಿಂದ ಕರಸೇವಕರ ಮೇಲೆ ಗುಂಡು ಹಾರಿಸಲು ಸರಕಾರ ಆದೇಶ ನೀಡಲಿಲ್ಲವೆಂದು ತನ್ನ ಪುಸ್ತಕದಲ್ಲಿ ಹೇಳಿಕೊಂಡಿದೆ.
1992ರ ಡಿಸೆಂಬರ್ 6ರಂದು ಅಯೋಧ್ಯೆಯಲ್ಲಿ ಕೇಂದ್ರದ ಪಡೆಗಳು ಇದ್ದ ಹೊರತಾಗಿಯೂ, ವಿಶ್ವ ಹಿಂದೂ ಪರಿಷತ್ ಬೆಂಬಲಿತ ಕಾರ್ಯಕರ್ತರು 16ನೇ ಶತಮಾನದ ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಿದ್ದರು. ಇದರ ಬಳಿಗ ದೇಶದಾದ್ಯಂತ ಭಾರೀ ಕೋಮುಗಲಭೆಗಳು ನಡೆದ್ದವು.
ಉತ್ತರ ಪ್ರದೇಶದ ಬಿಜೆಪಿ ಸರಕಾರದ ಒಳಸಂಚಿನಿಂದ ನಡೆದ ಈ ಘಟನೆಯಲ್ಲಿ ಕೇಂದ್ರದ ನರಸಿಂಹ ರಾವ್ ಸರಕಾರವು ಮಧ್ಯಪ್ರವೇಶ ಮಾಡಿಲ್ಲ ಎಂದು ತೀವ್ರ ಟೀಕೆಯನ್ನು ಎದುರಿಸಿತ್ತು.
ಈ ಬಗ್ಗೆ ಕಾಂಗ್ರೆಸ್ ತನ್ನ ಇತಿಹಾಸದ ವಿವರಣೆಗಳನ್ನೊಳಗೊಂಡ ಪುಸ್ತಕದಲ್ಲಿ ಸ್ಪಷ್ಟನೆ ನೀಡಿದೆ. ತಾನು ಯಾಕೆ ಕ್ರಮ ಕೈಗೊಳ್ಳಲಿಲ್ಲ, ಮಧ್ಯಪ್ರವೇಶ ಮಾಡಲಿಲ್ಲ ಎಂಬುದನ್ನು ಬಹಿರಂಗಪಡಿಸಿದೆ. ತಾನೆಂತಹ ಉಭಯ ಸಂಕಟದಲ್ಲಿ ಸಿಲುಕಿದ್ದೆ ಎಂಬುದನ್ನು ವಿವರಿಸಿದೆ.
ಕೇಂದ್ರದ ಕಾಂಗ್ರೆಸ್ ಸರಕಾರದ ಮುಂದೆ ಇದ್ದ ಆಯ್ಕೆಗಳು ಎರಡು. ಮೊದಲನೆಯದ್ದು ಮಸೀದಿಯನ್ನು ಧ್ವಂಸ ಮಾಡಲು ಮುಂದಾಗಿದ್ದ ಕರಸೇವಕರ ಮೇಲೆ ಗುಂಡು ಹಾರಿಸುವುದು. ಆದರೆ ಇದರಿಂದ ಉದ್ರಿಕ್ತ ಹಿಂದೂಗಳು ಮತ್ತಷ್ಟು ಆಕ್ರೋಶಗೊಳ್ಳುತ್ತಿದ್ದರು. ಎರಡನೇ ಆಯ್ಕೆ ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡದೇ ಇರುವುದು. ಇದರಿಂದ ಕೋಮು ಶಕ್ತಿಗಳನ್ನು ಅನಿಯಂತ್ರಿತ ಸ್ಥಿತಿಗೆ ಬಿಟ್ಟಂತೆ ಆಗುತ್ತಿತ್ತು ಎಂದು ಕಾಂಗ್ರೆಸ್ ಹೇಳಿದೆ.
ಆದರೂ ತಕ್ಷಣವೇ ಎಲ್ಲಾ ಕೋಮುವಾದಿ ಸಂಘಟನೆಗಳನ್ನು ಕೇಂದ್ರ ಸರಕಾರವು ನಿಷೇಧಿಸಿತ್ತು ಎಂದು ಪುಸ್ತಕ ಹೇಳಿದೆ.
ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಉತ್ತರ ಪ್ರದೇಶ ಬಿಜೆಪಿ ಸರಕಾರದ ಬೆಂಬಲದೊಂದಿಗೆ ಅಯೋಧ್ಯೆ ಆಂದೋಲನ ನಡೆಯುತ್ತಿದ್ದ ಹೊತ್ತಿನಲ್ಲಿ ಕಾಂಗ್ರೆಸ್ ತನ್ನ ನೈಜ ಜಾತ್ಯತೀತ ನಂಬಿಕೆಗಳಿಗೆ ಅಂಟಿಕೊಳ್ಳುವುದನ್ನು ಬಿಟ್ಟು ಮುನ್ನುಗ್ಗುತ್ತಿದ್ದ ಧಾರ್ಮಿಕ ಶಕ್ತಿಗಳಿಗೆ ಬಗ್ಗಲೇಬೇಕಾದ ಅನಿವಾರ್ಯತೆಗೆ ಸಿಲುಕಿತ್ತು. ತೀವ್ರ ಆಕ್ರೋಶಭರಿತರಾಗಿದ್ದ ಹಿಂದೂಗಳು ತಿರುಗಿ ಬೀಳಬಹುದು ಎನ್ನುವುದೇ ಕಾಂಗ್ರೆಸ್‌ಗೆ ಇದ್ದ ಭೀತಿ ಎಂದು ಪುಸ್ತಕದಲ್ಲಿ ಹೇಳಲಾಗಿದೆ.