ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕೇಂದ್ರದ ವಿರುದ್ಧ ಹೋರಾಡಿ: ಆಂಧ್ರ ರೈತರಿಗೆ ಗೌಡ ಕರೆ (HD Deve Gowda | Andhra Pradesh | JDS | TDP)
Bookmark and Share Feedback Print
 
ರೈತರ ಹೆಸರಿನಲ್ಲಿ ಕರ್ನಾಟಕ ಬಿಜೆಪಿ ಸರಕಾರದ ವಿರುದ್ಧ ಹೋರಾಟ ಮಾಡಿದ 'ಮಣ್ಣಿನ ಮಗ' ಖ್ಯಾತಿಯ ಮಾಜಿ ಪ್ರಧಾನ ಮಂತ್ರಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಈಗ ಆಂಧ್ರಪ್ರದೇಶ ತಲುಪಿದ್ದಾರೆ. ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರದ ರೈತ ವಿರೋಧಿ ನೀತಿ ವಿರುದ್ಧ ಹೋರಾಡಬೇಕು ಎಂದು ರೈತರಿಗೆ ಅವರು ಕರೆ ನೀಡಿದ್ದಾರೆ.

ರೈತರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಗಮನ ಸೆಳೆಯಲು ಆಂಧ್ರಪ್ರದೇಶದ ಗುಂಟೂರಿನಲ್ಲಿ ತೆಲುಗು ದೇಶಂ ಪಕ್ಷವು (ಟಿಡಿಪಿ) ಆಯೋಜಿಸಿದ್ದ ಬೃಹತ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಗೌಡರು, ಯುಪಿಎ ಸರಕಾರಕ್ಕೆ ಕಠಿಣ ಎಚ್ಚರಿಕೆ ರವಾನಿಸಿದರು. ಹೀಗೆಯೇ ಮುಂದುವರಿದರೆ ನೀವು ರೈತರ ಆಕ್ರೋಶವನ್ನು ಎದುರಿಸಬೇಕಾಗುತ್ತದೆ ಎಂದರು.
NRB

ರೈತರ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡುತ್ತಿರುವ ಆಡಳಿತದಲ್ಲಿರುವ ಮಂದಿ ಸರ್ವನಾಶವಾಗಲಿದ್ದಾರೆ ಎಂದ ಅವರು, ರೈತರನ್ನು ಕಡೆಗಣಿಸಿರುವ ಕೇಂದ್ರ ಸರಕಾರದ ವಿರುದ್ಧ ಎಲ್ಲೆಡೆ ಪ್ರತಿಭಟನೆಗಳನ್ನು ಮಾಡುವಂತೆ ಕರೆ ನೀಡಿದರು.

ದೇಶದಾದ್ಯಂತ, ಅದರಲ್ಲೂ ಆಂಧ್ರಪ್ರದೇಶದಲ್ಲಿ ಭಾರೀ ಸಂಖ್ಯೆಯಲ್ಲಿ ರೈತರು ಆತ್ಮಹತ್ಯೆಗೆ ಶರಣಾಗುತ್ತಿರುವುದಕ್ಕೆ ಜೆಡಿಎಸ್ ವರಿಷ್ಠ ತೀವ್ರ ಕಳವಳ ವ್ಯಕ್ತಪಡಿಸಿದರು.

ಇತ್ತೀಚಿನ ಭಾರೀ ಅಕಾಲಿಕ ಮಳೆಯಿಂದಾಗಿ ಬೆಳೆ ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ಧನವೆಂದು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ 400 ಕೋಟಿ ರೂಪಾಯಿ ಪರಿಹಾರ ಘೋಷಿಸಿರುವುದನ್ನು 'ಕಡಲೇಕಾಯಿ ಖರೀದಿ ಪರಿಹಾರ' ಎಂದು ಲೇವಡಿ ಮಾಡಿದರು.

ರೈತರ ಸಮಸ್ಯೆಗಳನ್ನು ಎತ್ತಿ ತೋರಿಸುವ ಸಲುವಾಗಿ ಟಿಡಿಪಿ ವರಿಷ್ಠ ಎನ್. ಚಂದ್ರಬಾಬು ನಾಯ್ಡು ನಡೆಸಿದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಶ್ಲಾಘಿಸಿದ ಗೌಡರು, ರೈತರ ಸಂಕಷ್ಟಗಳಿಗೆ ನಾಯ್ಡು ಹೊಸ ಆಯಾಮವನ್ನು ಕೊಟ್ಟಿದ್ದಾರೆ ಎಂದರು.

ಈ ಸಮಾವೇಶಕ್ಕೆ ದೇಶದ ವಿವಿಧ ಭಾಗಗಳಿಂದ ಸಾವಿರಾರು ರೈತರು ಆಗಮಿಸಿದ್ದರು. ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್, ರಾಷ್ಟ್ರೀಯ ಲೋಕದಳದ ನಾಯಕ ಅಜಿತ್ ಸಿಂಗ್ ಮತ್ತು ಇತರ ಪಕ್ಷಗಳ ನಾಯಕರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಜನಸಂಖ್ಯೆಯ ಶೇ.65-70 ಮಂದಿಯನ್ನು ನಿರ್ಲಕ್ಷಿಸಿದರೆ ಈ ದೇಶ ಪ್ರಗತಿ ಕಾಣುವುದು ಸಾಧ್ಯವಿಲ್ಲ ಎಂದು ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಬಾಬುಲಾಲ್ ಮರಾಂಡಿ ಅಭಿಪ್ರಾಯಪಟ್ಟರೆ, ರೈತರ ಸಮಸ್ಯೆಗಳಿಗೆ ಯುಪಿಎ ಸರಕಾರದ ನೀತಿಗಳೇ ಕಾರಣ ಎಂದು ಅಜಿತ್ ಸಿಂಗ್ ಆಪಾದಿಸಿದರು.
ಸಂಬಂಧಿತ ಮಾಹಿತಿ ಹುಡುಕಿ