ಅತ್ತ ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ನಕ್ಸಲ್ ದಮನಕ್ಕೆ ಟೊಂಕ ಕಟ್ಟಿ ನಿಂತಿದ್ದರೆ, ಇತ್ತ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಶಿಬು ಸೊರೆನ್ ಕೆಂಪು ಉಗ್ರರಿಗೆ ಬೆಂಬಲ ಸೂಚಿಸಿದ್ದಾರೆ. ಅವರದ್ದು ಜನಪರ ಹೋರಾಟವಾಗಿರುವುದರಿಂದ ಬೆಂಬಲ ನೀಡದೇ ಇರಲು ನನ್ನಲ್ಲಿ ಕಾರಣಗಳೇ ಇಲ್ಲ ಎಂದು ಜೆಎಂಎಂ ನಾಯಕ ಹೇಳಿದ್ದಾರೆ.
ಕೊಲ್ಕತ್ತಾದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸೊರೆನ್, ನಕ್ಸಲ್ ಚಳವಳಿ ಜನತೆಯ ಆಂದೋಲನ. ಬಂಡುಕೋರರನ್ನು ಬೆಂಬಲಿಸಲು ನನ್ನಲ್ಲಿ ಕಾರಣಗಳಿವೆ ಎಂದರು.
ಮಾವೋವಾದಿಗಳ ಹಿಂಸಾಚಾರವನ್ನು ಬೆಂಬಲಿಸಿದರೆ ಈಗಾಗಲೇ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಮಾನವ ಹಕ್ಕುಗಳ ಹೋರಾಟಗಾರ ಬಿನಾಯಕ್ ಸೇನ್‌ಗೆ ಆದ ಗತಿಯೇ ಆಗಬಹುದು ಎಂಬ ಭೀತಿಯಿಂದ ತಕ್ಷಣವೇ ಎಚ್ಚೆತ್ತುಕೊಂಡ ಸೊರೆನ್ ಸ್ಪಷ್ಟನೆಯನ್ನೂ ನೀಡಿದ್ದಾರೆ.
ಹತ್ಯೆಗಳನ್ನು ನಾನು ಖಂಡಿತಕ್ಕೂ ಬೆಂಬಲಿಸುವುದಿಲ್ಲ. ಆದರೆ ನಕ್ಸಲರ ಚಳವಳಿಯನ್ನು ಬೆಂಬಲಿಸುತ್ತೇನೆ. ಅದು ಜನರ ಆಂದೋಲನ. ನಾನು ಕೂಡ ಆ ಚಳವಳಿಯ ನಾಯಕತ್ವ ವಹಿಸಿದ್ದೆ. ಇದನ್ನು ಸಾಕಷ್ಟು ಮಂದಿ ಬೆಂಬಲಿಸುತ್ತಾರೆ ಮತ್ತು ವಿರೋಧಿಸುತ್ತಾರೆ ಎಂದರು.
ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಬುಡಕಟ್ಟು ಜನರ ಹಕ್ಕುಗಳಿಗಾಗಿ ಹೋರಾಡುತ್ತಾ ಬಂದಿದೆ. ಇದಕ್ಕಾಗಿ ಹೋರಾಡುವ ಪ್ರತಿಯೊಬ್ಬರನ್ನೂ ನಮ್ಮ ಪಕ್ಷವು ಬೆಂಬಲಿಸುತ್ತದೆ. ಆದರೆ ಅಮಾಯಕ ಮಂದಿಯನ್ನು ಕೊಲ್ಲುವುದರಿಂದ ಸಮಸ್ಯೆ ಸಿಗುವುದು ಖಂಡಿತಕ್ಕೂ ಸಾಧ್ಯವಿಲ್ಲ ಎಂದು ತನ್ನ ನಿಲುವನ್ನು ಸೊರೆನ್ ಸ್ಪಷ್ಟಪಡಿಸಿದರು.
ಜಂಟಿ ಪಡೆಗಳನ್ನು ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ನಿಯೋಜನೆ ಮಾಡಿರುವುದರಿಂದ ಬುಡಕಟ್ಟು ಜನರಿಗೆ ತೊಂದರೆಯಾಗಿದೆಯೇ ಎಂಬ ಪ್ರಶ್ನೆಗೆ, ಕಾನೂನು ಸುವ್ಯವಸ್ಥೆಯನ್ನು ರಕ್ಷಿಸಲು ಇದರ ಅಗತ್ಯವಿದೆ ಎಂದು ಕೇಂದ್ರ ಸರಕಾರ ಯೋಚಿಸಿದ್ದರೆ ಅದಕ್ಕೆ ನನ್ನ ಬೆಂಬಲವಿದೆ. ಆದರೆ ರಕ್ಷಣಾ ಪಡೆಗಳನ್ನು ಒಂದು ಪಕ್ಷದ ಹಿತಕ್ಕಾಗಿ ಬಳಸಲ್ಪಡದೇ ಇರುವಂತೆ ನೋಡಿಕೊಳ್ಳಬೇಕಾದ ಅಗತ್ಯವಿದೆ ಎಂದರು.