ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ತೆಲಂಗಾಣ ಬೇಕೇ ಬೇಕು, ಯಾವುದೇ ತ್ಯಾಗಕ್ಕೂ ಸಿದ್ಧ: ಟಿಎಸ್ಆರ್ (Telangana movement | P Chidambaram | K Chandrasekhar Rao | Srikrishna Committee)
ತೆಲಂಗಾಣ ಬೇಕೇ ಬೇಕು, ಯಾವುದೇ ತ್ಯಾಗಕ್ಕೂ ಸಿದ್ಧ: ಟಿಎಸ್ಆರ್
ಹೈದರಾಬಾದ್, ಶುಕ್ರವಾರ, 31 ಡಿಸೆಂಬರ್ 2010( 16:10 IST )
ಜಗತ್ತಿನ ಯಾವುದೇ ಶಕ್ತಿಯಿಂದ ತೆಲಂಗಾಣ ಹೋರಾಟವನ್ನು ತಡೆಯಲು ಸಾಧ್ಯವಿಲ್ಲ ಎಂದಿರುವ ತೆಲಂಗಾಣ ರಾಷ್ಟ್ರ ಸಮಿತಿ ಮುಖ್ಯಸ್ಥ ಚಂದ್ರಶೇಖರ ರಾವ್, ಪ್ರತ್ಯೇಕ ರಾಜ್ಯ ಸ್ಥಾಪನೆಯಾಗುವವರೆಗೂ ನಾವು ವಿಶ್ರಾಂತಿ ಪಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆಯಾಗದೆ ವಿರಾಮದ ಪ್ರಶ್ನೆಯೇ ಇಲ್ಲ. ಪ್ರತ್ಯೇಕ ರಾಜ್ಯವನ್ನು ಪಡೆದೇ ತೀರುವುದಾಗಿ ಹೇಳಿರುವ ಟಿಎಸ್ಆರ್‌ನ ಮುಖಂಡ ರಾವ್, ನಮ್ಮ ಹೋರಾಟವನ್ನು ತಡೆಯಲು ಈಗ ಭೂಮಿಯಲ್ಲಿರುವ ಯಾವುದೇ ಶಕ್ತಿಯಿಂದಲೂ ಅಸಾಧ್ಯ ಗುಡುಗಿದರು.
ಪ್ರತ್ಯೇಕ ರಾಜ್ಯದ ಬೇಡಿಕೆ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಿ, ಸಲಹೆ-ಸೂಚನೆಗಳನ್ನು ನೀಡಲು ಕೇಂದ್ರ ರೂಪಿಸಿದ್ದ ಶ್ರೀಕೃಷ್ಣ ಸಮಿತಿ, ತನ್ನ ವರದಿಯನ್ನು ಗೃಹ ಸಚಿವ ಪಿ.ಚಿದಂಬರಂ ಅವರಿಗೆ ನಿನ್ನೆಯಷ್ಟೇ ಸಲ್ಲಿಸಿತ್ತು.
2009ರ ಡಿಸೆಂಬರ್ 9ರಂದು ಚಿದಂಬರಂ ನೀಡಿದ ಹೇಳಿಕೆಯಂತೆ ಕೇಂದ್ರವು ತೆಲಂಗಾಣವನ್ನು ಪ್ರತ್ಯೇಕ ರಾಜ್ಯವೆಂದು ಘೋಷಿಸಬೇಕು ಎಂದು ರಾವ್ ಆಗ್ರಹಿಸಿದ್ದಾರೆ.
ಸಮಿತಿ ಯಾವುದೇ ಶಿಫಾರಸುಗಳನ್ನು ಮಾಡಲಿ, ಆದರೆ 2009ರ ಡಿಸೆಂಬರ್ 9ರಂದು ಕೇಂದ್ರವು ನೀಡಿದ್ದ ಹೇಳಿಕೆಯಂತೆ ನಡೆದುಕೊಳ್ಳಬೇಕು. ಪ್ರತ್ಯೇಕ ರಾಜ್ಯವನ್ನು ರಚಿಸಬೇಕು. ತೆಲಂಗಾಣದ ನಾಲ್ಕು ಕೋಟಿ ಜನರ ಪ್ರಜಾಪ್ರಭುತ್ವ ಅಭಿಲಾಷೆಯನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.
ಮುಂಬರುವ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆ ಸಂಬಂಧ ಮಸೂದೆಯನ್ನು ಮಂಡಿಸದೇ ಇದ್ದರೆ ಅದು ಕೇಂದ್ರ ಮಾಡುವ ಬಹುದೊಡ್ಡ ಪ್ರಮಾದವಾಗಿ ಪರಿಣಮಿಸಲಿದೆ ಎಂದೂ ಚಂದ್ರಶೇಖರ ರಾವ್ ಯಾವುದೇ ನಿರ್ದಿಷ್ಟ ವಿಚಾರವನ್ನು ಪ್ರಸ್ತಾಪಿಸದೆ ಬೆದರಿಕೆಯನ್ನೂ ಹಾಕಿದ್ದಾರೆ.
ಪ್ರತ್ಯೇಕ ತೆಲಂಗಾಣ ರಾಜ್ಯ ರಚಿಸಬೇಕು ಎಂದು ಒತ್ತಾಯಿಸಿ ಚಂದ್ರಶೇಖರ ರಾವ್ ಉಪವಾಸ ಸತ್ಯಾಗ್ರಹ ನಡೆಸಿದ್ದನ್ನು ಗಂಭೀರವಾಗಿ ಪರಿಗಣಿಸಿದ್ದ ಕೇಂದ್ರ ಸರಕಾರವು, ಬೇಡಿಕೆಗೆ ಅಸ್ತು ಎಂದಿತ್ತು. ಆದರೆ ಬಳಿಕ ವಿರೋಧಗಳು ಬಂದಾಗ, ತನ್ನ ಹೇಳಿಕೆಯಿಂದ ಹಿಂದಕ್ಕೆ ಸರಿದಿತ್ತು. ನಂತರದ ದಿನಗಳಲ್ಲಿ ತೆಲಂಗಾಣ ಪರ ಮತ್ತು ವಿರೋಧವಾಗಿ ಭಾರೀ ಪ್ರತಿಭಟನೆಗಳು ಆಂಧ್ರದ ಮೂರೂ ಪ್ರಾಂತ್ಯಗಳಲ್ಲಿ ನಡೆದಿದ್ದವು.