ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಶಾಂತಿ ನಿರೀಕ್ಷೆ! ಉಲ್ಫಾ ಚೀಫ್ ರಾಜ್‌ಖೋವಾ ಬಂಧಮುಕ್ತ (Arabinda Rajkhowa | ULFA chief | released | Government | Assam)
ಕಳೆದ ಒಂದು ವರ್ಷಗಳ ಕಾಲ ಜೈಲುವಾಸ ಅನುಭವಿಸಿದ ಉಲ್ಫಾ (ಯುನೈಟೆಡ್ ಲಿಬರೇಷನ್ ಫ್ರಂಟ್ ಆಫ್ ಅಸೋಮ್) ಸಂಘಟನೆಯ ವರಿಷ್ಠ ಅರವಿಂದ ರಾಜ್ ಖೋವಾ ಅವರನ್ನು ಶನಿವಾರ ಬಂಧಮುಕ್ತಗೊಳಿಸಲಾಗಿದೆ.
ಉಲ್ಫಾ ಸಂಘಟನೆ ಜತೆ ಶಾಂತಿ ಮಾತುಕತೆ ನಡೆಸುವ ಹಿನ್ನೆಲೆಯಲ್ಲಿ ರಾಜ್ ಖೋವಾ ವಿರುದ್ಧ ಯಾವುದೇ ಆಕ್ಷೇಪಣೆ ಸಲ್ಲಿಸುವುದಿಲ್ಲ ಎಂದು ಅಸ್ಸಾಂ ಸರಕಾರ ಮೇಲ್ಮನವಿ ಸಲ್ಲಿಸಿದ್ದು, ಅದರ ಪರಿಣಾಮವಾಗಿ ಗುರುವಾರ ಟಾಡಾ ನ್ಯಾಯಾಲಯ ರಾಜ್ ಖೋವಾಗೆ ಜಾಮೀನು ನೀಡಿತ್ತು.
'ನಾವು ಸರಕಾರದ ಜತೆ ಶಾಂತಿ ಮಾತುಕತೆ ನಡೆಸಲು ತಯಾರಿದ್ದೇವೆ. ಅಷ್ಟೇ ಅಲ್ಲ ಉಲ್ಫಾ ಸಂಘಟನೆ ಜತೆ ಯಾವುದೇ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಹೊಂದಿಲ್ಲ. ನಾವು ಯಾವುದೇ ನಿರ್ಧಾರ ಕೈಗೊಂಡರೂ ಅದರಿಂದ ಜನತೆಗೆ ಯಾವುದೇ ತೊಂದರೆ ಆಗಲಾರದು ಎಂಬ ವಿಶ್ವಾಸ ನಮ್ಮದಾಗಿದೆ. ಆ ನಿಟ್ಟಿನಲ್ಲಿ ಶಾಂತಿ ಮಾತುಕತೆ ಪ್ರಕ್ರಿಯೆಗೆ ನಾವು ಸಂಪೂರ್ಣವಾಗಿ ಸಿದ್ದರಾಗಿದ್ದೇವೆ ಎಂದು ಘೋಷಿಸುವುದಾಗಿ' ಗುವಾಹಟಿ ಸೆಂಟ್ರಲ್ ಜೈಲ್‌ನಿಂದ ಬಂಧಮುಕ್ತಗೊಂಡ ನಂತರ ರಾಜ್ ಖೋವಾ (54) ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ.
ಕಳೆದ ನವೆಂಬರ್ 30ರ ರಾತ್ರಿ ಬಾಂಗ್ಲಾದೇಶದ ಅಧಿಕಾರಿಗಳು ಢಾಕಾ ಸಮೀಪ ರಾಜ್‌ಖೋವಾ ಅವರನ್ನು ಬಂಧಿಸಿ, ಆನಂತರ ಭಾರತದ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದರು.
ಉಲ್ಫಾ ಜನ್ಮತಳೆದದ್ದು 1979ರಲ್ಲಿ. ಸಶಸ್ತ್ರ ಸಂಘರ್ಷದಲ್ಲಿ ನಂಬಿಕೆಯುಳ್ಳ ಅದು ಅಸ್ಸಾಂನ ಪ್ರತ್ಯೇಕ ಅಸ್ತಿತ್ವಕ್ಕಾಗಿ ರಕ್ತಪಾತ ನಡೆಸಿತ್ತು. 1990ರಲ್ಲಿ ಭಾರತ ಸರಕಾರದಿಂದ ನಿಷೇಧಕ್ಕೊಳಗಾಗಿ ಭಯೋತ್ಪಾದಕ ಸಂಘಟನೆ ಎನ್ನುವ ಹಣೆಪಟ್ಟಿ ಹಚ್ಚಿಕೊಂಡಿತ್ತು. ಬಂಡುಕೋರ ಸಂಘರ್ಷಣೆಯಲ್ಲಿ ಸುಮಾರು ಹತ್ತು ಸಾವಿರ ಮಂದಿ ಜೀವ ಕಳೆದುಕೊಂಡಿದ್ದರು. 1990ರಲ್ಲಿ ಉಲ್ಫಾ ವಿರುದ್ಧ ಆರಂಭವಾದ ಸೇನಾ ಕಾರ್ಯಾಚರಣೆ ಇನ್ನೂ ನಿಂತಿಲ್ಲ. ಈ ಕಾರ್ಯಾಚರಣೆ ಕಾರಣದಿಂದಲೇ ರಾಜ್‌ಖೋವಾ ಅಸ್ಸಾಂನಿಂದ ತಲೆಮರೆಸಿಕೊಂಡು ಮೊದಲಿಗೆ ಭೂತಾನ್‌ನಲ್ಲಿ ಅಡಗಿಕೊಂಡ. ಅಲ್ಲಿಯೂ ಕಾರ್ಯಾಚರಣೆ ತೀವ್ರಗೊಂಡಾಗ ಬರ್ಮಾಕ್ಕೆ, ಅಲ್ಲಿಂದ ಬಾಂಗ್ಲಾಕ್ಕೆ ಪಲಾಯನ ಮಾಡಿದ್ದ ರಾಜ್‌ಕೋವಾ ಢಾಕಾದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದ.
ಖೋವಾ ಇಂಟರ್‌ಪೋಲ್‌ಗೂ ಬೇಕಾದ ವ್ಯಕ್ತಿ. ಅಪಹರಣ, ಹತ್ಯೆ, ಕಾನೂನು ಬಾಹಿರ ವಲಸೆಯ ಆಪಾದನೆ ಖೋವಾ ಮೇಲಿತ್ತು. ನಕಲಿ ಪಾಸ್‌ಪೋರ್ಟ್ ಬಳಸಿ ಥಾಯ್ಲೆಂಡ್, ಭೂತಾನ್, ಪಾಕಿಸ್ತಾನ ಮುಂತಾದ ದೇಶಗಳಲ್ಲಿ ಸಂಚರಿಸಿದ್ದ. ಆದರೆ ಇದೀಗ ಅಸ್ಸಾಂ ಸರಕಾರವೇ ಶಾಂತಿ ಮಾತುಕತೆ ನಿಟ್ಟಿನಲ್ಲಿ ಖೋವಾನನ್ನು ಬಂಧಮುಕ್ತಗೊಳಿಸಿದೆ. ಇದು ಸಾಕಷ್ಟು ಚರ್ಚೆಗೆ ಎಡೆಮಾಡಿಕೊಟ್ಟಿದೆ.