ಇಲ್ಲಿನ ಕೋರ್‌ಬೆಟ್ಟ್ ನ್ಯಾಷನಲ್ ಪಾರ್ಕ್‌ನಲ್ಲಿರುವ ನರಭಕ್ಷಕ ಹುಲಿಯನ್ನು ಕಂಡಲ್ಲಿ ಗುಂಡಿಕ್ಕಿ ಕೊಲ್ಲುವಂತೆ ಉತ್ತರಖಂಡ್ ಅರಣ್ಯಾಧಿಕಾರಿಗಳು ಆದೇಶ ನೀಡಿದ್ದಾರೆ.
ನೆರೆಯ ಸುಂದೆರ್‌ಖಾಲ್ ಪ್ರದೇಶದ ಹಳ್ಳಿಯ ಸಮೀಪ ಇರುವ ಕೋರ್‌ಬೆಟ್ಟ್ ನ್ಯಾಷನಲ್ ಪಾರ್ಕ್‌ನಲ್ಲಿದ್ದ ಹುಲಿ ಕಳೆದ ತಿಂಗಳು ಮೂರು ಮಹಿಳೆಯರ ಮೇಲೆ ದಾಳಿ ನಡೆಸಿ ಕೊಂದು ತಿಂದಿತ್ತು.
ಈ ಘಟನೆಯ ನಂತರ ರೋಸಿ ಹೋದ ಗ್ರಾಮಸ್ಥರು, ಕೂಡಲೇ ಹುಲಿಯನ್ನು ಕೊಲ್ಲುವಂತೆ ತೀವ್ರ ಪ್ರತಿಭಟನೆ ನಡೆಸಿದ್ದರು. ಆ ನಿಟ್ಟಿನಲ್ಲಿ ಮುಂದಿನ 48 ಗಂಟೆಯೊಳಗೆ ಹುಲಿಯನ್ನು ಕೊಲ್ಲುವುದಾಗಿ ಅರಣ್ಯಾಧಿಕಾರಿಗಳು ಭರವಸೆ ನೀಡಿದ ನಂತರ ಗ್ರಾಮಸ್ಥರು ತಮ್ಮ ಪ್ರತಿಭಟನೆಯನ್ನು ಕೈಬಿಟ್ಟಿದ್ದರು.
ಇದೀಗ ನರಭಕ್ಷಕ ಹುಲಿಯನ್ನು ಕಂಡಲ್ಲಿ ಗುಂಡಿಕ್ಕಿ ಕೊಲ್ಲುವಂತೆ ಆದೇಶ ಹೊರಡಿಸಿದ್ದಾರೆ. ಏತನ್ಮಧ್ಯೆ ಪ್ರಾಣಿ ದಯಾ ಸಂಘಟನೆಯವರು ಹುಲಿಗೆ ಅರಿವಳಿಕೆ ಮದ್ದು ನೀಡಿ ಬೋನಿಗೆ ಹಾಕುವಂತೆ ಸಲಹೆ ನೀಡಿದ್ದಾರೆ. ವಿಪರ್ಯಾಸವೆಂದರೆ ನ್ಯಾಷನಲ್ ಪಾರ್ಕ್‌ನಲ್ಲಿ ಪಶುಸಂಗೋಪನಾ ವೈದ್ಯರೇ ಇಲ್ಲವಂತೆ. ಹಾಗಾಗಿ ಹುಲಿಯನ್ನು ಗುಂಡಿಕ್ಕಿ ಕೊಲ್ಲದೆ ಬೇರೆ ದಾರಿ ಇಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.