ದಲಿತ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪ ಎದುರಿಸುತ್ತಿರುವ ಬಿಎಸ್‌ಪಿ ಶಾಸಕನನ್ನು, ಮುಖ್ಯಮಂತ್ರಿ ಮಾಯಾವತಿ ಪಕ್ಷದಿಂದ ಅಮಾನತ್ತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಬಿಎಸ್‌ಪಿ ಶಾಸಕ ಪುರುಷೋತ್ತಮ್ ನರೈನ್ ದ್ವಿವೇದಿಯವರನ್ನು ಪಕ್ಷದಿಂದ ಅಮಾನತ್ತುಗೊಳಿಸಲಾಗಿದ್ದು, ಸಿಐಡಿ ವಿಭಾಗ ಪ್ರಕರಣದ ತನಿಖೆ ನಡೆಸುತ್ತಿದೆ. ಒಂದು ವೇಳೆ ತಪ್ಪಿತಸ್ಥ ಎಂದು ಸಾಬೀತಾದಲ್ಲಿ ಪಕ್ಷದಿಂದ ಉಚ್ಚಾಟಿಸಲಾಗುವುದು ಎಂದು ಮುಖ್ಯಮಂತ್ರಿ ಮಾಯಾವತಿ ತಿಳಿಸಿದ್ದಾರೆ.
ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿರುವ ವ್ಯಕ್ತಿ ಪಕ್ಷದ ಯಾವುದೇ ಹುದ್ದೆಯಲ್ಲಿದ್ದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟ ಸಂದೇಶ ಸಾರಿದ್ದಾರೆ.
ಶನಿವಾರದಂದು ಮುಖ್ಯಮಂತ್ರಿ ಮಾಯಾವತಿ, ದ್ವಿವೇದಿ ಹಾಗೂ ಅವರ ಬೆಂಬಲಿಗರು ದಲಿತ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರವೆಸಗಿದ ಘಟನೆ ಕುರಿತಂತೆ ಸಿಐಡಿ ತನಿಖೆಗೆ ಆದೇಶಿಸಿದ್ದರು.
ಶಾಸಕ ದ್ವಿವೇದಿ ಮತ್ತು ಅವರ ಬೆಂಬಲಿಗರು ನನ್ನ ಮೇಲೆ ಅತ್ಯಾಚಾರವೆಸಗಿದ್ದಲ್ಲದೇ, ಸುಳ್ಳು ಕಳ್ಳತನ ಪ್ರಕರಣದ ಆರೋಪ ಹೊರಿಸಿ ಜೈಲಿಗೆ ತಳ್ಳಿದ್ದಾರೆ ಎಂದು ಅತ್ಯಾಚಾರಕ್ಕೊಳಗಾದ ಬಾಲಕಿ ಮಾಹಿತಿ ನೀಡಿದ್ದಾಳೆ.
ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷೆ ರೀಟಾ ಬಹುಗುಣ್ ಜೋಷಿ ಮತ್ತು ಸಮಾಜವಾದಿ ಪಕ್ಷದ ಅಧ್ಯಕ್ಷ ಮುಲಾಯಂ ಸಿಂಗ್, ಸರಕಾರ ಅಪರಾಧಿಗಳನ್ನು ರಕ್ಷಿಸುತ್ತಿದೆ ಎಂದು ಆರೋಪಿಸಿದ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಮಾಯಾವತಿ ಶಾಸಕನ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡಿದ್ದಾರೆ.
ಹಿನ್ನೆಲೆ:
ಬಂಡ ಜಿಲ್ಲೆಯ ನರೇನಿ ಕ್ಷೇತ್ರದ ಬಿಎಸ್‌ಪಿ ಶಾಸಕ ದ್ವಿವೇದಿ, ದಲಿತ ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರವೆಸಗಿದ್ದಲ್ಲದೇ ಸುಳ್ಳು ಕಳ್ಳತನ ಪ್ರಕರಣ ದಾಖಲಿಸಿ ಆಕೆಯನ್ನೇ ಜೈಲಿಗೆ ತಳ್ಳಿದ ಘಟನೆ ಉತ್ತರ ಪ್ರದೇಶದ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಸಿದೆ.
ಜನಪ್ರತಿನಿಧಿಗಳೆಂದರೆ ಜನರ ಹಿತಕ್ಕಾಗಿ ಸೇವೆ ಮಾಡಬೇಕಾದವರು. ಅದು ಹಳೆಯ ಮಾತು. ಈಗ ಅನಾಚಾರ ಮಾಡುವುದು, ದೋಚುವುದೇ ರಾಜಕಾರಣ ಎನ್ನುವುದು ಜಾರಿಯಲ್ಲಿರುವ ಹೊತ್ತು. ಈ ಪ್ರಕರಣವೂ ಅದೇ ಸಾಲಿಗೆ ಸೇರಿದ್ದಾಗಿದೆ. ದಲಿತ ಅಪ್ರಾಪ್ತ ಬಾಲಕಿಯೊಬ್ಬಳನ್ನು ಅತ್ಯಾಚಾರ ಮಾಡಿದ್ದಲ್ಲದೆ, ಸುಳ್ಳು ಪ್ರಕರಣದಲ್ಲಿ ಜೈಲಿಗೂ ತಳ್ಳಿದ್ದಾನೆ ಶಾಸಕ ಮಹಾಶಯ!
ಕೆಲವು ದಿನಗಳ ಹಿಂದೆ ತನ್ನ ತಂದೆಯನ್ನು ತೀವ್ರವಾಗಿ ಹೆದರಿಸಿ, ತನ್ನನ್ನು ಬೇರೆಯವರಿಗೆ ಮಾರಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷನ ಬಿಗಿ ಹಿಡಿತದಿಂದ ಪಾರಾಗಲು, ಶಾಸಕನ ಸಹಾಯ ಯಾಚಿಸಿದ ಬಾಲಕಿ, ಮನವಿ ಪತ್ರದೊಂದಿಗೆ ತೆರಳಿದಾಗ ಈ ಘಟನೆ ನಡೆಯಿತು.
ಇದು ಆಡಳಿತಾರೂಢ ಬಿಎಸ್‌ಪಿಯ (ಮುಖ್ಯಮಂತ್ರಿ ಮಾಯಾವತಿ ಪಕ್ಷ) ಶಾಸಕ ಪುರುಷೋತ್ತಮ್ ನಾರಾಯಣ್ ದ್ವಿವೇದಿ ಎಂಬಾತನ ಕೃತ್ಯ. ಅತ್ಯಾಚಾರ ಎಸಗಿದ ನಂತರ, ತನ್ನ ಮನೆಯಿಂದ ಕಳ್ಳತನ ಮಾಡಿದ್ದಾಳೆ ಎಂದು ಆರೋಪಿಸಿ ಆಕೆಯನ್ನೇ ಜೈಲಿಗೆ ತಳ್ಳಿಸಿದ ಅಮಾನವೀಯ ಘಟನೆ ಉತ್ತರ ಪ್ರದೇಶದ ಬಂಡ ಜಿಲ್ಲೆಯಲ್ಲಿ ನಡೆದಿದೆ.
ಈ ಬಗ್ಗೆ ದೂರು ನೀಡಲು ಯತ್ನಿಸಿದಾಗ ಶಾಸಕರ ಗೂಂಡಾಗಳು ಬಡಿದರು. ಮತ್ತು ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಜೈಲಿನಲ್ಲಿಯೇ ಮಟ್ಟಹಾಕುವುದಾಗಿಯೂ ಬೆದರಿಸಿದ್ದರು ಎಂದು ಅತ್ಯಾಚಾರಕ್ಕೊಳಗಾದ ಬಾಲಕಿ ಆರೋಪಿಸಿದ್ದಾಳೆ.
ಆದರೆ, ಈ ಎಲ್ಲ ಆರೋಪಗಳನ್ನು ತಳ್ಳಿಹಾಕಿ, ನಾನೇನೂ ಮಾಡಿಲ್ಲ ಎಂದಿರುವ ಶಾಸಕ ದ್ವಿವೇದಿ, ಆ ಹುಡುಗಿ ತನ್ನ ಮನೆಯಿಂದ ಬಟ್ಟೆ ಮತ್ತು ಹಣ ದೋಚಿಕೊಂಡು ಹೋಗಿದ್ದಾಳೆ. ಮತ್ತು ಇದೆಲ್ಲ ತನ್ನ ಜನಪ್ರಿಯತೆಯ ಮೇಲೆ ಮಸಿ ಬಳಿಯಲು ರಾಜಕೀಯ ವಿರೋಧಿಗಳ ಕುತಂತ್ರ ಎಂದಿದ್ದಾರೆ.
ಈ ಬಗ್ಗೆ ಕೇಸು ದಾಖಲಿಸಿರುವ ಸ್ಥಳೀಯ ಮಹಿಳಾ ಸಂಘಟನೆ, ಆರೋಪಿಯನ್ನು ಕೂಡಲೇ ಬಂಧಿಸಬೇಕೆಂದು ಅನಿರ್ದಿಷ್ಟ ಉಪವಾಸ ಕೈಗೊಂಡಿದೆ. ಪ್ರಕರಣವನ್ನು ಎತ್ತಿಹಿಡಿದಿರುವ ಪ್ರತಿಪಕ್ಷ ಕಾಂಗ್ರೆಸ್‌ನ ಅಧ್ಯಕ್ಷೆ ರೀಟಾ ಬಹುಗುಣ ಜೋಶಿ, ಬಾಲಕಿಯನ್ನು ಭೇಟಿಮಾಡಲು ಮುಂದಾಗಿದ್ದಾರೆ.